ADVERTISEMENT

ಮೂರು ವರ್ಷವಾದರೂ ನೆರೆ ಸಂತ್ರಸ್ತರಿಗೆ ಲಭಿಸದ ನೆರವು!

ರಾಮರಡ್ಡಿ ಅಳವಂಡಿ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ರಾಯಚೂರು: ಮೂರು ವರ್ಷಗಳ ಹಿಂದೆ ಪ್ರವಾಹಕ್ಕೆ ಸಿಲುಕಿದ ಈ ಜಿಲ್ಲೆಯ ನೆರೆ ಸಂತಸ್ತರ ಗೋಳು ಕಂಡು ಮರುಗಿದ ರಾಜ್ಯದ ವಿವಿಧ ಭಾಗಗಳ ಜನತೆ ಮತ್ತು ದಾನಿ ಸಂಘ ಸಂಸ್ಥೆಗಳು ಬಟ್ಟೆ, ಹೊದಿಕೆ, ಹಾಸಿಗೆ ನೀಡಿದ್ದರು. ಆ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ತಲುಪಿಸದೆ ಇಲ್ಲಿನ ಒಳಾಂಗಣ ಕ್ರೀಡಾಂಗಣದ ಗುಹೆಯಂತಿರುವ ಕೊಠಡಿಯೊಂದರಲ್ಲಿ ಅಧಿಕಾರಿಗಳು ಸಂಗ್ರಹಿಸಿಟ್ಟ ಪ್ರಕರಣ ಮಂಗಳವಾರ ಹೊರಬಿದ್ದಿದೆ.

ಒಳಾಂಗಣ ಕ್ರೀಡಾಂಗಣದಲ್ಲಿ ಇದೇ 7 ಮತ್ತು 8ರಂದು ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಕೊಠಡಿಯಲ್ಲಿದ್ದ ವಸ್ತುಗಳನ್ನು ತಹಸೀಲ್ದಾರ್ ಕಚೇರಿಗೆ ಲಾರಿ ಮೂಲಕ ಸಾಗಿಸುವಾಗ ವಿಷಯ ಬಹಿರಂಗವಾಗಿದೆ.

ನೆರೆ ಸಂತ್ರಸ್ತರಿಗೆ ತಲುಪಿಸಲು 2009ರಲ್ಲಿ ಕೊಟ್ಟಿದ್ದ ಲಕ್ಷಾಂತರ ರೂಪಾಯಿ ಮೊತ್ತದ ವಸ್ತುಗಳು ದೂಳು ಹಿಡಿದಿವೆ. ಬಟ್ಟೆ ಹರಿದಿರುವುದು ಕಂಡು ಬಂತು.  ನೆರೆ ಸಂತ್ರಸ್ತರಿಗೆ ಸಾಧ್ಯವಾದ ಮಟ್ಟಿಗೆ ದಾನಿಗಳು ಕೊಟ್ಟ ವಸ್ತುಗಳನ್ನು ಪೂರೈಸಲಾಗಿತ್ತು. ಬಳಿಕ ಈ ವಸ್ತುಗಳು ಉಳಿದಿದ್ದವು. ಅವುಗಳನ್ನು ಸಂಗ್ರಹಿಸಿಡಲಾಗಿತ್ತು. ಈಗ ಅವುಗಳನ್ನು ಅನಾಥಾಲಯಕ್ಕೆ ಪೂರೈಸಲಾಗುವುದು ಎಂದು ತಹಸೀಲ್ದಾರ್, ಜಿಲ್ಲಾ ಆಡಳಿತ ವರ್ಗದವರು ಹೇಳುತ್ತಿದ್ದಾರೆ.

ಕೆಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಂಕಷ್ಟದಲ್ಲಿರುವ ಜನತೆಯ ಮನೆ, ಗ್ರಾಮಕ್ಕೆ ತೆರಳಿ ವಸ್ತು ವಿತರಿಸಿದ್ದರು. ಹಾಸಿಗೆ, ಹೊದಿಕೆ, ಆಹಾರ ಪೊಟ್ಟಣ, ಔಷಧಿ, ಪಾತ್ರೆ ಹೀಗೆ ಹಲವು ವಸ್ತುಗಳನ್ನೂ ನೀಡಿದ್ದರು. ಹಲವು ಸಂಘ ಸಂಸ್ಥೆಗಳು ವಸ್ತುಗಳನ್ನು ಜಿಲ್ಲಾಡಳಿತ, ತಹಸೀಲ್ದಾರ್ ಕಚೇರಿಗೆ ಒಪ್ಪಿಸಿ ವಿತರಣೆಗೆ ಕೋರಿದ್ದವು.

ಸಂಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡಲು ಆಗ ಜಿಲ್ಲಾಡಳಿತ, ತಹಸೀಲ್ದಾರ್ ಕಚೇರಿ ಆಡಳಿತ ವರ್ಗ ಈ ರೀತಿ ವಸ್ತುಗಳನ್ನು ಹಂಚಿದ್ದರು. ಆದರೆ ಸಂಘ ಸಂಸ್ಥೆಗಳು ಕೊಟ್ಟದ್ದೆಷ್ಟು ಮತ್ತು ಉಳಿದುದೆಷ್ಟು ಎಂಬುದೇ ಗೊತ್ತಾಗುವ ಸ್ಥಿತಿ ಆಗ ಇರಲಿಲ್ಲ. ಪರಿಹಾರ, ಬೆಳೆ ನಷ್ಟಕ್ಕೆ ಪರಿಹಾರ, ತಾತ್ಕಾಲಿಕ ಮನೆ ನಿರ್ಮಾಣ ಕೊಡಬೇಕು ಹೀಗೆ ಹಲವು ಬೇಡಿಕೆಗಳೊಂದಿಗೆ ಜನತೆ ಜಿಲ್ಲಾಡಳಿತದೆದುರು ಗೋಳು ತೋಡಿಕೊಳ್ಳುತ್ತಿದ್ದರು.

ಆಗ ಇಂಥ ವಸ್ತುಗಳನ್ನು ಕ್ರೀಡಾಂಗಣದ ಕೊಠಡಿಯಲ್ಲಿ ತಾಲ್ಲೂಕು ಆಡಳಿತ ಸಂಗ್ರಹಿಸಿಟ್ಟು ಸಂತ್ರಸ್ತರಿಗೆ ತಲುಪಿಸುವುದನ್ನೇ ಮರೆತಿರುವುದು ಈಗ ಬಹಿರಂಗವಾಗಿದೆ. ಸದ್ಯ ಈ ವಸ್ತುಗಳನ್ನು ತಹಸೀಲ್ದಾರ್ ಅಶೋಕ ಜಹಗೀರದಾರ ಖುದ್ದಾಗಿ ನಿಂತು ತಹಸೀಲ್ದಾರ್ ಕಚೇರಿಗೆ ಲಾರಿಯಲ್ಲಿ ಸಾಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.