ADVERTISEMENT

ಮೋದಿ ಮುಂದೆ ಕಳೆಗುಂದಿದ ರಾಹುಲ್‌ ಗಾಂಧಿ ಸುತ್ತಾಟ!

​ಪ್ರಜಾವಾಣಿ ವಾರ್ತೆ
Published 15 ಮೇ 2018, 19:30 IST
Last Updated 15 ಮೇ 2018, 19:30 IST

ಬೆಂಗಳೂರು: ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ದೂಳೆಬ್ಬಿಸಿದ್ದಾರೆ. ಈ ಇಬ್ಬರು ರಾಷ್ಟ್ರೀಯ ನಾಯಕರು ಸುತ್ತಾಡಿದ ಪ್ರದೇಶಗಳನ್ನು ವಿಶ್ಲೇಷಿಸಿದರೆ, ರಾಹುಲ್‌ಗಿಂತ ಮೋದಿ ಅವರ ವರ್ಚಸ್ಸು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿರುವುದು ಗೋಚರಿಸುತ್ತದೆ.

ಮೋದಿ ಸಾರ್ವಜನಿಕ ಸಭೆಗಳನ್ನು ನಡೆಸಿದ ದಕ್ಷಿಣ ಕನ್ನಡ (ಮಂಗಳೂರು), ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿಜೆಪಿ ಸ್ವೀಪ್‌ ಮಾಡಿದೆ. 2013ರ ಚುನಾವಣೆಯಲ್ಲಿ ಈ ಮೂರೂ ಜಿಲ್ಲೆಗಳಲ್ಲಿ ಬಿಜೆಪಿಯನ್ನು ಕಾಂಗ್ರೆಸ್‌ ಮಣ್ಣು ಮುಕ್ಕಿಸಿತ್ತು. ಆದರೆ, ಈ ಜಿಲ್ಲೆಗಳಲ್ಲಿ ಈ ಬಾರಿ ಪಕ್ಷ ಫೀನಿಕ್ಸ್‌ನಂತೆ ಚೇತರಿಸಿಕೊಳ್ಳಲು ಮೋದಿ ಅಲೆ ಕಾರಣವಾಗಿದೆ. ಅಲ್ಲದೆ ಮೋದಿ ಓಡಾಡಿದ ಶಿವಮೊಗ್ಗ, ಧಾರವಾಡ, ಬೀದರ್‌, ಬೆಳಗಾವಿ ಜಿಲ್ಲೆಗಳಲ್ಲೂ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್‌ ಕೈಯಿಂದ ಕಸಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಮೋದಿಗಿಂತ ಹೆಚ್ಚು ಊರುಗಳಲ್ಲಿ ರಾಹುಲ್‌ ಸುತ್ತಾಡಿದ್ದಾರೆ. ‘ಬಸವಣ್ಣನವರ ವಚನದಂತೆ ನುಡಿದಂತೆ ನಡೆದಿದ್ದೇವೆ. ಎಲ್ಲ ಭರವಸೆಗಳನ್ನು ಈಡೇಸಿದ್ದೇವೆ. ಆದರೆ, ಮೋದಿ ಸುಳ್ಳುಗಾರ’ ಎಂದು ಜನಾಶೀರ್ವಾದ ಯಾತ್ರೆಯುದ್ದಕ್ಕೂ ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ ನಡೆಸಿದ್ದರು. ಆದರೆ, ಅವರ ಮಾತುಗಳಿಗೆ ಮತದಾರ ಮನ್ನಣೆ ನೀಡಿಲ್ಲ. ರಾಹುಲ್‌ ರೋಡ್‌ ಷೋ, ಸಮಾವೇಶಗಳನ್ನು ನಡೆಸಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲಿನ ಕಹಿ ಉಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.