ADVERTISEMENT

ಮೇಕೆದಾಟು ವಿದ್ಯುತ್ ಯೋಜನೆ ಜಾರಿ ಖಚಿತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ತುಮಕೂರು: ತಮಿಳುನಾಡಿನ ತಗಾದೆಯ ನಡುವೆಯೂ ರಾಜ್ಯ ಸರ್ಕಾರವು ಮೇಕೆದಾಟು ಮತ್ತು ಶಿವನಸಮುದ್ರದಲ್ಲಿ ಜಲ ವಿದ್ಯುತ್ ಯೋಜನೆ ಜಾರಿಗೊಳಿಸುವುದು ಖಚಿತ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಗುರುವಾರ ಇಲ್ಲಿ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದೊಳಗಿನ ಪ್ರದೇಶದಲ್ಲಿ ಜಲ ವಿದ್ಯುತ್ ಯೋಜನೆ ಜಾರಿ ಮಾಡುವುದರಿಂದ ತಮಿಳುನಾಡಿನ ಪಾಲಿನ ನೀರಿಗೆ ಸಮಸ್ಯೆ ಆಗುವುದಿಲ್ಲ. ಇದರಿಂದ 500 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿದೆ ಎಂದರು.

ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದರೆ ರಾಜ್ಯವು ಸಮರ್ಥವಾಗಿ ವಾದ ಮಂಡಿಸಲಿದೆ. `ಇಲ್ಲಿನ ಯೋಜನೆಗೆ ಅವರು ಸಹಕರಿಸಿದರೆ, ಹೊಗೇನಕಲ್ ಯೋಜನೆಗೆ ನಾವು ಸಹ ಸಹಕರಿಸುತ್ತೇವೆ' ಎಂದರು.

ಜಯಲಲಿತಾ ಪತ್ರ: ಕಾವೇರಿ ನದಿಪಾತ್ರದಲ್ಲಿ ತಮಿಳುನಾಡಿನ ಅನುಮತಿ ಇಲ್ಲದೆ ಯಾವುದೇ ಜಲವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ನೆರೆಯ ಕರ್ನಾಟಕ ಸರ್ಕಾರಕ್ಕೆ ತಾಕೀತು ಮಾಡುವಂತೆ ಒತ್ತಾಯಿಸಿ ತಮಿಳುನಾಡುನ ಮುಖ್ಯಮಂತ್ರಿ ಜೆ.ಜಯಲಲಿತಾ ಮಂಗಳವಾರವಷ್ಟೇ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. 

ಕಾವೇರಿ ನಿರ್ವಹಣಾ ಮಂಡಳಿ ರಚನೆ ಆಗುವವರೆಗೂ ಕಾವೇರಿ ನದಿಪಾತ್ರದಲ್ಲಿ ಕರ್ನಾಟಕದ ಯಾವುದೇ ಯೋಜನೆಗಳಿಗೆ ಒಪ್ಪಿಗೆ ನೀಡದಂತೆ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆಯೂ ಜಯಾ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.