ಬ್ರಹ್ಮಾವರ (ಉಡುಪಿ ಜಿಲ್ಲೆ): ಬಡಗುತಿಟ್ಟು ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಕುಂಜಾಲು ರಾಮಕೃಷ್ಣ (68) ಅಸೌಖ್ಯದಿಂದ ಶುಕ್ರವಾರ ಇಲ್ಲಿನ ಕುಂಜಾಲಿನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
1೫ನೇ ವಯಸ್ಸಿಗೇ ಯಕ್ಷಗಾನ ರಂಗವನ್ನೇರಿದ ರಾಮಕೃಷ್ಣ ಅವರು 40 ವರ್ಷ ಪ್ರೇಕ್ಷಕರನ್ನು ನಗಿಸುತ್ತಲೇ ಕಲಾ ಪೋಷಣೆ ಮಾಡಿದ್ದರು. ಕೊಲ್ಲೂರು, ಮಾರಣಕಟ್ಟೆ, ಅಮೃತೇಶ್ವರಿ, ಸಾಲಿಗ್ರಾಮ, ಇಡಗುಂಜಿ, ಶಿರಸಿ ಮುಂತಾದ ಮೇಳಗಳಲ್ಲಿ ಪ್ರಧಾನ ಹಾಸ್ಯಗಾರರಾಗಿ ಜನಪ್ರಿಯತೆ ಪಡೆದಿದ್ದರು. ಕಾಶಿಮಾಣಿ, ವಿಡೂರಥ, ಬೇಹಿನ ಚರ, ವಿಲಕ್ಷಣ, ದಾಸರಾಜ ಕಂದರ, ಬ್ರಾಹ್ಮಣ, ಪ್ರಹ್ಲಾದ ಚರಿತ್ರೆಯ ದಡ್ಡ, ವನಪಾಲಕಿ, ಶ್ವೇತಕುಮಾರ ಚರಿತ್ರೆಯ ಪ್ರೇತ, ನಳ ದಮಯಂತಿಯ ಬಾಹುಕ, ದ್ವಾರಪಾಲಕ, ನಕ್ಷತ್ರಕ ಮುಂತಾದ ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2011ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಶನಿವಾರ ಕುಂಜಾಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.