ADVERTISEMENT

ಮುನಿ ಧರ್ಮಸಾಗರ ಮಹಾರಾಜ ನಿಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST
ಮುನಿ ಧರ್ಮಸಾಗರ ಮಹಾರಾಜ ನಿಧನ
ಮುನಿ ಧರ್ಮಸಾಗರ ಮಹಾರಾಜ ನಿಧನ   

ಹಾವೇರಿ: ಜೈನ ದಿಗಂಬರ ಮುನಿ ಧರ್ಮಸಾಗರ ಮಹಾರಾಜರು (72) ತಾಲ್ಲೂಕಿನ ದೇವಗಿರಿಯಲ್ಲಾಪುರ ಗ್ರಾಮದ ಬಳಿ ಭಾನುವಾರ ಹೃದಯಾಘಾತದಿಂದ ಜಿನೈಕ್ಯರಾದರು.

ಜಿಲ್ಲೆಯ ಸವಣೂರ ತಾಲ್ಲೂಕು ಕಳಸೂರಿನಲ್ಲಿ ಚಾತುರ್ಮಾಸ ನಡೆಸಲು ಹಾವೇರಿಯಿಂದ ಪಾದಯಾತ್ರೆ ಮೂಲಕ ಹೊರಟಿದ್ದ ಸಮಯದಲ್ಲಿ ಅವರು ಹೃದಯಾಘಾತಕ್ಕೊಳಗಾದರು.

ಹಾವೇರಿಯ ಇಜಾರಿಲಕಮಾಪುರದಲ್ಲಿರುವ ಜೈನ ಸಮಾಜದ ಸ್ಮಶಾನಭೂಮಿಯಲ್ಲಿ ಸೋಮವಾರ (ಜು.15) ಮುಂಜಾನೆ 11.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಮಾಜದ ಮುಖಂಡ ಎನ್.ವಜ್ರಕುಮಾರ ತಿಳಿಸಿದ್ದಾರೆ.

ಧರ್ಮಸಾಗರ ಮಹಾರಾಜರು 1941ರ ಜುಲೈ 21ರಂದು ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕು ಭಾಣಗಿತ್ತಿ ಗುಡಿಯಾಳದಲ್ಲಿ ಜನಿಸಿದರು. ಇವರ ತಂದೆ ಜಿನ್ನಪ್ಪ ಕೋಟಿ, ತಾಯಿ ಪಾರ್ವತಿದೇವಿ. ಮುನಿಗಳ ಜನ್ಮನಾಮ ಧರ್ಮಪ್ಪ ಕೋಟಿ. ಕನ್ನಡದಲ್ಲಿ ನಾಲ್ಕನೇ ತರಗತಿಯವರೆಗೆ ಅಭ್ಯಾಸ ಮಾಡಿದ ಮುನಿಗಳು ನಂತರ ವ್ಯವಸಾಯಕ್ಕಿಳಿದರು. ಇದಾದ ನಂತರ 1996ರಲ್ಲಿ ದಿಗಂಬರ ಮುನಿಯಾಗಿ ವ್ರತ ಸ್ವೀಕರಿಸಿದರು.

2000ರಲ್ಲಿ ಚಾತುರ್ಮಾಸ ಸಮಯದಲ್ಲಿ ಸುಭಚಂದ್ರಸಾಗರ ಮುನಿ ಮಹಾರಾಜರಿಂದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಐಲಕ ದೀಕ್ಷೆ ಪಡೆದರು. ಮುನಿಗಳು ಒಟ್ಟು 13 ಚಾತುರ್ಮಾಸಗಳನ್ನು ಇದುವರೆಗೆ ನಡೆಸಿದ್ದು, ಇದೀಗ 14ನೇ ಚಾತುರ್ಮಾಸವನ್ನು ಕಳಸೂರಲ್ಲಿ ನಡೆಸಲು ನಿರ್ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.