ADVERTISEMENT

ಮುಖ್ಯಮಂತ್ರಿ ರಾಜೀನಾಮೆಗೆ ಸಿಪಿಐ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭ್ರಷ್ಟಚಾರದಲ್ಲಿ ತೊಡಗಿದ್ದು, ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷ  (ಸಿಪಿಐ)ದ ರಾಷ್ಟ್ರೀಯ   ಉಪ ಪ್ರಧಾನ ಕಾರ್ಯದರ್ಶಿ ಎಸ್.ಸುಧಾಕರ ರೆಡ್ಡಿ ಅಗ್ರಹಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ    ಮಾತನಾಡಿದ ಅವರು ‘ಯಡಿಯೂರಪ್ಪ ಮತ್ತು ಕುಟುಂಬದವರು ಮಾಡಿರುವ ಹಲವಾರು ಹಗರಣಗಳು ಕಣ್ಮುಂದೆಯೇ ಕಾಣುತ್ತಿವೆ. ಹುದ್ದೆಯ ಮೇಲಿನ ವ್ಯಾಮೋಹದಿಂದ ಅವರು ಮೊಂಡುತನ ಮಾಡುತ್ತಿದ್ದಾರೆ. ಧೈರ್ಯವಿದ್ದರೆ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಸಿಬಿಐ ತನಿಖೆಗೆ ಸಿದ್ದರಾಗಲಿ. ತನಿಖೆಯಿಂದ ನಿರಪರಾಧಿ ಎಂದು ಸಾಬೀತಾದರೆ ಹುದ್ದೆಯಲ್ಲಿ   ಮುಂದುವರೆಯಲಿ’ ಎಂದು ಸವಾಲು ಹಾಕಿದರು.

‘ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಸಾವಿಗೆ ಅವರು ಧರಿಸಿದ್ದ ಕಳಪೆ ಮಟ್ಟದ ಗುಂಡು ನಿರೋಧಕ ಕವಚವೇ ಕಾರಣ. ಈ ಕವಚವನ್ನು ಆರ್.ಎಸ್.ಶರ್ಮಾ ಗೃಹ ಇಲಾಖೆಯ ಅಧಿಕಾರಿಯಾಗಿದ್ದಾಗ ಖರೀದಿ ಮಾಡಲಾಗಿತ್ತು. ಶರ್ಮಾ ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ಅವ್ಯವಹಾರ ಎಸಗಿದ್ದರು. ನಂತರ ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಯಿತು’ ಎಂದರು.

  ಈ ಎಲ್ಲಾ ಅಂಶಗಳು ಎದುರಿದ್ದರೂ ‘ಕೇಂದ್ರ ಸರ್ಕಾರ ಆಧುನಿಕ ರಕ್ಷಣಾ ಸಲಕರಣೆಗಳ ಖರೀದಿಗೆ ಸುಮಾರು ರೂ ಒಂದು ಸಾವಿರ ಕೋಟಿ ವ್ಯಯಿಸಲು ಮುಂದಾಗಿದೆ. ಎರಡು ವರ್ಷಗಳ ಹಿಂದೆ ರಕ್ಷಣಾ ಇಲಾಖೆಯು ಹಗುರ ಮೆಷಿನ್‌ಗನ್ ಮತ್ತು ಇನ್ಸಾನ್ 5.5 ಎಂ.ಎಂ. ರೈಫಲ್‌ಗಳನ್ನು ಖರೀದಿಸಿತ್ತು. ಆದರೆ ಈ ಸಂಸ್ಥೆಯು ಪೂರೈಕೆ ಮಾಡಿದ ರಕ್ಷಣಾ ಉಪಕರಣಗಳು ಕಳಪೆ ಗುಣಮಟ್ಟದಾಗಿದ್ದು ಉಪಕರಣಗಳು ನಿಷ್ಕ್ರಿಯವಾಗಿರುವುದು ವರದಿಯಾಗಿದೆ. ಮತ್ತೆ ಕೇಂದ್ರ ಸರ್ಕಾರ ಇಂತಹ ಯೋಜನೆಗೆ ತೀರ್ಮಾನ ಕೈಗೊಂಡಿರುವುದು ಮತ್ತೊಂದು ಭ್ರಷ್ಟಾಚಾರಕ್ಕೆ ದಾರಿಯಾಗಲಿದೆ’ ಎಂದು ಆರೋಪಿಸಿದರು.‘ಜಪಾನ್‌ನಲ್ಲಿ ಅಣು ವಿಕಿರಣ ಸೋರಿಕೆಯಿಂದ ಸಾವಿರಾರು ಮಂದಿ ಮೃತರಾಗಿದ್ದಾರೆ. ಇದರಿಂದ ಎಷ್ಟೋ ರಾಷ್ಟ್ರಗಳು ಅಣು ಸ್ಥಾವರ ನಿರ್ಮಾಣ ಯೋಜನೆಗಳನ್ನು ಕೈಬಿಟ್ಟಿವೆ.

ದೇಶದಲ್ಲಿರುವ ಅಣು ಸ್ಥಾವರಗಳಿಂದ ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ನೂತನ ಅಣು ಸ್ಥಾವರ ನಿರ್ಮಾಣಗಳ ಅಗತ್ಯತೆ ಕುರಿತು ಪರಿಶೀಲಿನೆ ಮಾಡಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

 ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಎಡರಂಗ ಮತ್ತೊಮ್ಮೆ ಗೆಲುವು ಸಾಧಿಸಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.