ADVERTISEMENT

ಮೂಡುಬಿದಿರೆಯ ಜಿನಾಲಯಕ್ಕೆ ಕನ್ನ

ಕೋಟ್ಯಂತರ ಬೆಲೆಯ ಪುರಾತನ ವಿಗ್ರಹಗಳ ಕಳವು

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 19:59 IST
Last Updated 6 ಜುಲೈ 2013, 19:59 IST
ಮೂಡುಬಿದಿರೆಯ ಸಿದ್ಧಾಂತ ಮಂದಿರದ ವಿಗ್ರಹಗಳು ದಾಸ್ತಾನಿರುವ ಕೋಣೆಯ ಶಟರ್ ಬಾಗಿಲನ್ನು ಗ್ಯಾಸ್ ಕಟರ್ ಮೂಲಕ ತೂತು ಮಾಡಿರುವುದು
ಮೂಡುಬಿದಿರೆಯ ಸಿದ್ಧಾಂತ ಮಂದಿರದ ವಿಗ್ರಹಗಳು ದಾಸ್ತಾನಿರುವ ಕೋಣೆಯ ಶಟರ್ ಬಾಗಿಲನ್ನು ಗ್ಯಾಸ್ ಕಟರ್ ಮೂಲಕ ತೂತು ಮಾಡಿರುವುದು   

ಮೂಡುಬಿದಿರೆ: ಐತಿಹಾಸಿಕ ಹಿನ್ನೆಲೆಯ ಇಲ್ಲಿನ ಜೈನಮಠದ ಅಧೀನದ ಗುರುಬಸದಿಯ ಸಿದ್ಧಾಂತ ಮಂದಿರದಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 12 ಪುರಾತನ ತೀರ್ಥಂಕರರ ಮೂರ್ತಿಗಳು ಕಳವಾಗಿದ್ದು, ಶನಿವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರ ಭಾರತದ ಯಾತ್ರಿಗಳನ್ನು ಶನಿವಾರ ಬೆಳಿಗ್ಗೆ 9.30 ಗಂಟೆಗೆ ಸಿದ್ಧಾಂತ ಮಂದಿರದ ದರ್ಶನಕ್ಕೆಂದು ಜೈನ ಮಠದ ವ್ಯವಸ್ಥಾಪಕ ಉದಯಕುಮಾರ್ ಕರೆದುಕೊಂಡು ಹೋದಾಗ ಕಳವು ಪ್ರಕರಣ ಬೆಳಕಿಗೆ ಬಂತು.

ಒಬ್ಬನೇ ಕಳ್ಳ ಈ ಕೃತ್ಯ ನಡೆಸಿರುವುದು ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸಿದ್ಧಾಂತ ಮಂದಿರದ ಪೂರ್ವ ದಿಕ್ಕಿನಲ್ಲಿದ್ದ ಕಿಟಕಿಯ ಗ್ರಿಲ್ ಅನ್ನು ಗ್ಯಾಸ್ ಕಟರ್ ಮೂಲಕ ತುಂಡರಿಸಿ ಕಳ್ಳ ಒಳ ಪ್ರವೇಶಿಸಿದ್ದಾನೆ. ಅಲ್ಲಿಂದ ವಿಗ್ರಹಗಳ ದಾಸ್ತಾನಿರುವ ಕೋಣೆಯ ಶಟರ್ ಬಾಗಿಲನ್ನು ಕೂಡ ಗ್ಯಾಸ್ ಕಟರ್ ಮೂಲಕ ಒಬ್ಬ ವ್ಯಕ್ತಿಯ ದೇಹ ಪ್ರವೇಶಿಸುವಷ್ಟು ತೂತು ಮಾಡಿ ಒಳನುಗ್ಗಿದ್ದಾನೆ.

ಎದುರಿದ್ದ ಗಾಜು ಪುಡಿ ಮಾಡಿ ಬಳಿಕ ಕಬ್ಬಿಣದ ಗ್ರಿಲ್ ಅನ್ನು ತುಂಡರಿಸಿ ವಿಗ್ರಹಗಳು ದಾಸ್ತಾನಿರುವ ಜಾಗಕ್ಕೆ ಪ್ರವೇಶಿಸಿ ಮೂರ್ತಿಗಳನ್ನು ಕಳವು ಮಾಡಿದ್ದಾನೆ.

ವಿಗ್ರಹಗಳಿದ್ದ ಕೋಣೆಯ ಸಿ.ಸಿ ಕ್ಯಾಮೆರಾಕ್ಕೆ ಕಳ್ಳ ಹಾನಿ ಮಾಡಿರುವುದರಿಂದ ಅದಕ್ಕಿಂತ ಹಿಂದೆ ನಡೆಸಿದ ಕೃತ್ಯಗಳು ಮಾತ್ರ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮುಖದ ಗುರುತು ಸಿಗದಂತೆ ಕಳ್ಳ ವೇಷ ಧರಿಸಿದ್ದ. ಟಾರ್ಚ್ ಲೈಟನ್ನು ಬಾಯಿಯಲ್ಲಿಟ್ಟು ಬೆಳಕು ಹಾಯಿಸಿದ್ದಾನೆ. ಶುಕ್ರವಾರ ಮಧ್ಯರಾತ್ರಿ 1ರಿಂದ 2 ಗಂಟೆ ಮಧ್ಯೆ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ಕಳ್ಳ ಬಿಟ್ಟು ಹೋದ ಕಪ್ಪು ಬಣ್ಣದ ಒಂದು ಬ್ಯಾಗ್, ಎರಡು ಗ್ಯಾಸ್ ಕಿಟ್ ಸಿಲಿಂಡರ್ ಹಾಗೂ ಪೇಪರ್ ಪತ್ತೆಯಾಗಿವೆ. ಎರಡು ತಿಂಗಳ ಹಿಂದೆಯಷ್ಟೇ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಈ ಮಂದಿರದ ಸುರಕ್ಷತೆ ದೃಷ್ಟಿಯಿಂದ ಹೊಸ ತಂತ್ರಜ್ಞಾನದ 8 ಸಿ.ಸಿ ಕ್ಯಾಮೆರಾ ನೀಡಿದ್ದರು. ಆದರೆ ಮಂದಿರದಲ್ಲಿದ್ದ ಸೈರನ್ ಏಕೆ ಮೊಳಗಲಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. ಹತ್ತಿರದ್ಲ್ಲಲೇ ಇರುವ ಗುರು ಬಸದಿಯಲ್ಲಿ ಸಿಬ್ಬಂದಿ ಮಲಗಿದ್ದರೂ ಅವರಿಗೆ ಕಳವು ನಡೆದ ವಿಷಯ ಗೊತ್ತಾಗಲಿಲ್ಲ.

ಎರಡು ವಿಗ್ರಹ: ಕಳವಾಗಿರುವ 12 ವಿಗ್ರಹಗಳಲ್ಲಿ ನೀಲಿ ಕಲ್ಲಿನ ಮೂರು ತೀರ್ಥಂಕರ ಮೂರ್ತಿಗಳು, ಪಚ್ಚೆಕಲ್ಲು, ನೀಲಿ ಕಲ್ಲು ಮತ್ತು ಬಿಳಿಕಲ್ಲಿನ ಮೂರು ಮೂರ್ತಿಗಳು, ಮುತ್ತಿನಿಂದ ರಚಿಸಿದ ಕೂತ ಭಂಗಿಯ ಗೊಮ್ಮಟೇಶ್ವರ ಮೂರ್ತಿ ಜತೆಗೆ ಬಂಗಾರದ ಮಂಟಪ, ಮುತ್ತಿನ ಮೂರ್ತಿ ಹಾಗೂ ಕೆಂಪು ಕಲ್ಲಿನ ಮೂರ್ತಿಗಳು ಸೇರಿವೆ. ಇವೆಲ್ಲಾ ಒಂದೂವರೆಯಿಂದ ಎರಡೂವರೆ ಇಂಚು ಎತ್ತರದವು.

ಹೆಗ್ಗಡೆ ಕಳವಳ: ಸುದ್ದಿ ತಿಳಿದ ತಕ್ಷಣ ಶನಿವಾರ ಸ್ಥಳಕ್ಕೆ ಧಾವಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ವಿಗ್ರಹಗಳ ಕಳವಿಗೆ ಕಳವಳ ವ್ಯಕ್ತಪಡಿಸಿದರು. `ಸಿದ್ಧಾಂತ ಬಸದಿಯಲ್ಲಿ ಕಳವಾದ ವಿಗ್ರಹಗಳು ಅತ್ಯಂತ ಪುರಾತನ ರಾಷ್ಟ್ರೀಯ ಸಂಪತ್ತು. ಸುರಕ್ಷತೆಯ ದೃಷ್ಟಿಯಿಂದ ಆಧುನಿಕ ವ್ಯವಸ್ಥೆಗಳು ಇಲ್ಲಿ ಇದ್ದರೂ ಕಳ್ಳರು ಹೆಚ್ಚು ಬುದ್ಧಿವಂತಿಕೆಯಿಂದ ಕೃತ್ಯ ನಡೆಸಿದ್ದಾರೆ. ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಸ್ವತ್ತುಗಳನ್ನು ಸ್ವಾಧೀನಪಡಿಸಬೇಕು' ಎಂದು ಅವರು ಆಗ್ರಹಿಸಿದರು. ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೂ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಸ್ಥಳೀಯ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಮೆರಿಕ ಪ್ರವಾಸದಲ್ಲಿದ್ದು, ಇದೇ 11ಕ್ಕೆ ಸ್ವಕ್ಷೇತ್ರಕ್ಕೆ ಹಿಂತಿರುಗಲಿದ್ದಾರೆ.

5 ತಂಡಗಳ ರಚನೆ: ಘಟನೆಗೆ ಸಂಬಂಧಿಸಿ 5 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಪಕ್ಕದ ರಾಜ್ಯಗಳ ಪೊಲೀಸರ ನೆರವನ್ನೂ ಕೋರಲಾಗಿದೆ. ಕಳವಾದ ಮೂರ್ತಿಗಳಿಗೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಮನೀಶ್ ಖರ್ಬೀಕರ್ ತಿಳಿಸಿದ್ದಾರೆ.

`ಮೂಡಬಿದಿರೆಯ ಬಸದಿಯಲ್ಲಿ ಜಿನ ಮೂರ್ತಿಗಳನ್ನು ಕಳವು ಮಾಡಿರುವುದು ನಿಜಕ್ಕೂ ಅಘಾತಕಾರಿ. ಆದಷ್ಟು ಬೇಗ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸಬೇಕು' ಎಂದು ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್ ಬೆಂಗಳೂರಿನಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.