ADVERTISEMENT

ಮೂಲಭೂತ ಹಕ್ಕಿಗಿಂತ ರಾಜ್ಯ ಪ್ರೀತಿ ದೊಡ್ಡದಲ್ಲ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ಸಾಗರ (ಶಿವಮೊಗ್ಗ ಜಿಲ್ಲೆ): ನಮ್ಮ ದೇಶದ ಪ್ರಜೆಗೆ ಯಾವುದೇ ರಾಜ್ಯದಲ್ಲಿ ಕೆಲಸ ಮಾಡಲು ಸಂವಿಧಾನ ಅವಕಾಶ ಕಲ್ಪಿಸಿರುವಾಗ, ಕರ್ನಾಟಕದವರಿಗೇ ನಮ್ಮ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ನೀತಿಯನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಸ್ಪಷ್ಟಪಡಿಸಿದರು.

ಸಮೀಪದ ಹೆಗ್ಗೋಡಿನಲ್ಲಿ ಶನಿವಾರ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಸಂವಿಧಾನ ಹೇಳಿರುವ ಮೂಲಭೂತ ಹಕ್ಕಿಗಿಂತ ಕರ್ನಾಟಕದ ಮೇಲಿನ ಪ್ರೀತಿ ದೊಡ್ಡದು ಎನ್ನಲಾಗದು. ನಮ್ಮ ರಾಜ್ಯದವರಿಗೇ ಹೆಚ್ಚಿನ ಉದ್ಯೋಗ ಸಿಗಬೇಕು ಅಂತಾದರೆ ಇಲ್ಲಿನ ಎಂಜಿನಿಯರಿಂಗ್ ಕಾಲೇಜುಗಳ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.

ಐಟಿ, ಬಿಟಿ ಕ್ಷೇತ್ರದಲ್ಲಿ ಜಾತಿಯನ್ನು ಮಾನದಂಡವಾಗಿಟ್ಟುಕೊಂಡು ಉದ್ಯೋಗ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸಂಸ್ಥೆಯಲ್ಲಿ ಪ್ರತಿಭೆಗೆ ಮನ್ನಣೆ ವಿನಾ ಜಾತಿ ಮುಖ ನೋಡಿ ಯಾರಿಗೂ ಉದ್ಯೋಗ ನೀಡಿಲ್ಲ ಎಂದರು.

`ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡುವುದಕ್ಕೆ ನನ್ನ ಸಹಮತವಿಲ್ಲ. ಯಾವುದೇ ಕ್ಷೇತ್ರದಲ್ಲಿ ಮೀಸಲಾತಿ ಒಂದು ನಿಯಮಿತ ಕಾಲದವರೆಗೆ ಮಾತ್ರ ಇರಬೇಕು. ದಲಿತ ಯುವಕ ಮತ್ತು ಯುವತಿಯರು ಐಟಿ ಕ್ಷೇತ್ರದಲ್ಲೂ ಉದ್ಯೋಗ ಪಡೆಯುವಂತಾಗಲು ಅವರಿಗೆ ಅಗತ್ಯವಿರುವ ಪರಿಣಿತಿ ನೀಡಲು ಅವಶ್ಯವಿರುವ ಕಾರ್ಯಕ್ರಮ ರೂಪಿಸಬೇಕು. ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಇನ್ಫೋಸಿಸ್ ಈ ಕೆಲಸ ಮಾಡಿದೆ~ ಎಂದು ಹೇಳಿದರು.

ಸಾಫ್ಟ್‌ವೇರ್ ಉದ್ಯಮ ಸ್ವಲ್ಪ ಮಟ್ಟಿನ ಹಿನ್ನಡೆ ಕಾಣುತ್ತಿದ್ದರೂ ಅದರ ಭವಿಷ್ಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ದೇಶದ ಇತರೆ ಉದ್ಯಮಗಳಿಗೆ ಹೋಲಿಸಿದರೆ ಈ ಉದ್ಯಮದಿಂದ ಬರುತ್ತಿರುವ ಲಾಭದ ಪ್ರಮಾಣ ಹಾಗೂ ದೊರಕಿಸುತ್ತಿರುವ ಉದ್ಯೋಗವಕಾಶ ಈ ಮಾತನ್ನು ದೃಢಪಡಿಸುತ್ತದೆ ಎಂದು ಹೇಳಿದರು.

 ಕಾಂತ್ರಿಕಾರಕ ಬದಲಾವಣೆ ಅಗತ್ಯ: ಯು.ಆರ್
ಸಾಗರ:
ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರ ಮಗ, ನನ್ನ ಮಗ ಹಾಗೂ ದಲಿತ ಕೇರಿಯ ಬಡ ಕುಟುಂಬದ ಬಾಲಕ ಒಂದೇ ಶಾಲೆಯಲ್ಲಿ ಓದುವಂತಹ ವಾತಾವರಣ ಇರುವ ಕ್ರಾಂತಿಕಾರಕ ಬದಲಾವಣೆ ನಿರ್ಮಾಣವಾಗಬೇಕಿದೆ ಎಂದು ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಹೇಳಿದರು.

ಇಲ್ಲಿಗೆ ಸಮೀಪದ ಹೆಗ್ಗೋಡಿನಲ್ಲಿ ಶನಿವಾರ ಮುಕ್ತಾಯಗೊಂಡ ನೀನಾಸಂ ಸಂಸ್ಕೃತಿ ಶಿಬಿರದ ಸಮಾರೋಪ ಭಾಷಣ ಮಾಡಿದ ಅವರು, ಇಂಗ್ಲಿಷ್ ಭಾಷೆಗೆ ನೀಡುತ್ತಿರುವ ಅತಿಯಾದ ಪ್ರಾಮುಖ್ಯತೆಯಿಂದ ಶಿಕ್ಷಣ ಎಂಬುದು ಶುದ್ಧ ವ್ಯಾಪಾರದ ಮಟ್ಟಕ್ಕೆ ಇಳಿದಿದೆ ಎಂದರು.

ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವುದಕ್ಕೆ ಸೀಮಿತವಾಗಿಟ್ಟು ಜ್ಞಾನಕ್ಕೆ ಸಂಬಂಧಪಟ್ಟ ಇತರ ಎಲ್ಲಾ ವಿಷಯಗಳನ್ನು ಮಾತೃಭಾಷೆಯಲ್ಲೇ ಮಕ್ಕಳಿಗೆ ದಕ್ಕುವಂತೆ ಮಾಡಿದರೆ ಮಾತ್ರ ವಿಷಯಗಳಲ್ಲಿನ ದೋಷಗಳು ಅವರಿಗೆ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮಕ್ಕಳು ಶಾಲೆಯಲ್ಲಿ ಕಲಿಯುವ ಜೊತೆಗೆ ಬೀದಿಯಲ್ಲೂ ಕಲಿಯುತ್ತಾರೆ. ಹೀಗಾಗಿ `ಅಟ್ಟದ~ ಭಾಷೆಯಂತಿರುವ ಇಂಗ್ಲಿಷ್‌ನ ಜೊತೆಗೆ ಮನೆ ಹಾಗೂ ಬೀದಿಯಲ್ಲಿ ಆಡುವ ಭಾಷೆಗಳೂ ಮಕ್ಕಳಿಗೆ ಮುಖ್ಯ. ಏಕೆಂದರೆ ಜ್ಞಾನ ಎಂಬುದು ಕೇವಲ ಮೆದುಳಿನಲ್ಲಿ ಇರುವುದಿಲ್ಲ. ಅದು ಮನುಷ್ಯನ ಬೆರಳುಗಳು ಸೇರಿದಂತೆ ದೇಹದ ಎಲ್ಲಾ ಅಂಗಾಂಗಗಳಲ್ಲೂ ಇರುತ್ತದೆ. ಆದರೆ ಆ ಜ್ಞಾನವನ್ನು ಹೇಗೆ ಬಳಸಬೇಕು ಎಂದು ಗೊತ್ತಿಲ್ಲದಿರುವುದೇ ಇಂಗ್ಲಿಷ್ ಮಾತ್ರ ಮುಖ್ಯ ಎನ್ನುವ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ ಎಂದರು.


ಐಟಿ-ಬಿಟಿ ಉದ್ಯಮ ಕೇವಲ ಭ್ರಮಾಲೋಕ ಸೃಷ್ಟಿಸುವ ಉದ್ಯಮವಾಗದೇ ಅಲ್ಲಿ ಕೆಲಸ ಮಾಡುವವರಿಗೆ ಖುಷಿ ಕೊಡುವ ಉದ್ಯಮವಾಗಬೇಕು. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅತೀ ಹೆಚ್ಚು ವೇತನ ನೀಡುತ್ತಿರುವುದು ಸಾಮಾಜಿಕ ಅಸಮಾನತೆಗೆ ಕಾರಣವಾಗಿದೆ. ಈ ಕಾರಣಕ್ಕೆ ಯಾರೂ ಈಗ ಶಿಕ್ಷಕರು, ವಿಜ್ಞಾನಿಗಳು ಅಥವಾ ನರ್ಸ್‌ಗಳಾಗಲು ಮುಂದೆ ಬರುತ್ತಿಲ್ಲ. ಕಾಲೇಜುಗಳಲ್ಲಿ ಬಿಎ, ಬಿಎಸ್‌ಸಿ ಕೋರ್ಸ್‌ಗಳು ಮುಚ್ಚುವ ಹಂತಕ್ಕೆ ಬಂದಿದೆ ಎಂದು ಹೇಳಿದರು.

ಜಾಗತೀಕರಣದ ಕಾರಣಕ್ಕೆ ಇಂದಿನ ಮಕ್ಕಳು ಹಾಗೂ ಯುವಕರು ಹೇಗಾದರೂ ಇಂಗ್ಲಿಷ್ ಕಲಿಯುತ್ತಾರೆ. ಆದರೆ ಈಗ ಕನ್ನಡ ಕಲಿಯಿರಿ ಎನ್ನುವುದೇ ಮುಖ್ಯ ಘೋಷಣೆಯಾಗಬೇಕು. ಈ ಮಾತನ್ನು ನಾನು ಹೇಳಿದರೆ ಇದೇ ಇವನ `ಉದ್ಯೋಗ~ ಎನ್ನುತ್ತಾರೆ. ಅದರ ಬದಲು ಕನ್ನಡ ಕಲಿಯಿರಿ ಎಂದು ಇನ್ಫೋಸಿಸ್‌ನ ನಾರಾಯಣಮೂರ್ತಿ ಅಂತಹವರು ಹೇಳಬೇಕು ಎಂದರು. ವಿಮರ್ಶಕ ಟಿ.ಪಿ.ಅಶೋಕ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT