ADVERTISEMENT

ಮೊದಲ ಬಾರಿ ವಿಜಾಪುರ ದ್ರಾಕ್ಷಿಗೆ ಬಂಪರ್ ಬೆಲೆ

ಗಣೇಶ ಚಂದನಶಿವ
Published 31 ಮಾರ್ಚ್ 2011, 19:00 IST
Last Updated 31 ಮಾರ್ಚ್ 2011, 19:00 IST
ಮೊದಲ ಬಾರಿ ವಿಜಾಪುರ ದ್ರಾಕ್ಷಿಗೆ ಬಂಪರ್ ಬೆಲೆ
ಮೊದಲ ಬಾರಿ ವಿಜಾಪುರ ದ್ರಾಕ್ಷಿಗೆ ಬಂಪರ್ ಬೆಲೆ   

ವಿಜಾಪುರ: ಜಿಲ್ಲೆಯಲ್ಲಿ ಬೆಳೆದಿರುವ ಸ್ವಾದಿಷ್ಟ ದ್ರಾಕ್ಷಿಗೆ ಇದೇ ಮೊದಲ ಬಾರಿಗೆ ಬಂಪರ್ ಬೆಲೆ ಬಂದಿದೆ. ಪ್ರತಿ ಕೆ.ಜಿ.ಗೆ ದ್ರಾಕ್ಷಿ 40ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದ್ದು, ಒಣ ದ್ರಾಕ್ಷಿಯ ಬೆಲೆ 150ರಿಂದ 200 ರೂಪಾಯಿ ಇದೆ.

ವಿಜಾಪುರ ಜಿಲ್ಲೆಯ ಮಣ್ಣಿನ ಗುಣ ಹಾಗೂ ವಿಶಿಷ್ಟ ಹವಾಮಾನದಿಂದಾಗಿ ಇಲ್ಲಿ ಬೆಳೆಯುವ ದ್ರಾಕ್ಷಿ ಸ್ವಾದಿಷ್ಟವಾಗಿರುತ್ತದೆ. ಅಷ್ಟು ಹುಳಿಯೂ ಅಲ್ಲದ; ಸಿಹಿ ಸಿಹಿಯಾಗಿರುವ ಈ ದ್ರಾಕ್ಷಿಗೆ ಸಾಗರದಾಚೆಯೂ ಬೇಡಿಕೆ ಇದೆ. ರಫ್ತು ಗುಣಮಟ್ಟದ, ವೈನ್ ತಯಾರಿಕೆಗೆ ಬೇಕಿರುವ ದ್ರಾಕ್ಷಿ ಬೆಳೆಯಲೂ ಈ ಜಿಲ್ಲೆ ಪ್ರಸಿದ್ಧಿ ಪಡೆದಿದೆ.

ಪ್ರತಿ ವರ್ಷವೂ ಸ್ಥಳೀಯ ಮಾರುಕಟ್ಟೆಯಲ್ಲಿ ದ್ರಾಕ್ಷಿಗೆ 20 ರಿಂದ 25 ರೂಪಾಯಿ ದರ ದೊರೆಯುತ್ತಿತ್ತು. ಈಗ ಅದು ದುಪ್ಪಟ್ಟಾಗಿದೆ. ವರ್ತಕರು ರೈತರ ತೋಟಕ್ಕೇ ಹೋಗಿ 30 ರಿಂದ 35 ರೂಪಾಯಿ ಬೆಲೆ ನೀಡಿ ಸ್ಥಳದಲ್ಲಿಯೇ ದ್ರಾಕ್ಷಿ ಖರೀದಿಸುತ್ತಿದ್ದಾರೆ. ಗ್ರಾಹಕರಿಗೆ 40ರಿಂದ 50 ರೂಪಾಯಿ ವರೆಗೆ ಮಾರಾಟ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ 3500 ಕ್ಕಿಂತ ಹೆಚ್ಚು ರೈತರು 7200 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದಿದ್ದಾರೆ. ಈ ವರ್ಷ ವಿಜಾಪುರ ಜಿಲ್ಲೆಯೊಂದರಲ್ಲಿಯೇ 1.13 ಲಕ್ಷ ಟನ್ ದ್ರಾಕ್ಷಿ ಬೆಳೆಯಲಾಗಿದೆ. ಅದರಲ್ಲಿ ಶೇ.20ರಷ್ಟು ಹಸಿ ದ್ರಾಕ್ಷಿಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದ್ದು, ಶೇ.80ರಷ್ಟು ರೈತರು ದ್ರಾಕ್ಷಿಯನ್ನು ಸಂಸ್ಕರಿಸಿ ಒಣ ದ್ರಾಕ್ಷಿ ತಯಾರಿಸುತ್ತಿದ್ದಾರೆ.

ವಿಜಾಪುರ ಜಿಲ್ಲೆಯ ದ್ರಾಕ್ಷಿ ವಿದೇಶಗಳಿಗೂ ರಫ್ತಾಗುತ್ತಿತ್ತು. 1500 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆಯಲಾಗುತ್ತಿತ್ತು. ಕೊಯ್ಲು ನಂತರದ ತಂತ್ರಜ್ಞಾನದ ಕೊರತೆ, ಸಂಸ್ಕರಣೆ ಹಾಗೂ ಸಾಗಾಣಿಕೆಯ ಸಮಸ್ಯೆಯಿಂದಾಗಿ ಬಹುತೇಕ ರೈತರು ಹಿಂದೆ ಸರಿದಿದ್ದಾರೆ. ಈಗ ಕೇವಲ 300 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರಫ್ತು ಗುಣಮಟ್ಟದ ದ್ರಾಕ್ಷಿಯನ್ನು ಬೆಳೆಯಲಾಗಿದೆ.

ನಮ್ಮ ಗ್ರಾಹಕರು ಸಿಹಿ ಸಿಹಿಯಾದ ದ್ರಾಕ್ಷಿಯನ್ನು ಕೇಳಿದರೆ ವಿದೇಶಿ ಗ್ರಾಹಕರಿಗೆ ಹುಳಿ ದ್ರಾಕ್ಷಿಯೇ ಅಚ್ಚು ಮೆಚ್ಚು. ಅದರ ಬಣ್ಣ ಕಡು ಹಸಿರಾಗಿರಬೇಕು. ಕಾಯಿ ದುಂಡು ದುಂಡಾಗಿ ನಿಗದಿತ ವ್ಯಾಸವನ್ನು ಹೊಂದಿರಬೇಕು. ಮಧ್ಯವರ್ತಿಗಳು ಕೈಕೊಟ್ಟಿದ್ದರಿಂದ ಹಾಗೂ ನಿರಂತರ ಶೋಷಣೆ ನಡೆದಿದ್ದರಿಂದ ಬಹುಪಾಲು ರೈತರು ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆಯುವುದನ್ನೇ ಬಿಟ್ಟು ‘ಲೋಕಲ್ ಬ್ರಾಂಡ್’ಗೆ ಮೊರೆ ಹೋಗಿದ್ದಾರೆ.

ವೈನ್ ಗುಣಮಟ್ಟದ ದ್ರಾಕ್ಷಿಯನ್ನೂ ಬೆಳೆಯಲಾಗುತ್ತಿದೆ. ನಿಸರ್ಗ, ಹಂಪಿ ಹೆರಿಟೇಜ್, ರಿಕೊ ಹೆಸರಿನ ಮೂರು ವೈನ್ ತಯಾರಿಕಾ ಘಟಕಗಳಿದ್ದು, ವಾರ್ಷಿಕ 17,500 ಲೀಟರ್ ವೈನ್ ಉತ್ಪಾದಿಸುತ್ತಿವೆ.

‘ನಾವು 30 ವರ್ಷಗಳಿಂದ ದ್ರಾಕ್ಷಿ ಬೆಳೆಯುತ್ತಿದ್ದೇವೆ. ಈ ವರ್ಷದಷ್ಟು ಉತ್ತಮ ಇಳುವರಿ ಹಾಗೂ ಹೆಚ್ಚಿನ ಬೆಲೆ ಯಾವ ವರ್ಷವೂ ಬಂದಿರಲಿಲ್ಲ. ನಮ್ಮ ಗ್ರಾಮವೊಂದರಲ್ಲಿಯೇ ಈ ವರ್ಷ 50 ಕೋಟಿ ರೂಪಾಯಿ ಮೌಲ್ಯದ ದ್ರಾಕ್ಷಿ ಬೆಳೆದಿದೆ’ ಎಂದು ವಿಜಾಪುರ ತಾಲ್ಲೂಕಿನ ಸೋಮದೇವರಹಟ್ಟಿಯ ಪ್ರಗತಿಪರ ರೈತ ಸೋಮನಾಥ ಬಾಗಲಕೋಟೆ ಹೇಳುತ್ತಾರೆ.

‘ಒಂದು ಎಕರೆಯಲ್ಲಿ 15ರಿಂದ 20 ಟನ್ ದ್ರಾಕ್ಷಿ ಬೆಳೆದಿದೆ. ವರ್ತಕರು ನೇರವಾಗಿ ದ್ರಾಕ್ಷಿ ತೋಟಕ್ಕೇ ಬಂದು 30ರಿಂದ 35 ರೂಪಾಯಿಗೆ ಕೆ.ಜಿ.ಯಂತೆ ಸ್ಥಳದಲ್ಲಿಯೇ ಖರೀದಿಸುತ್ತಿದ್ದಾರೆ. ಹೀಗಾಗಿ ಒಂದು ಎಕರೆಗೆ ಸರಾಸರಿ 6ರಿಂದ 7 ಲಕ್ಷ ರೂಪಾಯಿ ಉತ್ಪನ್ನ ಬರುತ್ತಿದೆ’ ಎಂದು ರೈತ ಬಸವರಾಜ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.