ಮೈಸೂರು: ಕಂಪ್ಯೂಟರ್ ಹಾಗೂ ಮೊಬೈಲ್ ಕ್ಷೇತ್ರದ ದಿಗ್ಗಜ ಆ್ಯಪಲ್‌ನ ಆಪರೇಟಿಂಗ್ ಸಿಸ್ಟಂನಲ್ಲಿ ಟೈಪ್ ಮಾಡಲು ಅನುಕೂಲವಾಗುವ ‘ನುಡಿ’ ತಂತ್ರಾಂಶವನ್ನು ಕನ್ನಡ ಗಣಕ ಪರಿಷತ್ ಅಭಿವೃದ್ಧಿಗೊಳಿಸಿದೆ.
ಆ್ಯಪಲ್‌ನ ಉತ್ಪನ್ನಗಳಲ್ಲಿ ಸರಳವಾಗಿ ಕನ್ನಡ ಬರೆಯುವಂತಾಗಬೇಕು ಎಂಬ ಕನ್ನಡಿಗರ ಬಹುದಿನದ ಬೇಡಿಕೆಯನ್ನು ಪರಿಷತ್ ಇದೀಗ ಈಡೇರಿಸಿದೆ.
ಆ್ಯಪಲ್‌ನ ‘ಮ್ಯಾಕ್’ ಆಪರೇಟಿಂಗ್ ಸಿಸ್ಟಂ, ವಿಂಡೋಸ್ ಆಪರೇಟಿಂಗ್ ಸಿಸ್ಟಂಗಿಂತ ಭಿನ್ನ. ಅದಕ್ಕಾಗಿ ಪ್ರತ್ಯೇಕವಾದ ತಂತ್ರಾಂಶಗಳನ್ನೇ ರಚಿಸಬೇಕಾಗುತ್ತದೆ.
ಕನ್ನಡವನ್ನು ಟೈಪ್ ಮಾಡಲು ‘ಮ್ಯಾಕ್’ನಲ್ಲಿ ಅವಕಾಶ ಇದೆಯಾದರೂ, ಅದರಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಗಣಕ ಪರಿಷತ್ ವಿನ್ಯಾಸಗೊಳಿಸಿರುವ ಕೀಲಿಮಣೆಯು ಈಗ ಬಹುತೇಕ ಕನ್ನಡದ ಎಲ್ಲ ಟೈಪಿಂಗ್ ಸಾಫ್ಟ್‌ವೇರ್‌ಗಳಲ್ಲಿದ್ದು, ಪ್ರಸಿದ್ಧಿ ಪಡೆದಿದೆ. ಆದರೆ, ‘ಮ್ಯಾಕ್’ನ ಕನ್ನಡ ಕೀಲಿಮಣೆ ವಿಭಿನ್ನವಾಗಿದ್ದು, ಟೈಪ್ ಮಾಡುವುದು ಕಷ್ಟ.
ಈ ಕಾರಣಗಳಿಗಾಗಿ ‘ಮ್ಯಾಕ್’ ಬಳಕೆದಾರರು ‘ನುಡಿ’ ಕೀಲಿಮಣೆಯೇ ಬೇಕು ಎಂಬ ಬೇಡಿಕೆ ಇಟ್ಟಿದ್ದರು. ಇದನ್ನು ಪುರಸ್ಕರಿಸಿರುವ ಗಣಕ ಪರಿಷತ್, ಹೊಸ ಸಾಫ್ಟ್‌ವೇರ್ ವಿನ್ಯಾಸಗೊಳಿಸಿದೆ. ಸಾಫ್ಟ್‌ವೇರ್ ಅಭಿವೃದ್ಧಿ ಅಂತಿಮ ಹಂತದಲ್ಲಿದ್ದು, ಶೀಘ್ರವೇ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲಭ್ಯವಾಗಲಿದೆ ಎಂದು ಪರಿಷತ್ತಿನ ಕಾರ್ಯದರ್ಶಿ ಜಿ.ಎನ್.ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ನುಡಿ 64 ಬಿಟ್’ ಬಿಡುಗಡೆ: ಈಗ ಹೆಚ್ಚು ಬಳಕೆಯಲ್ಲಿರುವ ವಿಂಡೋಸ್‌ನ 64 ಬಿಟ್ ಆಪರೇಟಿಂಗ್ ಸಿಸ್ಟಂಗಳಲ್ಲಿ ಕೆಲಸ ಮಾಡುವ ‘ನುಡಿ 64’ ಪ್ರಾಯೋಗಿಕ ತಂತ್ರಾಂಶವನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಅದರಲ್ಲಿನ ಮಿತಿಗಳನ್ನು ಗುರುತಿಸಿ ಅಂತಿಮ ತಂತ್ರಾಂಶವನ್ನು ಹೊರಬಿಡಲಾಗುವುದು. ಯುನಿಕೋಡ್ ಸೌಲಭ್ಯ ಮಾತ್ರ ಇರುವ ಆವೃತ್ತಿ ಸಹ ಅಭಿವೃದ್ಧಿ ಹಂತದಲ್ಲಿದೆ. ‘ನುಡಿ–6’ ಹೆಸರಲ್ಲಿ ಬರುವ ಈ ತಂತ್ರಾಂಶದಲ್ಲಿ ‘ಅಮೆರಿಕನ್ ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಇನ್‌ಸ್ಟಿಟ್ಯೂಟ್’ (ಎಎನ್‌ಎಸ್‌ಐ) ಭಾಷಾ ಸೌಲಭ್ಯ ಇರುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.