ADVERTISEMENT

ಮೈಸೂರಿನಲ್ಲಿ ಆನೆಗಳ ಹಿಂಡು: ಆತಂಕದಲ್ಲಿ ಜನತೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:11 IST
Last Updated 2 ಡಿಸೆಂಬರ್ 2013, 8:11 IST

ಮೈಸೂರು: ಇಲ್ಲಿನ ಎಚ್.ಡಿ. ಕೋಟೆ ರಸ್ತೆಯಲ್ಲಿರುವ ಚಿತ್ರವನ ರೆಸಾರ್ಟ್ ಪಕ್ಕದ ಕಬೀರ್ ಎಂಬುವರಿಗೆ ಸೇರಿದ ತೋಟದಲ್ಲಿ ಆನೆಗಳ ಹಿಂಡು ಸೋಮವಾರ ಬೆಳಿಗ್ಗೆ ಬೀಡು ಬಿಟ್ಟಿದ್ದು, ನಗರದ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ಭಾನುವಾರ ಸಂಜೆ  ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿಯಲ್ಲಿ ಕಬ್ಬಿನ ಗದ್ದಗೆ ನುಗ್ಗಿ ಬೆಳೆಯನ್ನು ಹಾಳು ಮಾಡಿದ್ದ ಇವು ಅಲ್ಲಿಂದ ಮೈಸೂರನ್ನು ಪ್ರವೇಶಿಸಿದೆ. ಹಿಂಡಿನಲ್ಲಿ 7 ಆನೆಗಳಿವೆ. ಜನರಿಗೆ ಇದುವರೆಗೂ ಯಾವುದೇ ತೊಂದರೆಯಾಗಿಲ್ಲ.

ಕಬೀರ್ ಅವರು ತೋಟದಲ್ಲಿದ್ದಾಗ ಬೆಳಿಗ್ಗೆ 6.30ಕ್ಕೆ ಆನೆಗಳನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನ ವಲಯಕ್ಕೆ ಬರುವ ಓಂಕಾರ ಅರಣ್ಯ ವಲಯದಿಂದ ಬಂದಿವೆ ಎಂದು ಅರಣ ಅಧಿಕಾರಿಗಳು ತಿಳಿಸಿದ್ದಾರೆ.

ಆನೆಗಳನ್ನು ಅವು ಬಂದ ದಾರಿಯಲ್ಲೇ ಕಾಡಿಗಟ್ಟಲು ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಮ್ ಹೂಡಿದ್ದಾರೆ. ಸಂಜೆ ನಂತರ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು  ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್. ಗಾವ್ಕಂರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.