ADVERTISEMENT

ಮೈಸೂರಿನಲ್ಲಿ ಮರ್ಯಾದಾ ಹತ್ಯೆ ಶಂಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST
ಮೈಸೂರಿನಲ್ಲಿ ಮರ್ಯಾದಾ ಹತ್ಯೆ ಶಂಕೆ
ಮೈಸೂರಿನಲ್ಲಿ ಮರ್ಯಾದಾ ಹತ್ಯೆ ಶಂಕೆ   

ಮೈಸೂರು: ಮದುವೆ ವಿಚಾರವಾಗಿ ಸಹೋದರಿಯೊಂದಿಗೆ ಜಗಳ ತೆಗೆದ ಅಣ್ಣ ಆಕೆಯ ಮೇಲೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ಆಲನಹಳ್ಳಿ ಬಡಾವಣೆಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ದಿಂಡಗಾಡು ಗ್ರಾಮದ ಲೇ. ಕೆಂಡಗಣ್ಣ-ಪದ್ಮಾ ಅವರ ಪುತ್ರಿ ಡಿ.ಕೆ. ಸ್ಮೃತಿ (ಶೃತಿ) ಕೊಲೆಯಾದ ದುರ್ದೈವಿ. ಚಾಮರಾಜನಗರ ತಾಲ್ಲೂಕು ಕುದೇರು ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಇವರು ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆಲನಹಳ್ಳಿಯಲ್ಲಿ ಸ್ನೇಹಿತೆ ಸವಿತಾ ಹೆಗಡೆ ಅವರೊಂದಿಗೆ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು.

ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾಗಿರುವ ಸುದೀಪ್‌ಕುಮಾರ್ ಅವರನ್ನು ಸ್ಮೃತಿ (30) ಪ್ರೀತಿಸುತ್ತಿದ್ದರು. ಇಬ್ಬರೂ ಮಾನಸಗಂಗೋತ್ರಿಯಲ್ಲಿ ವ್ಯಾಸಂಗ ಮಾಡುವಾಗ ಪ್ರೇಮಾಂಕುರವಾಗಿತ್ತು. ಏಳು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಈ ಜೋಡಿ 2011ರ ನ.23ರಂದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹವಾಗಿದ್ದರು. ಅನ್ಯ ಜಾತಿಗೆ (ಯುವತಿ ಲಿಂಗಾಯತ ಮತ್ತು ಯುವಕ ದಲಿತ) ಸೇರಿದ್ದರಿಂದ ಮದುವೆ ಆದ ವಿಚಾರವನ್ನು ಇಬ್ಬರು ಮನೆಯವರಿಗೆ ಹೇಳಿಕೊಂಡಿರಲಿಲ್ಲ. ನಂತರದ ದಿನಗಳಲ್ಲಿ ಮದುವೆ ವಿಚಾರ ಇಬ್ಬರ ಮನೆಯವರಿಗೆ ಗೊತ್ತಾಗಿತ್ತು.

ADVERTISEMENT

ಸ್ನೇಹಿತೆ ಸವಿತಾ ಹೆಗಡೆ ವಾರದ ಹಿಂದೆ ಕೇರಳಕ್ಕೆ ತೆರೆಳಿದ್ದರು. ಹಾಗಾಗಿ ಸ್ಮೃತಿ ಊರಿನಿಂದ ಅಜ್ಜಿ ನಂಜಮ್ಮ ಅವರನ್ನು ಕರೆಸಿಕೊಂಡಿದ್ದರು. ಸೋಮವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಸ್ಮೃತಿ ಮನೆಗೆ ಬಂದ ಸಹೋದರ ಮಹದೇವ ಮದುವೆ ವಿಚಾರವಾಗಿ ಜಗಳ ತೆಗೆದ. ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ಜಗಳ ಕೊಲೆಯಲ್ಲಿ ಅಂತ್ಯಗೊಂಡಿತು. ಈ ಸಂದರ್ಭದಲ್ಲಿ ನಂಜಮ್ಮ ಕೊಠಡಿಯಲ್ಲಿದ್ದರು. ಕೇರಳಕ್ಕೆ ತೆರಳಿದ್ದ ಸವಿತಾ ಮಂಗಳವಾರ ಮುಂಜಾನೆ 4.30ಕ್ಕೆ ಆಲನಹಳ್ಳಿಗೆ ಬಂದಾಗ ಮನೆ ಬಾಗಿಲು ತೆರೆದಿತ್ತು. ಗಾಬರಿಯಿಂದ ಒಳಹೋಗಿ ನೋಡಿದಾಗ ಸ್ಮೃತಿ ಕೊಲೆಯಾಗಿರುವುದು ಬೆಳಕಿಗೆ ಬಂತು. ಕೊಲೆ ವಿಷಯ ತಿಳಿದ ಸುದೀಪ್‌ಕುಮಾರ್ ನಗರಕ್ಕೆ ಮುಂಜಾನೆ ಆಗಮಿಸಿದರು.

ಸ್ಮೃತಿಯನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತು. ನೆಚ್ಚಿನ ಪ್ರಾಧ್ಯಾಪಕಿಯನ್ನು ಕಳೆದುಕೊಂಡ ಕುದೇರು ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕಣ್ಣಾಲಿಗಳು ಒದ್ದೆಯಾಗಿದ್ದವು. ತಲೆಮರೆಸಿಕೊಂಡಿರುವ ಮಹದೇವನ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಅಂತರ್ಜಾತಿ ವಿವಾಹಕ್ಕೆ ಹುಡುಗಿ ಮನೆಯವರ ಸಮ್ಮತಿ ಇರಲಿಲ್ಲ. ಹಾಗಾಗಿ ಸ್ಮೃತಿ ಕೊಲೆಯನ್ನು ಮರ್ಯಾದೆ ಹತ್ಯೆ ಎಂದು ಬಣ್ಣಿಸಲಾಗುತ್ತಿದೆ. ನಗರ ಪೊಲೀಸ್ ಕಮಿಷನರ್ ಕೆ.ಎಲ್.ಸುಧೀರ್, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಬಸವರಾಜ ಮಾಲಗತ್ತಿ, ಎಸಿಪಿ (ದೇವರಾಜ) ಚೆಲುವರಾಜು ಅವರು ಶವಾಗಾರಕ್ಕೆ ಭೇಟಿ ನೀಡಿದ್ದರು. ನಜರ್‌ಬಾದ್ ಪೊಲೀಸರು ಪ್ರಕರಣ ದಾಖಲಿಸಿಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.