ADVERTISEMENT

ಮೂಡಲಗಿ ಉದ್ವಿಗ್ನ: ಲಘು ಲಾಠಿ ಪ್ರಹಾರ

ಬಾಲಕಿ ಅಪಹರಣ-ಕೊಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST
ಮೂಡಲಗಿಯಲ್ಲಿ ಬಾಲಕಿ ಅಪಹರಿಸಿ ಕೊಲೆ ಮಾಡಿದ ಘಟನೆ ಖಂಡಿಸಿ ಮಂಗಳವಾರ ಪೊಲೀಸ್ ಠಾಣೆ ಎದುರು ಸೇರಿದ ಜನ ಪ್ರತಿಭಟನೆ ನಡೆಸಿದರು.
ಮೂಡಲಗಿಯಲ್ಲಿ ಬಾಲಕಿ ಅಪಹರಿಸಿ ಕೊಲೆ ಮಾಡಿದ ಘಟನೆ ಖಂಡಿಸಿ ಮಂಗಳವಾರ ಪೊಲೀಸ್ ಠಾಣೆ ಎದುರು ಸೇರಿದ ಜನ ಪ್ರತಿಭಟನೆ ನಡೆಸಿದರು.   

ಮೂಡಲಗಿ (ಬೆಳಗಾವಿ ಜಿಲ್ಲೆ): ಐದು ವರ್ಷದ ಬಾಲಕಿ ಅಪಹರಿಸಿ ಕೊಲೆ ಮಾಡಿದ ಘಟನೆ ಖಂಡಿಸಿ ಜನರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದರಿಂದ ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿರುವ ಘಟನೆ ಮೂಡಲಗಿಯಲ್ಲಿ ಮಂಗಳವಾರ ನಡೆದಿದೆ.

ಇಲ್ಲಿನ ಲಕ್ಷ್ಮಿ ನಗರದಲ್ಲಿ ಗೌಂಡಿ ಕೆಲಸ ಮಾಡುತ್ತಿರುವ ಮಲಿಕ್‌ಸಾಬ್ ಚಾಂದ್‌ಖಾನ್ ಅವರ ಪುತ್ರಿ ತಸ್ಲೀಮಾ ಅವರನ್ನು ಮಾ. 31ರಂದು ರಾತ್ರಿ ದುಷ್ಕರ್ಮಿಗಳು ಅಪಹರಿಸಿದ್ದರು. `ಬಾಲಕಿಯ ಕಿಡ್ನಿ ತೆಗೆಯಲು ಅಪಹರಿಸಲಾಗಿದ್ದು, ಮಗಳು ಬೇಕಾದರೆ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ' ಎಂದು ಬರೆದಿರುವ ಚೀಟಿಯನ್ನು ಇಟ್ಟು ಪರಾರಿಯಾಗಿದ್ದರು.

ಈ ಕುರಿತು ಮಲಿಕ್‌ಸಾಬ್ ಅವರು  ಏ.1ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ದುಷ್ಕರ್ಮಿಗಳು ಬಾಲಕಿಯನ್ನು ಕೊಲೆ ಮಾಡಿ ಶವವನ್ನು ಪಟ್ಟಣದ ಹೊರಗಿನ ತೋಟದಲ್ಲಿ ಎಸೆದು ಪರಾರಿಯಾಗಿದ್ದರು. ಈ ಸುದ್ದಿ ಮಂಗಳವಾರ ಬೆಳಿಗ್ಗೆ ಪಟ್ಟಣದಲ್ಲಿ ಹರಡುತ್ತಿದ್ದಂತೆಯೇ ನೂರಾರು ಜನರು ಪೊಲೀಸ್ ಠಾಣೆ ಎದುರು ಜಮಾಯಿಸಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸತೊಡಗಿದರು. ಕೊಲೆ ಮಾಡಿದವರನ್ನು ಬಂಧಿಸಿ ತಮ್ಮ ವಶಕ್ಕೆ ನೀಡಬೇಕು ಎಂದು ಉದ್ರಿಕ್ತ ಜನರು ಒತ್ತಾಯಿಸಿದರು.

ಪೊಲೀಸರ ನಿರ್ಲಕ್ಷ್ಯದಿಂದಲೇ ಬಾಲಕಿಯ ಕೊಲೆಯಾಗಿದೆ. ಬಾಲಕಿಯ ತಂದೆ ಹಾಗೂ ಚಿಕ್ಕಪ್ಪನನ್ನು ಬೆದರಿಸಿ ಸಹಿ ಪಡೆದು ಶವವನ್ನು ಬಲವಂತವಾಗಿ ಗೋಕಾಕ  ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಯ್ಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಪೊಲೀಸರ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮೂರು ಸುತ್ತು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು. ಘಟನೆಗೆ ಸಂಬಂಧಿಸಿ15 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ನಾಲ್ವರು ವಶಕ್ಕೆ: `ಬಾಲಕಿ ಅಪಹರಿಸಿದ್ದ ದುಷ್ಕರ್ಮಿಗಳು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅವರ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿರುವುದನ್ನು ಅರಿತ ದುಷ್ಕರ್ಮಿಗಳು ಬಾಲಕಿಯನ್ನು ಕೊಲೆ ಮಾಡಿ ಮೂಡಲಗಿಯ ಹೊರ ವಲಯದ ತೋಟವೊಂದರಲ್ಲಿ ಎಸೆದು ಹೋಗಿದ್ದರು.  ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಬೋಧ ವಿ.ಜಾಮದಡ್ಡಿ (22) ಸೇರಿದಂತೆ ನಾಲ್ವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ' ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಹೇಳಿದರು.

ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.  ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.