ADVERTISEMENT

ಮುಂಗಾರಿನತ್ತ ಅನ್ನದಾತನ ನೋಟ

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 19:30 IST
Last Updated 15 ಜೂನ್ 2012, 19:30 IST
ಮುಂಗಾರಿನತ್ತ ಅನ್ನದಾತನ ನೋಟ
ಮುಂಗಾರಿನತ್ತ ಅನ್ನದಾತನ ನೋಟ   

ಬೆಂಗಳೂರು: ನೈರುತ್ಯ ಮುಂಗಾರು ದುರ್ಬಲವಾಗಿರುವ ಕಾರಣ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಚುರುಕುಗೊಳ್ಳುವುದು ಯಾವಾಗ ಎಂಬ ಪ್ರಶ್ನೆಯೊಂದಿಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಸಿ) ಸಹಾಯವಾಣಿಗೆ ದಿನಕ್ಕೆ ಕನಿಷ್ಠ 300 ದೂರವಾಣಿ ಕರೆಗಳು ಬರುತ್ತಿವೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮುಂಗಾರು ಮಳೆ ರಾಜ್ಯದ ಒಳನಾಡಿನಲ್ಲೂ ಚುರುಕುಗೊಳ್ಳಲಿದೆ. ಆದರೆ ಕೆಎಸ್‌ಎನ್‌ಡಿಸಿ ಪ್ರಕಾರ ಕರಾವಳಿಯಲ್ಲಿ ಚದುರಿದಂತೆ ಮಳೆಯಾಗಬಹುದೇ ವಿನಾ, ರಾಜ್ಯದ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಗಳು ಇಲ್ಲ. ಉಪಗ್ರಹಗಳಿಂದ ಪಡೆದ ಚಿತ್ರಗಳು ಹೇಳುವಂತೆ, ಕರಾವಳಿ ಪ್ರದೇಶಗಳಲ್ಲೂ ಮೋಡಗಳು ದಟ್ಟೈಸಿಲ್ಲ.

ಹವಾಮಾನ ಇಲಾಖೆಯ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿ ಅನ್ವಯ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಆಗಿಲ್ಲ. ಆದರೆ ಮುಂದಿನ ನಾಲ್ಕೈದು ದಿನಗಳಲ್ಲಿ ಮುಂಗಾರು ಮಾರುತ ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಬಿ. ಪುಟ್ಟಣ್ಣ ತಿಳಿಸಿದರು. ಉಷ್ಣವಲಯದ ರಾಷ್ಟ್ರಗಳಲ್ಲಿ ಮುಂಗಾರು ಮಳೆ ಅನಿಶ್ಚಿತವಾಗುವುದು ಹೊಸದಲ್ಲ. ಮುಂಗಾರು ಇದೇ 5ರಂದು ರಾಜ್ಯ ಪ್ರವೇಶಿಸಿದೆ. ಆದರೆ ಅದು ಇಡೀ ರಾಜ್ಯವನ್ನು ವ್ಯಾಪಿಸಿಲ್ಲ ಎಂದು ಅವರು ವಿವರಿಸಿದರು.

`ರೈತರು ನಿರೀಕ್ಷಿಸಿದ ಸಮಯಕ್ಕೆ ಮಳೆ ಬಂದಿಲ್ಲ. ರೋಹಿಣಿ ನಕ್ಷತ್ರದ ಅವಧಿಯಲ್ಲಿ (ಏಪ್ರಿಲ್ 27ರಿಂದ ಮೇ 10) ಉಳುಮೆಗೆ ಭೂಮಿಯನ್ನು ಸಿದ್ಧಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಳೆ ಆಗಲಿಲ್ಲ. ಹಾಗೆಯೇ, ಕೃತ್ತಿಕಾ ನಕ್ಷತ್ರದ ಅವಧಿಯಲ್ಲೂ (ಮೇ 11ರಿಂದ 24) ಮಳೆ ಆಗಲಿಲ್ಲ. ನಕ್ಷತ್ರಗಳ ಚಲನೆಯ ಆಧಾರದಲ್ಲಿ ಕೃಷಿ ಚಟುವಟಿಕೆಗಳನ್ನು ನಿರ್ಧರಿಸುವ ನಾಡಿನ ರೈತರು, ಮಳೆ ಸಮಯಕ್ಕೆ ಸರಿಯಾಗಿ ಆಗದಿದ್ದಾಗ ಆತಂಕಕ್ಕೆ ಒಳಗಾಗುತ್ತಾರೆ~ ಎಂದು ಕೆಎಸ್‌ಎನ್‌ಡಿಸಿ ನಿರ್ದೇಶಕ ವಿ.ಎಸ್. ಪ್ರಕಾಶ್ ಹೇಳಿದರು.

`ನಾವು ಆರಂಭಿಸಿರುವ ಸಹಾಯವಾಣಿಗೆ (ದೂರವಾಣಿ ಸಂಖ್ಯೆ: 22745232, 22745234) ಉತ್ತರ ಕರ್ನಾಟಕ ಭಾಗದ ರೈತರಿಂದ ಹೆಚ್ಚಿನ ಕರೆಗಳು ಬರುತ್ತಿವೆ. ಮಳೆ ಬರುವ ಸಾಧ್ಯತೆ ಇದೆಯೇ, ಕೃಷಿ ಚಟುವಟಿಕೆ ಕೈಗೆತ್ತಿಕೊಳ್ಳಬಹುದೇ ಎಂಬ ಪ್ರಶ್ನೆಗಳನ್ನು ಅವರು ಮುಂದಿಡುತ್ತಿದ್ದಾರೆ. ಕನಿಷ್ಠ ಪಕ್ಷ ಒಣಭೂಮಿ ಬೇಸಾಯವನ್ನಾದರೂ ಕೈಗೆತ್ತಿಕೊಳ್ಳಬಹುದೇ ಎಂಬ ಪ್ರಶ್ನೆಗಳೂ ಎದುರಾಗುತ್ತಿವೆ.

ಆದರೆ ಇವುಗಳಲ್ಲಿ ಯಾವುದೇ ಚಟುವಟಿಕೆಯನ್ನೂ ಕೈಗೆತ್ತಿಕೊಳ್ಳದಂತೆ ಸೂಚನೆ ನೀಡುತ್ತಿದ್ದೇವೆ. ಯಾವಾಗ ಮಳೆಯಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲು ನಮಗೂ ಸಾಧ್ಯವಾಗುತ್ತಿಲ್ಲ. ಮಳೆ ಬಾರದಿದ್ದರೆ, ಬಿತ್ತಿದ ಬೀಜ ಹಾಗೂ ಗೊಬ್ಬರಗಳೆರಡೂ ಹಾಳಾಗುತ್ತವೆ. ನಮ್ಮ ಸಲಹೆ ಆಧರಿಸಿ ಕನಿಷ್ಠ ಎರಡು ಲಕ್ಷ ಎಕರೆ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಿಂತಿರಬಹುದು~ ಎಂದು ಪ್ರಕಾಶ್ ಮಾಹಿತಿ ನೀಡಿದರು.

`ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ತಮ್ಮ ಬಳಿ ಸಾಕಷ್ಟಿದೆ. ಆದರೆ ಮಳೆಗಾಗಿ ಕಾಯುತ್ತಿದ್ದೇವೆ ಎಂದು ರೈತರು ಹೇಳುತ್ತಿದ್ದಾರೆ. ಈಗಿನ ಸ್ಥಿತಿಯಲ್ಲಿ ಮುಂಗಾರು ಚುರುಕುಗೊಳ್ಳುವುದು ಅನುಮಾನ. ನಾಲ್ಕೈದು ದಿನಗಳ ನಂತರವೂ ಚದುರಿದಂತೆ ಮಳೆಯಾಗಲಿದೆ~ ಎಂದು ಅವರು ಹೇಳಿದರು.

`ಮಳೆ ವಿಳಂಬದ ಕಾರಣ ರಾಜ್ಯದೆಲ್ಲೆಡೆ ಭೀಕರ ಸ್ಥಿತಿ ನಿರ್ಮಾಣವಾಗಿದೆ. ಕರಾವಳಿ ಪ್ರದೇಶದಲ್ಲೂ ಹೇಳಿಕೊಳ್ಳುವಂಥ ಪ್ರಮಾಣದಲ್ಲಿ ಮಳೆ ಬಿದ್ದಿಲ್ಲ. ಮಳೆ ಬಾರದ ಕಾರಣ ಉಂಟಾಗಿರುವ ಸ್ಥಿತಿ ಪರಿಶೀಲನೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು ಶುಕ್ರವಾರ ಸಭೆ ನಡೆಸಿದ್ದಾರೆ.

ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಆಹಾರ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ನಾವು ನಿಗಾ ವಹಿಸಿದ್ದೇವೆ. ಇನ್ನೂ ಐದಾರು ದಿನ ಹೇಳಿಕೊಳ್ಳುವಂಥ ಮಳೆ ಬೀಳುವುದಿಲ್ಲ ಎಂಬ ಮಾಹಿತಿ ನಮ್ಮಲ್ಲಿದೆ~ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಕೆ. ಅಮರನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.