ಬೆಂಗಳೂರು: ಮೀನುಗಾರಿಕೆ ಇಲಾಖೆ ವಿವಿಧ ಚಟುವಟಿಕೆಗಳಿಗಾಗಿ 215 ಕೋಟಿ ಅನುದಾನ ಒದಗಿಸಲಾಗಿದೆ. ರಾಜ್ಯದಲ್ಲಿ ಮೀನು ಮರಿ ಬೇಡಿಕೆಯನ್ನು ಪೂರೈಸಲು ಮೀನುಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣಕ್ಕೆ 10 ಕೋಟಿ ಸಹಾಯಧನ ಒದಗಿಸಲಾಗುತ್ತದೆ.
ನಿರ್ವಸತಿ ಮೀನುಗಾರರಿಗೆ 4000 ಮನೆಗಳನ್ನು ನಿರ್ಮಿಸಲು 24 ಕೋಟಿ ರೂ. ಅನುದಾನ ಒದಗಿಸಲು ಸರ್ಕಾರ ನಿರ್ಧರಿಸಿದೆ. ಯಾಂತ್ರೀಕೃತ ಮೀನುಗಾರಿಕೆ ದೋಣಿಗಳು ಬಳಸುವ ರಾಜ್ಯ ಮಾರಾಟ ಕರ ರಹಿತ ಡೀಸೆಲ್‌ಗೆ ಹೆಚ್ಚಿನ ಬೇಡಿಕೆಯಿದ್ದು, ಈ ಪ್ರಮಾಣವನ್ನು 1.25 ಲಕ್ಷ ಕಿಲೋ ಲೀಟರ್‌ಗೆ ಏರಿಸಲಾಗುತ್ತದೆ.
30 ಸಾವಿರ ಮೀನುಗಾರರಿಗೆ ಜೀವ ರಕ್ಷಣೆಗಾಗಿ 1,500 ರೂಪಾಯಿ ಮೌಲ್ಯದ ಜೀವರಕ್ಷಕ ಜಾಕೆಟ್ ಒದಗಿಸಲು 4.5 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಆರು ಸಾವಿರ ಮಹಿಳಾ ಮೀನುಗಾರರಿಗೆ 4 ಸಾವಿರ ರೂಪಾಯಿ ಮೌಲ್ಯದ ಶಾಖ ನಿರೋಧಕ ಪೆಟ್ಟಿಗೆಗಳನ್ನು ನೀಡಲು ನಿರ್ಧರಿಸಲಾಗಿದೆ.
ಓಷನೇರಿಯಂಗಳ ನಿರ್ಮಾಣ: ಕೆ.ಆರ್.ಎಸ್. ಬೃಂದಾವನ ಮತ್ತು ಮಂಗಳೂರಿನ ಪಿಲಿಕುಳದಲ್ಲಿ ಅಂತರರಾಷ್ಟ್ರೀಯ ಮಟ್ಟದ ಓಷನೇರಿಯಂಗಳನ್ನು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು.
ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿ ಇಳಿದಾಣ ಕೇಂದ್ರದ 2ನೇ ಹಂತದ ಅಭಿವೃದ್ಧಿಗೆ ರೂ. 60 ಕೋಟಿ ಹೂಡಿಕೆಗಾಗಿ ಅವಶ್ಯವಿರುವ 26 ಕೋಟಿ ಯನ್ನು ಸರ್ಕಾರ ಒದಗಿಸಲಿದೆ.
ರೇಷ್ಮೆ ಇಲಾಖೆಗೆ 293 ಕೋಟಿ: ರೇಷ್ಮೆ ಇಲಾಖೆಯ ವಿವಿಧ ಚಟುವಟಿಕೆಗಳಿಗಾಗಿ ಒಟ್ಟು 293 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ. 2012-13ನೇ ಸಾಲಿನಲ್ಲಿ 50 ಸಾವಿರ ಎಕರೆ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಹಿಪ್ಪುನೇರಳೆ ಬೆಳೆಯಲು ಉದ್ದೇಶಿಸಲಾಗಿದ್ದು, 12 ಕೋಟಿ ರೇಷ್ಮೆ ಮೊಟ್ಟೆ ಉತ್ಪಾದಿಸುವ ಗುರಿ ಹಾಕಿಕೊಳ್ಳಲಾಗಿದೆ. ಅಲ್ಲದೆ, 64,600 ಮೆಟ್ರಿಕ್ ಟನ್ ಗೂಡು ಉತ್ಪಾದನೆ ಗುರಿ ಹೊಂದಲಾಗಿದೆ.
ಪ್ರೋತ್ಸಾಹಧನ: ಗುಣಮಟ್ಟದ ಆಧಾರದ ಮೇಲೆ ನೂರು ಮೊಟ್ಟೆಗೆ 60 ಕೆ.ಜಿ.ಗಿಂತ ಹೆಚ್ಚಿನ ಇಳುವರಿ ಪಡೆಯುವ ಮಿಶ್ರತಳಿ ಗೂಡನ್ನು ಬೆಳೆಯುವ ಬೆಳೆಗಾರರಿಗೆ ಪ್ರತಿ ಕೆ.ಜಿ.ಗೆ ರೂ. 10 ಹಾಗೂ ದ್ವಿತಳಿ ಸಂಕರಣ ತಳಿ ಗೂಡು ಉತ್ಪಾದಿಸುವ ಬೆಳೆಗಾರರಿಗೆ ಪ್ರತಿ ಕೆ.ಜಿ.ಗೆ 40 ರೂ. ನಂತೆ ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ 35 ಕೋಟಿ ವಿನಿಯೋಗಿಸಲಾಗುತ್ತದೆ.
ರಾಜ್ಯದಲ್ಲಿನ 7,430 ರೇಷ್ಮೆ ನೂಲು ಬಿಚ್ಚುವ ಘಟಕಗಳಲ್ಲಿ ಉಪಯೋಗಿಸುವ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ ರೂ. 1.50 ಸಹಾಯಧನ ನೀಡಲಾಗುತ್ತದೆ. ಬಿಚ್ಚಾಣಿಕೆ ನೂಲುಗಾರರು ಯಾವುದೇ ವಿಳಂಬವಿಲ್ಲದೆ ಸಾಲ ಮರು ಪಾವತಿಸಿದಲ್ಲಿ ಅವರು ಪಡೆದ ಒಂದು ಲಕ್ಷ ರೂವರೆಗಿನ ದುಡಿಯುವ ಬಂಡವಾಳ ಸಾಲದ ಮೇಲೆ ಶೇ 6ರ ದರದಲ್ಲಿ ಬಡ್ಡಿ ಸಹಾಯಧನ ಒದಗಿಸಲಾಗುವುದು.
ನೂಲು ಬಿಚ್ಚಾಣಿಕೆ ಉಪಕರಣಗಳ ಮೇಲೆ ಮಾಡಿದ ಯಾವುದೇ ಹೊಸ ಬಂಡವಾಳಕ್ಕೆ ಶೇ 25ರವರೆಗಿನ ಬಂಡವಾಳ ಸಹಾಯಧನವನ್ನು 50 ಸಾವಿರ ರೂಪಾಯಿಗಳಿಗೆ ಸೀಮಿತಗೊಳಿಸಿ ಒದಗಿಸಲು ಸರ್ಕಾರ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.