ADVERTISEMENT

ಯಡಿಯೂರಪ್ಪನವರಿಗೆ ಶಿವಪ್ಪ ಬಹಿರಂಗ ಪತ್ರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಬೆಂಗಳೂರು: `ಪಕ್ಷದ ಹಿರಿಯರ ವಿರುದ್ಧ ಮಾತನಾಡಿದ್ದು ನನ್ನನ್ನು ಪಕ್ಷದಿಂದ ಅಮಾನತು ಮಾಡಲು ಕಾರಣ ಎಂದು ಹಿಂದೆ ನೀವು ಹೇಳಿದ್ದಿರಿ. ಆದರೆ ಈಗ ನೀವೇ ಪಕ್ಷದ ಮುಖಂಡರ ವಿರುದ್ಧ ಮಾತನಾಡಿದ್ದೀರಿ. ನನಗೆ ಅನ್ವಯವಾಗಿದ್ದ ಕಾನೂನು ನಿಮಗೆ ಆಗುವುದಿಲ್ಲವೇ? ಪಕ್ಷದ ಶಿಸ್ತು ಪಾಲಿಸಬೇಕಾದವರು ನಮ್ಮಂಥ ಸಾಮಾನ್ಯ ಕಾರ್ಯಕರ್ತರು ಮಾತ್ರವೇ?~

- ಬಿಜೆಪಿ ಹಿರಿಯರ ವೇದಿಕೆಯ ಅಧ್ಯಕ್ಷ ಬಿ.ಬಿ. ಶಿವಪ್ಪ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೇಳಿರುವ ಪ್ರಶ್ನೆ ಇದು. ಯಡಿಯೂರಪ್ಪ ಅವರಿಗೆ ಬಹಿರಂಗ ಪತ್ರ ಬರೆದಿರುವ ಶಿವಪ್ಪ ಅವರು, `ಬ್ಲ್ಯಾಕ್‌ಮೇಲ್ ತಂತ್ರ ಬಿಡಿ.

ಮೊದಲಿನ ಯಡಿಯೂರಪ್ಪ ಆಗಿ. ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ.

`ಬಿಜೆಪಿಯನ್ನು ಸಾವಿರಾರು ಕಾರ್ಯಕರ್ತರ ಶ್ರಮದಿಂದ ಬೆಳೆಸಲಾಗಿದೆ. ಪಕ್ಷದಿಂದ ಯಾರೇ ಹೊರಗೆ ಹೋದರೂ ಸಂಘಟನೆ ಬಲಿಷ್ಠವಾಗಿಯೇ ಇರುತ್ತದೆ~.

`ಹೊಸ ಪಕ್ಷ ಕಟ್ಟಲು ಹೋದ ಅನೇಕ ಮಹನೀಯರು ಏನಾದರು ಎಂಬುದು ನಿಮಗೂ ಚೆನ್ನಾಗಿ ತಿಳಿದಿದೆ. ಕಾಂಗ್ರೆಸ್ಸಿನ ವೀರೇಂದ್ರ ಪಾಟೀಲರ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ~ ಎಂದು ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.

27ರಂದು ಸಭೆ: ಬಿಜೆಪಿ ಹಿರಿಯರ ವೇದಿಕೆಯ ಸದಸ್ಯರ ಸಭೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇದೇ 27ರಂದು ನಡೆಯಲಿದೆ ಎಂದು ಶಿವಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.