ಮೈಸೂರು: ನಗರದ ಎನ್.ಆರ್.ಮೊಹಲ್ಲಾದ ಎ.ಜೆ.ಬ್ಲಾಕ್‌ನಲ್ಲಿ ಚಿರತೆಯೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಅಬ್ದುಲ್ ರೆಹಮಾನ್ ಶರೀಫ್ (60) ಗಾಯಗೊಂಡವರು. ಇವರು ಆಟೋ ನಿಲ್ಲಿಸುವ ಶೆಡ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಬೆಳಿಗ್ಗೆ 6.30ರ ವೇಳೆಗೆ ನಾಯಿ ಬೊಗಳಿದ್ದನ್ನು ಕೇಳಿ ಹೊರಬಂದು ನೋಡಿದಾಗ ಧುತ್ತನೆ ಇವರ ಮೇಲೆ ಎರಗಿದ ಚಿರತೆ ತಲೆ, ಕಾಲು ಮತ್ತು ಕೈಗಳನ್ನು ಕಚ್ಚಿ ಗಾಯಗೊಳಿಸಿತು.
ತಕ್ಷಣವೇ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ನೈಲಾನ್ ಬಲೆಯಿಂದ ಚಿರತೆಯನ್ನು ಬಂಧಿಸಲು ಮುಂದಾದರಾದರೂ ಪ್ರಯೋಜನವಾಗಲಿಲ್ಲ.
ಜನರ ಗಲಾಟೆಯಿಂದ ಚಿರತೆ ದೊಡ್ಡತಾಯಮ್ಮ ದೇವಸ್ಥಾನದ ಸಮೀಪವಿರುವ ದಟ್ಟ ಪೊದೆಯೊಳಗೆ ನುಗ್ಗಿತು. ಪಶು ವೈದ್ಯಾಧಿಕಾರಿ ಡಾ.ರಮೇಶ್, ಡಿಸಿಎಫ್ ದೇವರಾಜ್ ಮತ್ತು ಎಸಿಎಫ್ ದುರ್ಗೇಗೌಡ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದರು.
ಸತತ ಏಳು ಗಂಟೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮಧ್ಯಾಹ್ನ 1 ಗಂಟೆ ವೇಳೆಗೆ ಚಿರತೆಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಶಾರ್ಪ್ ಶೂಟರ್ ಅಕ್ರಮ ಪಾಷಾ ಅರಿವಳಿಕೆ ಮದ್ದು ನೀಡಿ ಚಿರತೆಯನ್ನು ಬಂಧಿಸಿದರು.
ಅರಿವಳಿಕೆ ಮದ್ದಿನಿಂದ ನಿತ್ರಾಣಗೊಂಡಿದ್ದ ಚಿರತೆಗೆ ಚಾಮರಾಜೇಂದ್ರ ಮೃಗಾಲಯದಲ್ಲಿ ಚಿಕಿತ್ಸೆ ನೀಡಿ, ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಯಿತು.ಘಟನೆ ಹಿನ್ನೆಲೆಯಲ್ಲಿ ಎನ್.ಆರ್.ಪೊಲೀಸ್ ಠಾಣೆ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.