ADVERTISEMENT

ಮೆಟ್ರೊ: ಕನ್ನಡಿಗ ನೌಕರರಿಗೆ ಕಿರುಕುಳ

ಅಧಿಕಾರಿಗಳ ಅಮಾನವೀಯ ವರ್ತನೆ– ಹಲವು ನೌಕರರ ರಾಜೀನಾಮೆ: ಸದನದಲ್ಲಿ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2016, 20:01 IST
Last Updated 24 ನವೆಂಬರ್ 2016, 20:01 IST
ಮೆಟ್ರೊ: ಕನ್ನಡಿಗ  ನೌಕರರಿಗೆ  ಕಿರುಕುಳ
ಮೆಟ್ರೊ: ಕನ್ನಡಿಗ ನೌಕರರಿಗೆ ಕಿರುಕುಳ   
ಬೆಳಗಾವಿ: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದಲ್ಲಿ (ಬಿಎಂಆರ್ ಸಿಎಲ್) ಹೊರರಾಜ್ಯದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕನ್ನಡಿಗ ಉದ್ಯೋಗಿಗಳಿಗೆ ಕಿರುಕುಳ ನಡೆಯುತ್ತಿದೆ ಎಂದು ವಿಧಾನ ಪರಿಷತ್ತಿನಲ್ಲಿ ಗುರುವಾರ ಪ್ರತಿಧ್ವನಿಸಿತು.
 
ಪ್ರಶ್ನೋತ್ತರ ಕಲಾಪ ವೇಳೆ ಸದಸ್ಯ ಆರ್. ಚೌಡರೆಡ್ಡಿ ತೂಪಲ್ಲಿ ಅವರು, ಮೆಟ್ರೊ ನಿಗಮದಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳದಿಂದಾಗಿ ವಿವಿಧ ಹುದ್ದೆಗಳಲ್ಲಿರುವ ಸುಮಾರು 350 ಪದವೀಧರರು ರಾಜೀನಾಮೆ ನೀಡಿದ್ದಾರೆ. ನೇಮಕ ಮಾಡಿಕೊಳ್ಳುವಾಗ ಒಂದು ಹುದ್ದೆ ಇರುತ್ತದೆ. ಆದರೆ, 3 ವರ್ಷ ಕಳೆದ ನಂತರ  ಅವರನ್ನು ಕೆಳಗಿನ ಹುದ್ದೆಗೆ ಹಿಂಬಡ್ತಿ ನೀಡಲಾಗುತ್ತಿದೆ ಎಂದರು.
 
ಇತ್ತೀಚೆಗೆ ಒಬ್ಬ ಉದ್ಯೋಗಿ ತನ್ನ ಮದುವೆ ನಿಶ್ಚಿತಾರ್ಥಕ್ಕೆ ಕೇವಲ ಒಂದು ದಿನ ರಜೆ ಕೇಳಿದರೂ ನೀಡಿಲ್ಲ.  ಕನಿಷ್ಠ ಪಕ್ಷ ಸಂಜೆ ನಡೆಯುವ ಸಭೆಯಿಂದ ವಿನಾಯಿತಿ ನೀಡಿ, ಮಧ್ಯಾಹ್ನದ ನಂತರ ರಜೆ ತೆಗೆದುಕೊಳ್ಳುತ್ತೇನೆ ಎಂದರೂ ಅದನ್ನು ಪರಿಗಣಿಸಿಲ್ಲ. ಇದೆಲ್ಲದಕ್ಕೂ ದಾಖಲೆಗಳಿವೆ.  ಮೇಲಾಧಿಕಾರಿಗಳು ಇಷ್ಟು ಅಮಾನವೀಯವಾಗಿ ವರ್ತಿಸಿದರೆ ಹೇಗೆ?  ಎಂದು ಪ್ರಶ್ನಿಸಿದರು.
 
ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮೆಟ್ರೊ ನಿಗಮದಲ್ಲಿ ಹೆಚ್ಚಾಗಿ ಹೊರ ರಾಜ್ಯದ  ಅಧಿಕಾರಿಗಳೇ ತುಂಬಿಕೊಂಡಿದ್ದಾರೆ.  ಹೀಗಾಗಿ ಕನ್ನಡಿಗರ ಮೇಲೆ ಸಾಕಷ್ಟು ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.
 
ಶಿಸ್ತು ಕ್ರಮ: ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಟ್ರೈನ್ ಆಪರೇಟರ್ ಹುದ್ದೆಗಳಿಗೆ ಡಿಪ್ಲೊಮಾ ಪದವೀಧರರು ಸಾಕು. ಆದರೆ, ಇದರಲ್ಲಿ ಬಿ.ಇ. ಪದವೀಧರರೂ ಇದ್ದಾರೆ. ಹೀಗಾಗಿ ಸ್ವಲ್ಪ ವ್ಯತ್ಯಾಸ ಆಗಿದೆ. ಇವರಿಗೆ ಸೂಕ್ತ ಹುದ್ದೆಗಳನ್ನು ನೀಡುವ ನಿಟ್ಟಿನಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.
 
 ಉದ್ಯೋಗಿಗಳಿಗೆ ಕಿರುಕುಳ ನೀಡಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ತಾಂತ್ರಿಕ ಹುದ್ದೆಗಳಿಗೆ ಅರ್ಹರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಹೊರರಾಜ್ಯದವರೂ ಅವಕಾಶ ಪಡೆಯುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವಂತೆ ಸೂಚನೆಯನ್ನೂ ನೀಡಲಾಗಿದೆ ಎಂದು ಸಚಿವ ಜಾರ್ಜ್ ವಿವರಿಸಿದರು.
 
**
‘ಚಾಕೊಲೆಟ್ ಮೂಲಕ ಮಾದಕ ವ್ಯಸನಿಗಳನ್ನಾಗಿ ಮಾಡುವ ಜಾಲ’
ಬೆಳಗಾವಿ: ಶಾಲಾ ಮಕ್ಕಳ ಕೈಗೆ ಕಡಿಮೆ ಪ್ರಮಾಣದಲ್ಲಿ ಮಾದಕ ಪದಾರ್ಥ ಇರುವ ಚಾಕೊಲೆಟ್ ನೀಡಿ, ಕ್ರಮೇಣ ಅವರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವಂತಹ ಜಾಲ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
 
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯೆ ತಾರಾ ಅನೂರಾಧ ಅವರು, ಅಕ್ರಮ ವಲಸಿಗರ ಬಗ್ಗೆ ಕೇಳಿದ ಪ್ರಶ್ನೆಗೆ ಪರಮೇಶ್ವರ್ ಉತ್ತರಿಸಿದರು.
 
ವಿದೇಶಿ ಪ್ರಜೆಗಳು ವಿದ್ಯಾಭ್ಯಾಸ ನೆಪದಲ್ಲಿ ಹಿಂದೆಲ್ಲಾ ಒಬ್ಬರೇ ಬರುತ್ತಿದ್ದರು. ಆದರೀಗ ಪತಿ, ಪತ್ನಿ ಇಬ್ಬರೂ ಯಾವುದೋ ಡಿಪ್ಲೊಮಾ ಕೋರ್ಸ್ ಗೆ ಪ್ರವೇಶ ಪಡೆದು ಇಲ್ಲಿಗೆ ಬರುತ್ತಾರೆ. ಜೊತೆಗೆ ತಮ್ಮ ಮಕ್ಕಳನ್ನೂ ಕರೆತರುತ್ತಾರೆ. ಪ್ರಮುಖ ಶಾಲೆಗಳಲ್ಲಿ ಆ ಮಕ್ಕಳಿಗೆ ಪ್ರವೇಶ ಪಡೆಯುತ್ತಾರೆ. ತಮ್ಮ ಮಕ್ಕಳ ಮೂಲಕ ಅಲ್ಲಿನ ಶಾಲಾ ಮಕ್ಕಳಿಗೆ ಮಾದಕ ಪದಾರ್ಥ ಇರುವ ಚಾಕೊಲೆಟ್ ನೀಡುತ್ತಾರೆ. ಇದು ಈಗ ಹೊಸ ಪದ್ಧತಿ ಆರಂಭವಾಗಿದೆ ಎಂದರು.
 
ಶಾಲಾ ಮಕ್ಕಳು ಕ್ರಮೇಣ ಇದೇ ಚಾಕೊಲೆಟ್ ಬಯಸುತ್ತಾರೆ. ಬೆಳವಣಿಗೆ ಆದಂತೆಲ್ಲಾ ಮಾದಕ ವಸ್ತುಗಳು ಇಲ್ಲದೆ ಜೀವನವೇ ಇಲ್ಲ ಎಂಬ ಸ್ಥಿತಿಗೆ ತಲುಪುತ್ತಾರೆ. ಇದನ್ನು ತಡೆಗಟ್ಟುವುದು ಸವಾಲು ಆಗಿದೆ ಎಂದು ಹೇಳಿದರು. 
 
ಕೋರ್ಸ್ ಅವಧಿ ಮುಗಿದರೂ ಸಹ ತಮ್ಮ  ದೇಶದ ರಾಯಭಾರಿ ಕಚೇರಿ ಮೇಲೆ ಪ್ರಭಾವ ಬೀರಿ ವೀಸಾ ಅವಧಿಯನ್ನು ವಿಸ್ತರಿಸಿಕೊಳ್ಳುತ್ತಾರೆ ಎಂದು ವಿವರಿಸಿದರು. 
ಸದ್ಯ ಬಾಂಗ್ಲಾ ದೇಶದ 283 ಮತ್ತು ನೈಜೀರಿಯಾದ ಇಬ್ಬರು ಪ್ರಜೆಗಳು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವುದು ಪತ್ತೆ ಹಚ್ಚಲಾಗಿದೆ. ಅಕ್ರಮ ವಲಸಿಗರನ್ನು ತಡೆಗಟ್ಟಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ.  ಅಲ್ಲದೆ, ಪ್ರತಿ ಪೊಲೀಸ್ ಠಾಣೆಗೂ ಸೂಚನೆ ನೀಡಲಾಗಿದ್ದು, ಆ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿರುವ ವಲಸಿಗರ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.
 
**
ಯಾವುದೇ ರೀತಿಯ ಕಿರುಕುಳ ನಡೆದರೂ ದೂರು ನೀಡಲು ಸಮಿತಿ ಇದೆ. ಉದ್ಯೋಗಿಗಳು ಆನ್ ಲೈನ್ ವ್ಯವಸ್ಥೆ ಮೂಲಕವೂ ದೂರು ಸಲ್ಲಿಸಬಹುದು.
-ಕೆ.ಜೆ. ಜಾರ್ಜ್,
ಬೆಂಗಳೂರು ಅಭಿವೃದ್ಧಿ ಸಚಿವ

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.