ADVERTISEMENT

ಮೀನಿನ ಬಲೆಗೆ ಬಿದ್ದವು 22 ಮೊಸಳೆ ಮರಿಗಳು

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 19:30 IST
Last Updated 10 ಜೂನ್ 2017, 19:30 IST
ಅಥಣಿ ತಾಲ್ಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯಲ್ಲಿ ಮೀನುಗಾರರ ಬಲೆಗೆ ಸಿಕ್ಕ ಮೊಸಳೆ ಮರಿಗಳು
ಅಥಣಿ ತಾಲ್ಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯಲ್ಲಿ ಮೀನುಗಾರರ ಬಲೆಗೆ ಸಿಕ್ಕ ಮೊಸಳೆ ಮರಿಗಳು   

ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯಲ್ಲಿ ಶನಿವಾರ ಮೀನುಗಾರರ ಬಲೆಗೆ 22 ಮೊಸಳೆ ಮರಿಗಳು ಮತ್ತು 6 ಮೊಟ್ಟೆಗಳು ಬಿದ್ದಿವೆ.

ಬೆಳಿಗ್ಗೆ ಗ್ರಾಮದ ಮೀನುಗಾರರಾದ ಬಾಹುಬಲಿ ಕಾರೆ ಮತ್ತು ಲಕ್ಷ್ಮಣ ಡೋಕರಿ ಅವರು ಮೀನು ಹಿಡಿಯಲೆಂದು ಬಲೆ ಹಾಕಿದ್ದರು. ಆದರೆ ಅದರಲ್ಲಿ ಮೀನುಗಳ ಬದಲಾಗಿ ಮೊಸಳೆ ಮರಿ ಹಾಗೂ ಮೊಟ್ಟೆಗಳನ್ನು ಕಂಡು ಗಾಬರಿಯಾದರು. ಆ ಬಳಿಕ ಅಥಣಿ ವಲಯ ಅರಣ್ಯಾಧಿಕಾರಿಗಳ ಸುಪರ್ದಿಗೆ ನೀಡಿದರು.

ಇತ್ತಿಚಿನ ದಿನಗಳಲ್ಲಿ ಕೃಷ್ಣಾ ನದಿಯಲ್ಲಿ ಆಗಾಗ ಮೊಸಳೆಗಳು ಕಾಣಿಸುತ್ತಿದ್ದು, ಹುಲಗಬಾಳ, ಹಲ್ಯಾಳ, ದರೂರ, ಅವರಖೋಡ, ಸತ್ತಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮರಿಗಳು ಮತ್ತು ಮೊಟ್ಟೆಗಳನ್ನು ಕಳೆದುಕೊಂಡ ತಾಯಿ ಮೊಸಳೆ ದಾಳಿ ಮಾಡಬಹುದು ಎಂಬ ಭೀತಿಯಲ್ಲಿದ್ದಾರೆ.

ADVERTISEMENT

‘ಮೊಸಳೆಗಳು ಸದಾಕಾಲ ಜಾಗ ಬದಲಿಸುತ್ತವೆ. ನದಿಯಲ್ಲಿ ಮೊಸಳೆ ಹಿಡಿಯುವುದು ಕಷ್ಟದ ಕೆಲಸ. ನದಿ ತೀರದ ಗ್ರಾಮಸ್ಥರು ಜಾಗರೂಕರಾಗಿರಬೇಕು’ ಎಂದು ಸಲಹೆ ನೀಡಿರುವ ವಲಯ ಅರಣ್ಯಾಧಿಕಾರಿ ರಾಜೇಶ್ವರಿ ಈರನಟ್ಟಿ, ಮೊಸಳೆಗಳು ಕಂಡು
ಬಂದರೆ ತಕ್ಷಣವೇ ಅಥಣಿ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ತಿಳಿಸುವಂತೆ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.