ADVERTISEMENT

ಮೊದಲ ಪೂಜೆ ರಾಘವೇಂದ್ರ ಮಠಕ್ಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 19:34 IST
Last Updated 23 ಮಾರ್ಚ್ 2018, 19:34 IST

ನವದೆಹಲಿ: ರಾಜ್ಯದ ಕೊಪ್ಪಳ ಜಿಲ್ಲೆಯ ಆನೆಗೊಂದಿ ಬಳಿಯ ನವ ವೃಂದಾವನ ಗಡ್ಡಿಯಲ್ಲಿ ಇದೇ 24ರಿಂದ 26ರವರೆಗೆ ನಡೆಯಲಿರುವ ಆರಾಧನಾ ಉತ್ಸವದಲ್ಲಿ ಮೊದಲ ಒಂದೂವರೆ ದಿನದ ಪೂಜೆ ಸಲ್ಲಿಸಲು ಮಂತ್ರಾಲಯದ ರಾಘವೇಂದ್ರ ಮಠಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಅವಕಾಶ ನೀಡಿದೆ.

ನವ ವೃಂದಾವನ ಗಡ್ಡಿಯಲ್ಲಿನ 27.5 ಎಕರೆ ವಿವಾದಿತ ಭೂಮಿಯಲ್ಲಿ ಆರಾಧನೆಗೆ ಅವಕಾಶ ಕೋರಿ ಉತ್ತರಾದಿ ಮಠದ ವತಿಯಿಂದ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಇದೇ 25ರ ಮಧ್ಯಾಹ್ನ 3 ಗಂಟೆಯಿಂದ 26ರ ಸಂಜೆಯವರೆಗಿನ ಒಂದೂವರೆ ದಿನದ ಅವಧಿಯಲ್ಲಿ ಉತ್ತರಾದಿ ಮಠಕ್ಕೆ ಪೂಜಾ ಅವಕಾಶ ನೀಡಿ ಮಧ್ಯಂತರ ಆದೇಶ ಹೊರಡಿಸಿತು.

ತುಂಗಭದ್ರಾ ನದಿಯಿಂದ ಆವೃತವಾಗಿರುವ ನವವೃಂದಾವನ ಗಡ್ಡಿಯಲ್ಲಿ ಆರಾಧನೆ ನಡೆಯುವಾಗ ಎರಡೂ ಬಣಗಳ ನಡುವೆ ಯಾವುದೇ ರೀತಿಯ ಸಂಘರ್ಷಕ್ಕೆ ಅವಕಾಶ ಆಗದಂತೆ ತಡೆಯುವ ನಿಟ್ಟಿನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಏರ್ಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ ನ್ಯಾಯಪೀಠ, ಕಳೆದ ನವೆಂಬರ್‌ 14ರಂದು ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಈ ಮೇಲ್ಮನವಿಯ ಅಂತಿಮ ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿತು.

ADVERTISEMENT

‘ಆರಾಧನಾ ಮಹೋತ್ಸವದ ಪೂಜೆಗೆ ನಮಗೇ ಅವಕಾಶ ನೀಡಬೇಕು’ ಎಂದು ಎರಡೂ ಮಠಗಳ ಪರ ವಕೀಲರಾದ ಸುಬ್ರಹ್ಮಣಿಯಂ ಪ್ರಸಾದ್‌ ಹಾಗೂ ಹುಜೇಫಾ ಅಹ್ಮದಿ ಅವರ ವಾದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿ ಮಿಶ್ರಾ, ‘ನೀವು ಮೊದಲು ಇಲ್ಲಿಂದ ಹೊರ ನಡೆಯಿರಿ. ನಿಮ್ಮನ್ನು ಹೊರತುಪಡಿಸಿ ಪೂಜೆಗೆ ಬೇರೆ ಯಾರನ್ನಾದರೂ ನೇಮಿಸುತ್ತೇವೆ’ ಎಂದು ಖಾರವಾಗಿ ನುಡಿದರು.

2017ರ ಏಪ್ರಿಲ್‌ 13ರಿಂದ 15ರವರೆಗೆ ನಡೆದಿದ್ದ ಆರಾಧನಾ ಮಹೋತ್ಸವದಲ್ಲಿ ಮೊದಲೆರಡು ದಿನ ಪೂಜೆಗೆ ಉತ್ತರಾದಿ ಮಠಕ್ಕೆ ಅವಕಾಶ ನೀಡಿದ್ದ ಪೀಠ, ರಾಘವೇಂದ್ರ ಮಠಕ್ಕೆ ಕೊನೆಯ ದಿನ ಪೂಜೆಗೆ ಅವಕಾಶ ನೀಡಿ ಮಧ್ಯಂತರ ಆದೇಶ ನೀಡಿತ್ತು.

ಕೋರ್ಟ್‌ ಆದೇಶದಂತೆ ರಾಘವೇಂದ್ರ ಸ್ವಾಮಿ ಮಠವು ಮೊದಲ ದಿನ ಪೂರ್ವಾರಾಧನೆ ನಡೆಸಲಿದ್ದು, ಎರಡನೇ ದಿನ ಮಧ್ಯಾಹ್ನ 3ರವರೆಗೆ ಮಧ್ಯಾರಾಧನೆ ನೆರವೇರಿಸಲಿದೆ. ಉತ್ತರಾರಾಧನೆಯನ್ನು ಉತ್ತರಾದಿ ಮಠದವರು ನೆರವೇರಿಸಲಿದ್ದಾರೆ ಎಂದು ರಾಘವೇಂದ್ರ ಮಠದ ಸುಯಮೀಂದ್ರ ಆಚಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.