ಸಂಡೂರು: ಪಟ್ಟಣದ ಆರನೇ ವಾರ್ಡ್‌ನಲ್ಲಿ ಮನೆ ನಿರ್ಮಾಣಕ್ಕೆ ಭೂಮಿ ಅಗೆಯುವಾಗ ಸಿಕ್ಕ ಮೊಘಲರ ಕಾಲದ ಬಂಗಾರದ ನಾಣ್ಯಗಳನ್ನು ಕೆಲಸಗಾರರು ಮತ್ತು ಮನೆಯ ಮಾಲೀಕ ಹಂಚಿಕೊಳ್ಳುತ್ತಿದ್ದಾಗ ಶನಿವಾರ ಹಠಾತ್ ದಾಳಿ ನಡೆಸಿದ ಪೊಲೀಸರು ಅವರನ್ನು ಬಂಧಿಸಿ, ನಾಣ್ಯಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಈ ಬಂಗಾರದ ನಾಣ್ಯಗಳ ಮೇಲೆ ಅರೆಬಿಕ್ ಲಿಪಿ ಹಾಗೂ ಹಿಂದೂ ದೇವರುಗಳ ಚಿತ್ರಗವಿದೆ. ಇವುಗಳಲ್ಲಿ ಕೆಲವು ವಿಜಯನಗರದ ಅರಸರ ಕಾಲದ ನಾಣ್ಯಗಳು ಎನ್ನಲಾಗಿದೆ.ಇವು ಬೆಲೆ ಕಟ್ಟಲಾಗದ ಪ್ರಾಚೀನ ವಸ್ತುಗಳಾದರೂ ಸದ್ಯದ ಬಂಗಾರದ ಮಾರುಕಟ್ಟೆ ದರದ ಮೇಲೆ ಇವುಗಳ ಬೆಲೆ 18 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
ನಿವೇಶನದ ಮಾಲೀಕ ಕಪ್ಪಗಲ್ ವಿರೇಶ್ ಎಂಬುವವರ ಮನೆ ಕಟ್ಟಿಸಲು ಮುಂದಾಗಿದ್ದರು. ಭೂಮಿಯನ್ನು ಅಗೆಯುವಾಗ 300 ವರ್ಷಗಳಷ್ಟು ಹಳೆಯದಾದ ಮೊಘಲರ ಕಾಲದ್ದು ಎನ್ನಲಾದ 214 ಬಂಗಾರದ ನಾಣ್ಯಗಳು ಹಾಗು 110 ಬಂಗಾರದ ಗುಂಡುಗಳು, ಎರಡು ಬುಗಡಿ, 6 ಬಂಗಾರದ ಪದಕಗಳು ಕೆಲಸಗಾರರಿಗೆ ಇದೇ 7ರಂದು ಸಿಕ್ಕವು. ಮನೆಯ ಮಾಲೀಕ ಇದನ್ನು ಯಾರಿಗೂ ತಿಳಿಸದೆ ತನ್ನ ವಶಕ್ಕೆ ತೆಗೆದುಕೊಂಡಿದ್ದರು.
ಬಂಗಾರದ ನಾಣ್ಯಗಳು ಸಿಕ್ಕಿ ವಾರ ಕಳೆದರೂ ಈ ಬಗ್ಗೆ ಚಕಾರವೆತ್ತದ ಮಾಲೀಕನ ವರ್ತನೆಯಿಂದ ಬೇಸರಗೊಂಡ ಕೆಲಸಗಾರರು ತಮಗೂ ಪಾಲು ನೀಡುವಂತೆ ಒತ್ತಾಯಿಸಿ ಜಗಳವಾಡಿದ್ದರು.
ಈ ವಿಷಯ ಸಾರ್ವಜನಿಕರ ಮೂಲಕ ಪೊಲೀಸರ ಕಿವಿಗೆ ಬಿತ್ತು.
ಬಂಗಾರದ ನಾಣ್ಯ ಹಂಚಿಕೊಳ್ಳುವ ಖಚಿತ ಮಾಹಿತಿ ಪಡೆದ ಪೋಲೀಸರು ದಾಳಿ ನಡೆಸಿ, ಆರೋಪಿಗಳಾದ ಕೃಷ್ಣ ನಗರದ ಇಮಾಮ್‌ಬಾಷಾ, ಕುರುಬರ ಬಸವರಾಜ್, ಕಪ್ಪಗಲ್ ವಿರೇಶ್ ಅವರನ್ನು ಬಂಧಿಸಿ, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.