ADVERTISEMENT

ಮೈಸೂರಲ್ಲಿ ಹಬ್ಬ: ಹಂಪಿಯಲ್ಲಿ ಬರೀ ದಿಬ್ಬ

ಮಹಾನವಮಿ ದಿಬ್ಬಕ್ಕೆ 500ನೇ ವರ್ಷದ ಸಂಭ್ರಮ

ಬಸವರಾಜ ಮರಳಿಹಳ್ಳಿ
Published 11 ಅಕ್ಟೋಬರ್ 2013, 19:30 IST
Last Updated 11 ಅಕ್ಟೋಬರ್ 2013, 19:30 IST

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯ ‘ಮಹಾನವಮಿ ದಿಬ್ಬ’ಕ್ಕೆ 500ನೇ ವರ್ಷದ ಸಂಭ್ರಮ. ವಿಜಯನಗರದ ಅರಸರು ಕ್ರಿ.ಶ. 1513ರಲ್ಲಿ ಈ ದಿಬ್ಬ ನಿರ್ಮಿಸಿದ್ದರು. ಮೈಸೂರಲ್ಲಿ ಹಬ್ಬದ ಸಂಭ್ರಮವಿದ್ದರೆ, ಐದನೂರರ ಸಂಭ್ರಮದಲ್ಲಿರಬೇಕಾದ ದಿಬ್ಬದಲ್ಲಿ ನೀರವ ಮೌನ ಮಡುಗಟ್ಟಿದೆ.  

ವಿಜಯನಗರದ ಅರಸರ ಸಾಮಂತರಾಗಿದ್ದ ಮೈಸೂರು ಅರಸರು ಇದೇ ದಿಬ್ಬದಲ್ಲಿ ಮಹಾನವಮಿ ಆಚರಿಸುತ್ತಿದ್ದರು. ಈಗಿನ ಮೈಸೂರು ದಸರಾ ಮಾದರಿಯಲ್ಲಿ ಆನೆ, ಕುದುರೆ, ಕಾಲ್ದಳಗಳ ಮೆರವಣಿಗೆ ಯ ವೈಭವ, ಹಬ್ಬದ ಸಂಭ್ರಮ ಅಲ್ಲಿರುತ್ತಿತ್ತು ಎಂಬುದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಅಂತಹ ಐತಿಹಾಸಿಕವಾದ ಮಹಾನವಮಿ ದಿಬ್ಬ ಈಗ ಕೇವಲ ಕಲ್ಲಿನ ಬೃಹತ್‌ ಕಟ್ಟೆಯಾಗಿ ಉಳಿದಿದೆ.

ವಿಜಯನಗರದ ಗತ ವೈಭವದ ಇತಿಹಾಸವನ್ನು ಹಂಪಿಯ ಸುತ್ತಮುತ್ತಲಿನಲ್ಲಿರುವ ಒಂದೊಂದು ಸ್ಮಾರಕಗಳು ಸಾರಿ ಹೇಳುತ್ತವೆ. ಆ ಇತಿಹಾಸದ ಪುನರ್‌ಮನನ ಮಾಡುವ ಉದ್ದೇಶದಿಂದಲೇ ಸರ್ಕಾರ ಪ್ರತಿವರ್ಷ ಕೋಟಿಗಟ್ಟಲೇ ಖರ್ಚು ಮಾಡಿ ಹಂಪಿ ಉತ್ಸವ ಆಚರಿಸುತ್ತದೆ. ಆದರೆ, ಇತಿಹಾಸದ ಒಂದು ಭಾಗವಾದ ಮಹಾನವಮಿ ದಿಬ್ಬ 500 ವರ್ಷ ಪೂರೈಸಿರುವ ಬಗ್ಗೆ ಸಣ್ಣ ಸಂಭ್ರಮಾಚರಣೆಗೆ ಮುಂದಾಗದಿರುವುದು ಸರ್ಕಾರಕ್ಕೆ ಇತಿಹಾಸದ ಬಗ್ಗೆ ಇರುವ ಕಾಳಜಿ ವ್ಯಕ್ತವಾಗುತ್ತದೆ.

ಹಿನ್ನೆಲೆ: ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ಕ್ರಿ.ಶ. 1513ರಲ್ಲಿ  ಒಡಿಶಾ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಜಯ ಗಳಿಸಿದ್ದರು. ಈ ವಿಜಯದ ಸಂಕೇತವಾಗಿ ರಾಜಧಾನಿ ಹಂಪಿಯಲ್ಲಿ ‘ಮಹಾನವಮಿ ದಿಬ್ಬ’ ನಿರ್ಮಿಸಿದ. ತನ್ನ ಸೈನಿಕರಿಗೆ ಉತ್ಸಾಹ ತುಂಬುವ ಉದ್ದೇಶದಿಂದ ಅಂದಿನಿಂದ ಈ ದಿಬ್ಬದಲ್ಲಿ ಮಹಾನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಆರಂಭಿಸಿದರು ಎಂದು ವಿದೇಶಿ ಬರಹಗಾರ ಪಾಯಸ್‌ ಉಲ್ಲೇಖಿಸಿದ್ದಾರೆ.

ಪ್ರತಿ ವರ್ಷ ನಡೆಯುತ್ತಿದ್ದ ಈ ಮಹಾನವಮಿ ಹಬ್ಬದಲ್ಲಿ ವಿಜಯನಗರದ ಅರಸರ ಸಾಮಂತ ರಾಜರು, ಒಡೆಯರು ಸೈನಿಕರು ಪಾಲ್ಗೊಳ್ಳುತ್ತಿದ್ದರು. ಮುಂದೆ ವಿಜಯನಗರ ಅರಸ ಆಳ್ವಿಕೆ ಅಂತ್ಯಗೊಂಡ ನಂತರ ಸಾಮಂತರ ಅರಸು ಹಾಗೂ ಒಡೆಯರು ತಮ್ಮ ತಮ್ಮ ರಾಜ್ಯ ಹಾಗೂ ಆಸ್ಥಾನಗಳಲ್ಲಿ ಮಹಾನವಮಿ ಹಬ್ಬ ಆಚರಿಸಲು ಆರಂಭಿಸಿದರು. ಅವರಲ್ಲಿ ಮೈಸೂರು ಅರಸರೂ ಒಬ್ಬರು. ಆದ್ದರಿಂದ ಇಂದಿನ ಮೈಸೂರು ದಸರಾಕ್ಕೆ ಹಂಪಿಯ ಮಹಾನವಮಿ ದಿಬ್ಬದಲ್ಲಿ ಆಚರಿಸುತ್ತಿದ್ದ ಮಹಾನವಮಿ ಹಬ್ಬವೇ ಮೂಲ ಎಂಬುದನ್ನು ಇತಿಹಾಸಕಾರರು ಹಲವು ಕಡೆಗಳಲ್ಲಿ ಹೇಳಿದ್ದಾರೆ.

ವೈಶಿಷ್ಟ್ಯ: ಹಾನವಮಿ ದಿಬ್ಬದಲ್ಲಿ ಸದ್ಯಕ್ಕೆ ಮೂರು ಸ್ತರಗಳಲ್ಲಿರುವ ವಿಶಾಲವಾದ ವೇದಿಕೆ ಮಾತ್ರ ಇದೆ. ತಳ ವಿಸ್ತಾರ 40 ಚದರ ಮೀಟರ್‌ ಇದ್ದು, ಮೇಲು ಸ್ತರ 24 ಮೀ ವಿಸ್ತೀರ್ಣ ಹೊಂದಿದೆ. ಪ್ರತಿಯೊಂದು ಸ್ತರದಲ್ಲಿಯೂ ಗ್ರಾನೈಟ್‌ ಕಲ್ಲುಗಳನ್ನು ಅಳವಡಿಸಲಾಗಿದ್ದು, ಇವುಗಳ ಮೇಲೆ ಮಾಂಡಲೀಕರು ಮತ್ತು ವಿದೇಶಿ ರಾಯಭಾರಿಗಳು ರಾಜನಿಗೆ ಕಾಣಿಗೆ ಸಲ್ಲಿಸುತ್ತಿರುವ ದೃಶ್ಯಗಳಿದ್ದು, ಆನೆ, ಕುದುರೆ ಹಾಗೂ ಕಾಲ್ದಳಗಳ ಮೆರವಣಿಗೆಯ ಚಿತ್ರಗಳೂ ಇವೆ. ಪಶ್ಚಿಮ ಭಾಗದಲ್ಲಿ ಸೂಕ್ಷ್ಮ ಫಲಕಗಳನ್ನು ನಿರ್ಮಿಸಲಾಗಿದೆ.

‘ಈಗಿನ ಮೈಸೂರು ನಾಡಹಬ್ಬಕ್ಕೆ ಹಂಪಿಯ ಮಹಾನವಮಿ ದಿಬ್ಬದಲ್ಲಿ ಆಚರಿಸುತ್ತಿದ್ದ ಮಹಾನವಮಿ ಹಬ್ಬವೇ ಮೂಲ. ಇಂಥ ಮಹಾನವಮಿ ದಿಬ್ಬಕ್ಕೆ 500 ವರ್ಷ ತುಂಬಿದ್ದರೂ ಸರ್ಕಾರದಿಂದ ಕನಿಷ್ಠ ಸಣ್ಣ ಸಂಭ್ರಮಾಚರಣೆ ಇಲ್ಲದಿರುವುದು ವಿಷಾದಕರ.

ನಾಡಹಬ್ಬ ಕೇವಲ ಮೈಸೂರಿಗಷ್ಟೇ ಸೀಮಿತವಾಗಿದ್ದು, ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಂಪಿ ಕಡೆಗೂ ಗಮನ ಹರಿಸಬೇಕು’ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ‘ಪ್ರಜಾವಾಣಿ’ಗೆ ಯೊಂದಿಗೆ ಮಾತನಾಡಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.