ADVERTISEMENT

ಮೇಲ್ಮನೆ ಮತದಾನ ಶಾಂತಿಯುತ

ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ನೀರಸ ಮತದಾನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 20:29 IST
Last Updated 8 ಜೂನ್ 2018, 20:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಧಾನ ಪರಿಷತ್‌ನ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳ 6 ಸ್ಥಾನಗಳಿಗೆ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆದಿದ್ದು, ಎಲ್ಲ 70 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇ.91.84) ಮತದಾನ ನಡೆದಿದ್ದರೆ, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಕಡಿಮೆ (ಶೇ.64.11) ಮತದಾನವಾಗಿದೆ. ಜೂನ್ 12ರಂದು ಮತಎಣಿಕೆ ನಡೆಯಲಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಬಗ್ಗೆ ಕೆಲವರು ಅತೃಪ್ತಿ ವ್ಯಕ್ತಪಡಿಸಿದ್ದನ್ನು ಬಿಟ್ಟರೆ, ಯಾವುದೇ ಗೊಂದಲ, ಗದ್ದಲಗಳಿಲ್ಲದೆ ಮತದಾನ ಪೂರ್ಣಗೊಂಡಿದೆ. ಎಲ್ಲ ಮತಗಟ್ಟೆಗಳಲ್ಲೂ ನಿಗದಿತ ಸಮಯಕ್ಕೇ ಪ್ರಕ್ರಿಯೆ ಶುರುವಾಯಿತು. ಕರಾವಳಿ ಭಾಗದಲ್ಲಿ ಮತದಾರರ ಉತ್ಸಾಹಕ್ಕೆ ಮಳೆರಾಯ ಅಡ್ಡಿಯಾದನು.

ADVERTISEMENT

ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ಶೇ 6ರಷ್ಟು ಮಾತ್ರ ಮತದಾನ ನಡೆದಿದ್ದು, 11 ಗಂಟೆ ನಂತರ ಬಿರುಸು ಪಡೆದುಕೊಂಡಿತು. ಬೆಂಗಳೂರಿನ ಕೆಲ ಮತಗಟ್ಟೆಗಳು ಮಧ್ಯಾಹ್ನದ ವೇಳೆ ಬಿಕೋ ಎನ್ನುತ್ತಿದ್ದವು. ಸಂಜೆ 4ರ ನಂತರ ಜನ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದರು.

ನಾಣ್ಯ ಹಂಚುತ್ತಿದ್ದ: ಕಲಬುರ್ಗಿ ಜಿಲ್ಲೆ ವಾಡಿ ಪಟ್ಟಣದ ಮತಗಟ್ಟೆ ಬಳಿ ಜೆಡಿಎಸ್‌ ಅಭ್ಯರ್ಥಿ ಪ್ರತಾಪ್ ರೆಡ್ಡಿ ಅವರಿಗೆ ಮತ ಹಾಕುವಂತೆ ಬೆಳ್ಳಿ ನಾಣ್ಯಗಳನ್ನು ಹಂಚುತ್ತಿದ್ದ ಭಾಸ್ಕರ್‌ ರೆಡ್ಡಿ ಎಂಬಾತನನ್ನು ಬಂಧಿಸಿದ ಪೊಲೀಸರು, ತಲಾ 10 ಗ್ರಾಂನ 48 ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡರು.

ನಾಣ್ಯದ ಒಂದು ಬದಿಯಲ್ಲಿ ಸಾಯಿಬಾಬಾ, ಇನ್ನೊಂದು ಬದಿಯಲ್ಲಿ ‘ಓಂ’ ಗುರುತು ಇದೆ. ‌ ‘ನಾಣ್ಯ ಪಡೆದರೆ ಸಾಯಿಬಾಬಾನ ಮೇಲೆ ಪ್ರಮಾಣ ಮಾಡಿದಂತೆ. ಎಲ್ಲರೂ ಜೆಡಿಎಸ್‌ಗೇ ಮತ ಹಾಕಬೇಕು’ ಎಂದು ಬ್ಲ್ಯಾಕ್‌ಮೇಲ್ ಮಾಡಿ ನಾಣ್ಯ ಹಂಚುತ್ತಿದ್ದ ಎಂದು ವಾಡಿ ಪೊಲೀಸರು ಹೇಳಿದ್ದಾರೆ.
*
ಆರು ಕ್ಷೇತ್ರಗಳಲ್ಲಿ ನಡೆದ ಮತದಾನದ ಪ್ರಮಾಣ

ಕ್ಷೇತ್ರ;            ಶೇಕಡವಾರು ಮತದಾನ

ಆಗ್ನೇಯ ಶಿಕ್ಷಕರ ಕ್ಷೇತ್ರ;  91.84

ನೈರುತ್ಯ ಶಿಕ್ಷಕರ ಕ್ಷೇತ್ರ;  80.45

ದಕ್ಷಿಣ ಶಿಕ್ಷಕರ ಕ್ಷೇತ್ರ;     79.91

ಈಶಾನ್ಯ ಪದವೀಧರ ಕ್ಷೇತ್ರ ; 70.13

ನೈರುತ್ಯ ಪದವೀಧರ ಕ್ಷೇತ್ರ;   70.04

ಬೆಂಗಳೂರು ಪದವೀಧರ ಕ್ಷೇತ್ರ;  64.11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.