ADVERTISEMENT

‘ಮೋದಿ, ಶಾ ಕುಮ್ಮಕ್ಕಿನಿಂದ ದಾಳಿ’

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST
‘ಮೋದಿ, ಶಾ ಕುಮ್ಮಕ್ಕಿನಿಂದ ದಾಳಿ’
‘ಮೋದಿ, ಶಾ ಕುಮ್ಮಕ್ಕಿನಿಂದ ದಾಳಿ’   

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಕುಮ್ಮಕ್ಕಿನಿಂದಲೇ ಆದಾಯ ತೆರಿಗೆ ದಾಳಿ ನಡೆಯುತ್ತಿದೆ. ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಮಂಗಳವಾರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಲ್ಕು ದಿನಗಳ ಹಿಂದೆ ಬಾದಾಮಿ ಬಳಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದೆ. ಈಗ ದಾಳಿ ಮಾಡುತ್ತಾರೆ ಅಂದರೆ ಏನು ಅರ್ಥ’ ಎಂದು ಪ್ರಶ್ನಿಸಿದರು.

‘ಉಳಿದುಕೊಂಡಿದ್ದ ಕೊಠಡಿಯಲ್ಲಿಯೇ ನಾನು ದುಡ್ಡು ಬಚ್ಚಿಟ್ಟು ಬರುತ್ತೇನೆಯೇ? ಕಾಮನ್‌ ಸೆನ್ಸ್‌ ಇರಬೇಕು? ಮೊದಲನೆಯದಾಗಿ ನಾನು ಆ ಕೊಠಡಿಯಲ್ಲಿ ಇರಲಿಲ್ಲ. ದಾಳಿ ನಡೆಸಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಚುನಾವಣೆ ಸಮಯದಲ್ಲಿ ಈ ರೀತಿ ಮಾಡಬಾರದು‌’ ಎಂದರು.

ADVERTISEMENT

‘ದಾಳಿ ನಡೆಸುವುದರಿಂದ ಅನುಕೂಲವಾಗಲಿದೆ ಎಂದು ಬಿಜೆಪಿಯವರು ಭಾವಿಸಿದ್ದರೆ ಅವರಿಗಿಂತ ಮೂರ್ಖರು ಮತ್ತೊಬ್ಬರಿಲ್ಲ. ಹೆದರಿಸಿ, ಬೆದರಿಸಿ ಗೆಲ್ಲಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ದಾಳಿಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಹಿಂದೆ ಚುನಾವಣೆ ಸಮಯದಲ್ಲಿ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದನ್ನು ನೋಡಿದ್ದೀರಾ? ಯಾವುದೇ ಸರ್ಕಾರ ಇಂಥ ಕೆಲಸಕ್ಕೆ ಇಳಿದಿರಲಿಲ್ಲ’ ಎಂದು ನುಡಿದರು.

‘ಚುನಾವಣೆ ಮುಂದೂಡಲು ತಂತ್ರ’

ಶಿವಮೊಗ್ಗ: ಕಾಂಗ್ರೆಸ್ ಮುಖಂಡರ ಮೇಲಿನ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತ. ಹಣದ ಹೊಳೆ ಹರಿಯುತ್ತಿದೆ ಎಂದು ಬಿಂಬಿಸಿ, ಕನಿಷ್ಠ 20 ಕ್ಷೇತ್ರಗಳಲ್ಲಿ ಚುನಾವಣೆ ಮುಂದೂಡುವಂತೆ ಮಾಡಲು ಬಿಜೆಪಿ ಹೆಣೆದಿರುವ ತಂತ್ರವಿದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಮುಖಂಡರನ್ನು ಕೇಂದ್ರೀಕರಿಸಿ ಐಟಿ ದಾಳಿ ನಡೆಸಲಾಗುತ್ತಿದೆ. ಆ ಮೂಲಕ ಭಯದ ವಾತಾವರಣ ನಿರ್ಮಿಸಲು ಹೊರಟಿದ್ದಾರೆ. ಚೆನೈನಲ್ಲಿ ಚುನಾವಣೆ ಮುಂದೂಡಿದಂತೆ ರಾಜ್ಯದಲ್ಲೂ ಮಾಡಲು ಸಂಚು ನಡೆದಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.