ADVERTISEMENT

ಮೊಬೈಲ್‌ ರಿಂಗ್‌ ಸದ್ದು ಕೇಳಿ ಬಂದರೆ ವಶಕ್ಕೆ

ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಎಚ್ಚರಿಕೆ­

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 19:05 IST
Last Updated 5 ಜೂನ್ 2017, 19:05 IST
ಕಳೆದ ಮೂರು ಅಧಿವೇಶನದಲ್ಲಿ ಪಾಲ್ಗೊಳ್ಳದೇ ಇದ್ದ ಎಂ.ಎಚ್. ಅಂಬರೀಷ್  ಸೋಮವಾರ ಆರಂಭವಾದ ಅಧಿವೇಶನದಲ್ಲಿ ಪಾಲ್ಗೊಂಡು, ವಿರೋಧ ಪಕ್ಷದವರ ಕಡೆಗೆ ಕೈತೋರಿಸಿದ್ದು ಹೀಗೆ.
ಕಳೆದ ಮೂರು ಅಧಿವೇಶನದಲ್ಲಿ ಪಾಲ್ಗೊಳ್ಳದೇ ಇದ್ದ ಎಂ.ಎಚ್. ಅಂಬರೀಷ್ ಸೋಮವಾರ ಆರಂಭವಾದ ಅಧಿವೇಶನದಲ್ಲಿ ಪಾಲ್ಗೊಂಡು, ವಿರೋಧ ಪಕ್ಷದವರ ಕಡೆಗೆ ಕೈತೋರಿಸಿದ್ದು ಹೀಗೆ.   

ಬೆಂಗಳೂರು: ‘ಸದನದಲ್ಲಿ ಕಲಾಪ ನಡೆಯುವಾಗ ಫೋನ್‌ ರಿಂಗ್‌ ಸದ್ದು ಕೇಳಿ ಬಂದರೆ, ಮೊಬೈಲ್‌ ಅನ್ನು ವಶಕ್ಕೆ ತೆಗೆದು ಕೊಳ್ಳಬೇಕಾಗುತ್ತದೆ’ ಎಂದು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಎಚ್ಚರಿಕೆ ನೀಡಿದರು.

ಸೋಮವಾರ ವಿಧಾನ ಪರಿಷತ್ತಿನಲ್ಲಿ ಹೊಸ ಸದಸ್ಯರ ಪ್ರಮಾಣ ವಚನ ಸ್ವೀಕಾರದ ಬಳಿಕ ಇದ್ದಕ್ಕಿದ್ದಂತೆ ಸದನದಲ್ಲಿ ಮೊಬೈಲ್‌ ರಿಂಗ್‌ ಆಗುವ ಸದ್ದು ಕೇಳಿ  ಬಂತು. ಇದರಿಂದ ಸಿಟ್ಟಿಗೆದ್ದ ಸಭಾಪತಿ ಶಂಕರಮೂರ್ತಿ, ‘ಮೊಬೈಲ್‌ ಆಫ್‌ ಮಾಡಿ. ಸದನದ ಒಳಗೆ ಯಾರೂ ಮೊಬೈಲ್‌ ಆನ್ ಮಾಡಿ ಇಟ್ಟುಕೊಳ್ಳಬಾರದು. ಇನ್ನೊಮ್ಮೆ ಸದ್ದು ಕೇಳಿ ಬಂದರೆ, ವಶಕ್ಕೆ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕೂಲಿಂಗ್‌ ಗ್ಲಾಸ್‌ ಧರಿಸಿದ್ದ ವೀರಯ್ಯ: ಬಿಜೆಪಿಯ ಡಿ.ಎಸ್‌.ವೀರಯ್ಯ ಅವರು ಸದನಕ್ಕೆ ಕೂಲಿಂಗ್‌ ಗ್ಲಾಸ್‌ ಧರಿಸಿಕೊಂಡು ಬಂದಿದ್ದರು.
ಕಲಾಪ ನಡೆಯುವಾಗ ಕೆಲ ಸಮಯ  ಗ್ಲಾಸ್‌ ಧರಿಸಿಕೊಂಡೇ ಕುಳಿತ್ತಿದ್ದರು. ಅದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬೇರಿಸಿ ‘ಏನಿದು’ ಎಂಬಂತೆ ಕೈ ಸನ್ನೆ ಮಾಡಿದರು.

ADVERTISEMENT

ತಪ್ಪು ತಿದ್ದಿದ  ಸಂದೇಶ್‌ ನಾಗರಾಜ್‌: ‘ಪಾರ್ವತಮ್ಮ ರಾಜ್‌ಕುಮಾರ್‌ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯಲ್ಲಿ’  ಎಂದು ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಸಂತಾಪ ಸೂಚಕ ನಿರ್ಣಯ ಓದುತ್ತಿದ್ದಾಗ,  ಅದನ್ನು ಅರ್ಧಕ್ಕೆ ತಡೆದ ಜೆಡಿಎಸ್‌ನ ಸಂದೇಶ್‌ ನಾಗರಾಜ್‌, ‘ಪಾರ್ವತಮ್ಮ ಜನಿಸಿದ್ದು  ಚಾಮರಾಜನಗರ ಜಿಲ್ಲೆ  ಅಲ್ಲ, ಮೈಸೂರು ಜಿಲ್ಲೆ’ ಎಂದು ಹೇಳಿದರು. ಬಳಿಕ ಶಂಕರಮೂರ್ತಿಯವರು ಮೈಸೂರು ಜಿಲ್ಲೆ ಎಂದು ಸರಿಪಡಿಸಿಕೊಂಡರು.

ಸಭಾ ನಾಯಕರಾಗಿ ಪರಮೇಶ್ವರ್‌ ಸದ್ಯಕ್ಕೆ ಮುಂದುವರಿಕೆ

ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜಿ.ಪರಮೇಶ್ವರ್‌ ಈ ಅಧಿವೇಶನ ಮುಗಿಯುವವರೆಗೆ ವಿಧಾನಪರಿಷತ್‌ ಸಭಾ ನಾಯಕರಾಗಿ ಮುಂದುವರೆಯಲಿದ್ದಾರೆ.

ಸೋಮವಾರ ವಿಧಾನ ಪರಿಷತ್‌ ಕಲಾಪ ಆರಂಭಕ್ಕೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ  ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರನ್ನು ಭೇಟಿ ಮಾಡಿ  ಈ ವಿಷಯ ತಿಳಿಸಿದರು. ಸಭಾಪತಿ ಅದಕ್ಕೆ ಒಪ್ಪಿಗೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿರುವ ಪರಮೇಶ್ವರ್‌  ಸಚಿವ  ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈ ಅಧಿವೇಶನ ಮುಗಿಯುವವರೆಗೂ ಸಚಿವ ಸ್ಥಾನದಲ್ಲೂ ಮುಂದುವರಿಯುವಂತೆ ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಇದೇ ಅಧಿವೇಶನದಲ್ಲಿ  ಸಭಾನಾಯಕ  ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ  ಎಂದು ಕಾಂಗ್ರೆಸ್‌ ವಲಯದಲ್ಲಿ ಹೇಳಲಾಗಿತ್ತು. ಅಧಿವೇಶನ ಇದೇ 16 ರವರೆಗೆ ನಡೆಯಲಿದ್ದು, ಅನಂತರ ಸಭಾ ನಾಯಕರು ಬದಲಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.