ADVERTISEMENT

ಮುಳುಗಡೆ ಭೀತಿಯಲ್ಲಿ ಯಾದಗಿರಿ ಗ್ರಾಮಗಳು

​ಪ್ರಜಾವಾಣಿ ವಾರ್ತೆ
Published 1 ಜನವರಿ 2011, 9:20 IST
Last Updated 1 ಜನವರಿ 2011, 9:20 IST

ಯಾದಗಿರಿ: ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಸಂಗಮ ಬಂಡಾ ಪ್ರದೇಶದಲ್ಲಿ ಹಳ್ಳಕ್ಕೆ ಅಡ್ಡಲಾಗಿ ಬೃಹತ್ ಪ್ರಮಾಣದ ಬ್ಯಾರೇಜ್ ನಿರ್ಮಿಸಲಾಗುತ್ತಿದ್ದು, ಇದರಿಂದ ಕರ್ನಾಟಕದ ಮೂರು ಹಳ್ಳಿಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಈ ಬ್ಯಾರೇಜ್‌ನಲ್ಲಿ ಕೃಷ್ಣಾ ನದಿಯ ನೀರು ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ವ್ಯಾಪ್ತಿಯ ಮಿನಾಸಪುರ ಗುಡ್ಡದಲ್ಲಿ ಉಗಮವಾಗುವ ನಂದೇಪಲ್ಲಿ ಹಳ್ಳವು ಈಡ್ಲೂರು, ಛೆಲೇರಿ ಮೂಲಕ ಆಂಧ್ರ ಪ್ರದೇಶಕ್ಕೆ ಹರಿದು ಹೋಗುತ್ತದೆ. ಆದರೆ ರಾಜ್ಯದ ಗಡಿಗೆ ಒಂದು ಕಿ.ಮೀ. ದೂರದಲ್ಲಿಯೇ ಆಂಧ್ರ ಪ್ರದೇಶವು ಈ ಬ್ಯಾರೇಜ್ ನಿರ್ಮಿಸುತ್ತಿದೆ. ಈ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಣೆ ಆರಂಭವಾದಲ್ಲಿ ಯಾದಗಿರಿ ಜಿಲ್ಲೆಯ ಸಂಕಲಾಪುರ, ಛೆಲೇರಿ ಗ್ರಾಮಗಳು ಮುಳುಗಡೆಯ ಭೀತಿ ಎದುರಿಸಲಿವೆ.

ನೆಪ ಮಾತ್ರ ಹಳ್ಳಕ್ಕೆ ಬ್ಯಾರೇಜ್: ಸಂಗಮ ಬಂಡಾದಲ್ಲಿ ನಿರ್ಮಿಸಲಾಗುತ್ತಿರುವ ಈ ಬ್ಯಾರೇಜ್‌ನ ಗಾತ್ರವನ್ನು ನೋಡಿದರೆ, ಇದು ಕೇವಲ ಹಳ್ಳದ ನೀರು ಸಂಗ್ರಹಣೆಯ ಉದ್ದೇಶ ಹೊಂದಿಲ್ಲ ಎನ್ನುತ್ತಾರೆ ಮುಳುಗಡೆ ಭೀತಿಯಲ್ಲಿರುವ ಗ್ರಾಮಸ್ಥರು.

ಒಂದೂವರೆ ಕಿ.ಮೀ. ಉದ್ದವಿರುವ ಈ ಬ್ಯಾರೇಜ್‌ನಲ್ಲಿ ಕೃಷ್ಣಾ ನದಿಯ ನೀರನ್ನು ಶೇಖರಿಸುವ ಉದ್ದೇಶವನ್ನು ಆಂಧ್ರಪ್ರದೇಶ ಹೊಂದಿದೆ ಎಂಬ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಾರೆ. ಆಂಧ್ರ ಪ್ರದೇಶದಲ್ಲಿರುವ ಜುರಾಲಾ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ಪಸ್‌ಫುಲ್ ಗ್ರಾಮದಿಂದ ಮಖ್ತಲ್ ಮೂಲಕ ಈ ಬ್ಯಾರೇಜ್‌ನಲ್ಲಿ ಸಂಗ್ರಹಿಸುವ ಯೋಜನೆಯಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಸಂಗಮಬಂಡಾದಲ್ಲಿ ನಿರ್ಮಿಸುತ್ತಿರುವ ಬ್ಯಾರೇಜ್‌ನಿಂದ ಮುಳುಗಡೆ ಆಗುವ ಆಂಧ್ರ ಪ್ರದೇಶದ ಉಜ್ಜಲಿ ಗ್ರಾಮವನ್ನು ಸ್ಥಳಾಂತರಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಅಲ್ಲಿನ ಜನರಿಗೆ ಪರಿಹಾರಧನವನ್ನು ವಿತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ನಂದೇಪಲ್ಲಿ ಹಳ್ಳದ ನೀರನ್ನು ಮಾತ್ರ ಸಂಗ್ರಹಿಸುವುದಾದರೆ, ಉಜ್ಜಲಿ ಗ್ರಾಮದ ಸ್ಥಳಾಂತರಕ್ಕೆ ಏಕೆ ಕ್ರಮ ಕೈಗೊಳ್ಳಬೇಕಾಗಿತ್ತು ಎಂಬ ಪ್ರಶ್ನೆ ಗಡಿ ಗ್ರಾಮಗಳ ಜನರದ್ದು.

ದಿ. ವೈ.ಎಸ್. ರಾಜಶೇಖರ ರೆಡ್ಡಿ ಅವರ ಅಧಿಕಾರ ಅವಧಿಯಲ್ಲಿ ಆರಂಭಿಸಲಾಗಿರುವ ಈ ಬ್ಯಾರೇಜ್‌ನ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದುವರೆಗೆ ಗೇಟ್‌ಗಳನ್ನು ಹಾಕಲಾಗಿಲ್ಲ. ಆಂಧ್ರ ಪ್ರದೇಶ ಸರ್ಕಾರ ನಿರ್ಮಿಸುತ್ತಿರುವ ಈ ಬ್ಯಾರೇಜ್‌ನ ನೀರು ಸಂಗ್ರಹಣೆ ಸಾಮರ್ಥ್ಯ, ಕಾಮಗಾರಿಯ ವೆಚ್ಚ ಇತ್ಯಾದಿ ಮಾಹಿತಿಗಳನ್ನು ಗೌಪ್ಯವಾಗಿಯೇ ಇಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಮುಳುಗಡೆಯ ಭೀತಿ: ನಂದೇಪಲ್ಲಿ ಹಳ್ಳಕ್ಕೆ ಆಂಧ್ರಪ್ರದೇಶದ ಸಂಗಮ ಬಂಡಾ ಗ್ರಾಮದಲ್ಲಿ ನಿರ್ಮಿಸುತ್ತಿರುವ ಈ ಬ್ಯಾರೇಜ್‌ನ ಹಿನ್ನೀರಿನಲ್ಲಿ ಜಿಲ್ಲೆಯ ಮೂರು ಹಳ್ಳಿಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ. ಜಿಲ್ಲೆಯ ಛೆಲೇರಿ, ಸಂಕಲಾಪುರ, ಈಡ್ಲೂರು ಗ್ರಾಮಗಳು ಈ ಬ್ಯಾರೇಜ್‌ನ ಹಿನ್ನೀರಿನಲ್ಲಿ ಮುಳುಗಡೆ ಆಗುವುದು ನಿಶ್ಚಿತ ಎನ್ನುತ್ತಾರೆ ಛೆಲೇರಿಯ ದ್ರಾವಿಡರಾಜ ಹೇಳುತ್ತಾರೆ.

ಕಳೆದ ವರ್ಷ ಮಳೆಗಾಲದಲ್ಲಿ ಪ್ರವಾಹ ಬಂದಿದ್ದು, ಹಳ್ಳದ ನೀರು ಛೆಲೇರಾ ಗ್ರಾಮಕ್ಕೆ ನುಗ್ಗಿತ್ತು. ಗ್ರಾಮದ ಸುತ್ತಲೂ ನೀರು ಆವರಿಸಿತ್ತು. ಬ್ಯಾರೇಜ್ ಇಲ್ಲದಿರುವಾಗಲೇ ಗ್ರಾಮದಲ್ಲಿ ಪ್ರವಾಹದ ಪರಿಸ್ಥಿತಿ ತಲೆದೋರುತ್ತದೆ. ಇನ್ನು ಬ್ಯಾರೇಜ್‌ನಲ್ಲಿ ನೀರು ಸಂಗ್ರಹಣೆ ಆರಂಭವಾದರೇ ಗ್ರಾಮಗಳನ್ನು ದೇವರೇ ಕಾಪಾಡಬೇಕು ಎನ್ನುತ್ತಾರೆ ಛೆಲೇರಿಯ ರಾಘವೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.