ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಪ್ರಸ್ತುತ ಪಡೆಯುತ್ತಿರುವ ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು ಎಂದು ಐಎಎಸ್ ಅಧಿಕಾರಿ ಸುಬೀರ್ ಹರಿಸಿಂಗ್ ನೇತೃತ್ವದ ಅಧಿಕಾರಿಗಳ ವೇತನ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸರ್ಕಾರಿ ನೌಕರರು ಪ್ರಸ್ತುತ ತುಟ್ಟಿ ಭತ್ಯೆಯಾಗಿ ಮೂಲ ವೇತನದ ಶೇಕಡ 69.5ರಷ್ಟನ್ನು ಪಡೆಯುತ್ತಿದ್ದಾರೆ. ಇದನ್ನು ಮೂಲವೇತನದಲ್ಲೇ ವಿಲೀನಗೊಳಿಸುವುದರ ಜೊತೆಗೆ, ಮಧ್ಯಂತರ ಪರಿಹಾರ ರೂಪದಲ್ಲಿ ನೀಡಲಾಗುತ್ತಿದ್ದ ಶೇಕಡ 15ರಷ್ಟು ಮೊತ್ತ ಮತ್ತು ಫಿಟ್‌ಮೆಂಟ್ ಬೆನಿಫಿಟ್‌ಅನ್ನೂ (ಶೇಕಡ 7.5ರಷ್ಟು) ಮೂಲ ವೇತನದಲ್ಲೇ ವಿಲೀನಗೊಳಿಸಬೇಕು ಎಂದು ಆಯೋಗ ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಸಿರುವ ಶಿಫಾರಸಿನಲ್ಲಿ ಹೇಳಿದೆ ಎಂದು ತಿಳಿದುಬಂದಿದೆ.
ಆಯೋಗದ ಶಿಫಾರಸುಗಳು ಜಾರಿಗೆ ಬಂದರೆ, ಪ್ರಸ್ತುತ ಎಂಟು ಸಾವಿರ ರೂಪಾಯಿ ಮೂಲ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು ಅಂದಾಜು 15 ಸಾವಿರ ರೂಪಾಯಿ ಪಡೆಯಲಿದ್ದಾರೆ. ಶಿಫಾರಸುಗಳನ್ನು ಹಣಕಾಸು ಇಲಾಖೆಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಯೋಗದ ಶಿಫಾರಸುಗಳು ಜಾರಿಗೆ ಬಂದರೂ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ದರ್ಜೆಯ ನೌಕರರು ಹಾಗೂ ಅಧಿಕಾರಿಗಳ ನಡುವೆ ಶೇಕಡ 45ರಿಂದ 94ರಷ್ಟು ವ್ಯತ್ಯಾಸ ಇರಲಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.