ADVERTISEMENT

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪ್ರಮಾಣ ವಚನ

ಶಕ್ತಿಕೇಂದ್ರದಲ್ಲಿ ಕುಮಾರ ಪರ್ವ ಆರಂಭ

​ಪ್ರಜಾವಾಣಿ ವಾರ್ತೆ
Published 23 ಮೇ 2018, 11:53 IST
Last Updated 23 ಮೇ 2018, 11:53 IST
ರಾಜ್ಯದ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು
ರಾಜ್ಯದ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು   

ಬೆಂಗಳೂರು: ವಿಧಾನಸಭೆ ಚುನಾವಣೆಯ ನಂತರ ಬಹುಕಾಲದಿಂದ ಚಾಲ್ತಿಯಲ್ಲಿದ್ದ ಹತ್ತಾರು ಗೊಂದಲಗಳು ಮತ್ತು ಲೆಕ್ಕಾಚಾರಕ್ಕೆ ಬುಧವಾರ ಸಂಜೆ 4.30ಕ್ಕೆ ದೇವರು ಮತ್ತು ಕನ್ನಡ ನಾಡಿನ ಜನರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎಚ್‌.ಡಿ.ಕುಮಾರಸ್ವಾಮಿ ತೆರೆ ಎಳೆದರು.

ಕೊರಟಗೆರೆ ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. ವಿವಿಧ ರಾಜ್ಯಗಳ ತೃತೀಯ ರಂಗದ ನಾಯಕರು ಪರಸ್ಪರ ಕೈಕುಲುಕುವ ಮೂಲಕ ಬಿಜೆಪಿ ವಿರುದ್ಧದ ಮಹಾಮೈತ್ರಿಯ ಅಲೆಯ ಸ್ಪಷ್ಟ ಸೂಚನೆ ನೀಡಿದರು.

ADVERTISEMENT

ಮುಂಜಾನೆಯಿಂದಲೂ ನಗರದಲ್ಲಿ ಮಳೆ ಸುರಿಯುತ್ತಲೇ ಇತ್ತು. ನೆಚ್ಚಿನ ನಾಯಕನ ಅಧಿಕಾರ ಸ್ವೀಕಾರ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಲಕ್ಷಾಂತರ ಜನರಿಗೆ ಮಳೆಹನಿಗಳ ಸಿಂಚನವೂ ಉತ್ಸಾಹ ಹೆಚ್ಚಿಸಿತು.

ಜೆ.ಪಿ.ನಗರದಿಂದ ವಿಧಾನಸೌಧದತ್ತ ಹೊರಟ ಕುಮಾರಸ್ವಾಮಿ ಮಳೆಯನ್ನು ಸ್ವಾಗತಿಸಿದ್ದರು. ‘ದೇವರ ಆಶೀರ್ವಾದ ನಮಗಿದೆ. ನಾಡಿನಲ್ಲಿ ಮುಂದೆ ಒಳ್ಳೆಯದು ಆಗಲಿದೆ ಎಂಬುದರ ಸೂಚಕ ಇದು’ ಎಂದು ಖುಷಿ ತುಳುಕಿಸುತ್ತಲೇ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಜೊತೆಗೂಡಿ ಕಾರು ಹತ್ತಿದ್ದರು. ದೇವೇಗೌಡರು ಪತ್ನಿ ಚೆನ್ನಮ್ಮ ಮತ್ತು ಕುಟುಂಬದ ಇತರ ಸದಸ್ಯರ ಜೊತೆಗೂಡಿ ವಿಧಾನಸೌಧಕ್ಕೆ ಬಂದರು.

ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ನಗುನಗುತ್ತಾ ದೇವೇಗೌಡರನ್ನು ಎದುರುಗೊಂಡು ಮಾತನಾಡಿದ್ದು ಎದ್ದು ಕಂಡಿತು. ತಮ್ಮತಮ್ಮ ರಾಜ್ಯಗಳಲ್ಲಿ ಬದ್ಧ ವೈರಿಗಳಾಗಿರುವ ಅನೇಕರು ವಿಧಾನಸೌಧದ ಎದುರು ಕೈಕುಲುಕಿ ಬಿಜೆಪಿ ವಿರುದ್ಧ ಮಹಾಮೈತ್ರಿಯ ಸ್ಪಷ್ಟ ಮುನ್ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಹಿರಿಯ ನಾಯಕಿ ಸೋನಿಯಾ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಬಿಎಸ್‌ಪಿ ನಾಯಕಿ ಮಾಯಾವತಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶರದ್‌ ಯಾದವ್‌, ಗುಲಾಬ್‌ ನಬೀ ಅಜಾದ್‌, ಚಂದ್ರಬಾಬು ನಾಯ್ಡು, ಸೀತಾರಾಂ ಯೆಚೂರಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಪಾಲ್ಗೊಂಡಿದ್ದರು.

ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ‘ಅಧಿಕಾರ ಸೂತ್ರ’ ಕೈಗೆತ್ತಿಗೊಳ್ಳುವ ಸಂಭ್ರಮಕ್ಕೆ ದೇಶದ ತೃತೀಯ ರಂಗ ಸಾಕ್ಷಿಯಾಯಿತು.

ಮಧ್ಯಾಹ್ನದಿಂದಲೇ ಮೆಟ್ರೊ ರೈಲುಗಳು ತುಂಬಿ ತುಳುಕುತ್ತಿದ್ದವು. ಸಮಾರಂಭ ಮುಗಿದ ನಂತರ ಅಭಿಮಾನಿಗಳು ನೆಚ್ಚಿನ ನಾಯಕನ ಫ್ಲೆಕ್ಸ್‌ಗಳನ್ನು ಖುಷಿಯಿಂದ ಹೊತ್ತುಕೊಂಡು ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.