ADVERTISEMENT

ಮ್ಯಾನ್‌ಹೋಲ್‌ಗೆ ಇಳಿದ ಪೌರಕಾರ್ಮಿಕ ಸಾವು: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST
ಪೌರಕಾರ್ಮಿಕರೊಬ್ಬರು ಮೃತಪಟ್ಟ ಮೈಸೂರಿನ ದೇಶಿಕಾ ರಸ್ತೆಯ ಮ್ಯಾನ್‌ಹೋಲ್‌ನ್ನು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಸೋಮವಾರ ಪರಿಶೀಲಿಸಿದರು. ಡಿಸಿಪಿ ಎ.ಎನ್‌. ರಾಜಣ್ಣ, ಮಾಜಿ ಮೇಯರ್‌ ನಾರಾಯಣ್‌ ಇದ್ದಾರೆ.
ಪೌರಕಾರ್ಮಿಕರೊಬ್ಬರು ಮೃತಪಟ್ಟ ಮೈಸೂರಿನ ದೇಶಿಕಾ ರಸ್ತೆಯ ಮ್ಯಾನ್‌ಹೋಲ್‌ನ್ನು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಸೋಮವಾರ ಪರಿಶೀಲಿಸಿದರು. ಡಿಸಿಪಿ ಎ.ಎನ್‌. ರಾಜಣ್ಣ, ಮಾಜಿ ಮೇಯರ್‌ ನಾರಾಯಣ್‌ ಇದ್ದಾರೆ.   

ಮೈಸೂರು: ಮ್ಯಾನ್‌ಹೋಲ್‌ಗೆ ಇಳಿದು ಪೌರಕಾರ್ಮಿಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಕಲ್ಪನಾ ಲಾಡ್ಜ್‌ಗೆ ಪೊಲೀಸರು ಸೋಮವಾರ ಬೀಗ ಹಾಕಿದ್ದು, ವ್ಯವಸ್ಥಾಪಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಜಗನ್ಮೋಹನ ಅರಮನೆಯ ಸಮೀ­ಪದ ಕಲ್ಪನಾ ಲಾಡ್ಜ್‌ನ ಶೌಚಾ­ಲಯ ಕಟ್ಟಿಕೊಂಡ ಹಿನ್ನೆಲೆಯಲ್ಲಿ ಒಳಚರಂಡಿ ಶುಚಿಗೊಳಿಸಲು ಭಾನುವಾರ ದೇಶಿಕಾ ರಸ್ತೆಯ ಮ್ಯಾನ್‌ಹೋಲ್‌ಗೆ ಇಳಿದು ಕುಮಾರ್‌ ಎಂಬುವವರು ಮೃತಪಟ್ಟಿ­ದ್ದರು. ಈ ಸಂಬಂಧ ಲಾಡ್ಜ್‌ನ ವ್ಯವ­ಸ್ಥಾಪಕ ಬಂಗಾರಪ್ಪ, ಅವರ ಅಳಿಯ ನಾಗರಾಜ ಅವರನ್ನು ಬಂಧಿಸಲಾಗಿದೆ. ಲಾಡ್ಜ್‌ ಮಾಲೀಕ ಬೆಂಗಳೂರಿನ ನಿವಾಸಿ  ಶ್ರೀಧರ್‌ ಎಂಬುವವರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಪೌರಕಾರ್ಮಿಕ ಕಾಯ್ದೆ–2013 ಹಾಗೂ ಕಾರ್ಮಿಕರ ಬಗೆಗೆ ಉದಾಸೀನತೆ ತೋರಿದ ಆರೋ­ಪದ ಮೇಲೆ ಐಪಿಸಿ 304 ಅಡಿ ದೇವ­ರಾಜ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂ. ಶಿವಣ್ಣ ಭೇಟಿ: ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅವರು ಘಟನೆ ನಡೆದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿ­ಶೀಲನೆ ನಡೆಸಿದರು. ಲಾಡ್ಜ್‌ ಮಾಲೀಕರನ್ನು ಕೂಡಲೇ ಬಂಧಿಸುವಂತೆ ಡಿಸಿಪಿ ರಾಜಣ್ಣ ಅವರಿಗೆ ಸೂಚಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತ­ನಾ­ಡಿದ ಅವರು, ಪರಿಷ್ಕೃತ ಪೌರ­ಕಾರ್ಮಿಕ ಕಾನೂನು ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ನಡೆದ ಮೊದಲ ಪ್ರಕ­ರಣ ಇದು. ಕಾನೂನು ಪ್ರಕಾರ ಪೌರಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸುವಂತಿಲ್ಲ. ಸಕ್ಕಿಂಗ್‌, ಜಟ್ಟಿಂಗ್‌ ಯಂತ್ರಗಳಿಂದಲೇ ಶುಚಿಗೊಳಿಸಬೇಕು. ಇದನ್ನು ಉಲ್ಲಂಘಿಸಿದವರಿಗೆ ರೂ 5 ಲಕ್ಷದವರೆಗೆ ದಂಡ ಹಾಗೂ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದೇ ಕಾಯ್ದೆ ಅಡಿ ಕಲ್ಪನಾ ಲಾಡ್ಜ್‌ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ ಎಂದರು.

ಪುನರ್‌ ಸಮೀಕ್ಷೆಗೆ ಆದೇಶ: ಮೈಸೂರಿ­ನಲ್ಲಿ ಮಲಹೋರುವ ಪದ್ಧತಿ ಜೀವಂತ­ವಾ­ಗಿದೆ. ಹೀಗಾಗಿ, ನಗರದಲ್ಲಿ­ರುವ ಪೌರ­ಕಾರ್ಮಿಕರ ಕುರಿತು ಪುನರ್‌ ಸಮೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಲಾಗುವುದು ಎಂದು ತಿಳಿಸಿ­ದರು. ಮಹಾನಗರ ಪಾಲಿಕೆಯಲ್ಲಿ ಮಾತ್ರ­ವಲ್ಲ, ಖಾಸಗಿಯಾಗಿಯೂ ಅನೇ­ಕರು ಈ ಕೆಲಸವನ್ನೇ ನಂಬಿಕೊಂಡಿ­ದ್ದಾರೆ. ಹಣದ ಆಸೆಗಾಗಿ ಮ್ಯಾನ್‌­ಹೋಲ್‌ಗೆ ಇಳಿದು ಶುಚಿಗೊಳಿಸಲು ಮುಂದಾ­ಗುತ್ತಿ­ದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಹಾರ ವಿತರಣೆ: ಮೃತಪಟ್ಟ ಪೌರ­ಕಾರ್ಮಿಕರ ಕುಟುಂಬಕ್ಕೆ ಸೂಕ್ತ ಪರಿ­ಹಾರ ನೀಡಬೇಕು ಎಂದು ಒತ್ತಾಯಿಸಿ ಕಲ್ಪನಾ ಲಾಡ್ಜ್‌ ಎದುರು ಶವವಿಟ್ಟು ಪ್ರತಿಭಟನೆ ನಡೆಸಲು ಮುಂದಾದ ಪೌರ­ಕಾರ್ಮಿಕ ಸಂಘದ ಕಾರ್ಯಕರ್ತರನ್ನು ಶಿವಣ್ಣ ಮನವೊಲಿಸುವಲ್ಲಿ ಯಶಸ್ವಿಯಾ­ದರು. ಸೂಕ್ತ ಪರಿಹಾರ ಕೊಡಿಸು­ವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು. ಬಳಿಕ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ತೆರಳಿದ ಶಿವಣ್ಣ, ಮೃತ ಕುಮಾರ್‌ ಕುಟುಂಬಕ್ಕೆ ಪಾಲಿಕೆ ವತಿಯಿಂದ ₨ 3 ಲಕ್ಷದ ಪರಿಹಾರದ ಚೆಕ್‌ ವಿತರಿಸಿದರು.

ಮೇಯರ್‌ ಎನ್‌.ಎಂ. ರಾಜೇಶ್ವರಿ, ಮಾಜಿ ಮೇಯರ್‌ ನಾರಾಯಣ್‌, ಪಾಲಿಕೆ ಸದಸ್ಯರಾದ ಗಿರೀಶ್‌ ಪ್ರಸಾದ್‌, ನಂದೀಶ್‌ ಪ್ರೀತಂ, ಪಾಲಿಕೆ ಹೆಚ್ಚುವರಿ ಆಯುಕ್ತ ಎನ್‌. ರಾಜು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ, ಎಸಿಪಿ ಜೈಮಾರುತಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎನ್‌. ಮಾರ, ಪ್ರಧಾನ ಕಾರ್ಯದರ್ಶಿ ಪಿ. ಮುರುಗೇಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.