ADVERTISEMENT

ಯಡಿಯೂರಪ್ಪ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:05 IST
Last Updated 5 ಅಕ್ಟೋಬರ್ 2012, 19:05 IST
ಯಡಿಯೂರಪ್ಪ ಅಹೋರಾತ್ರಿ ಧರಣಿ
ಯಡಿಯೂರಪ್ಪ ಅಹೋರಾತ್ರಿ ಧರಣಿ   

ಬೆಂಗಳೂರು: `ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಸಂಸದರು ರಾಜೀನಾಮೆ ನೀಡಿ ಹೋರಾಟಕ್ಕೆ ಕೈಜೋಡಿಸಬೇಕು~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.

ಆನಂದರಾವ್ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಬೆಳಿಗ್ಗೆ ಧರಣಿ ಆರಂಭಿಸಿದ ಅವರು ರಾತ್ರಿಯೂ ತಮ್ಮ ಪ್ರತಿಭಟನೆ ಮುಂದುವರೆಸಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

 `ಪ್ರಧಾನಿ ಮನಮೋಹನಸಿಂಗ್ ಅವರು ರಾಜ್ಯದ ಪರಿಸ್ಥಿತಿಯನ್ನು ತಿಳಿಯದೇ ಅವೈಜ್ಞಾನಿಕವಾಗಿ ಆದೇಶ ಹೊರಡಿಸಿದ್ದಾರೆ.

ಹೀಗಾಗಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಸಂಸದರ ತಂಡ ಕೂಡಲೇ ಕೇಂದ್ರಕ್ಕೆ ಹೋಗಬೇಕು. ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದಾಗಲೇ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕಿತ್ತು. ಇದೊಂದು ಪಕ್ಷಾತೀತ ಹೋರಾಟ. ಭಿನ್ನಾಭಿಪ್ರಾಯ ಮರೆತು ಎಲ್ಲರೂ ಕಾವೇರಿಗಾಗಿ ಹೋರಾಟ ಮಾಡಬೇಕು~ ಎಂದರು.

`ಸಂಸದ ಅನಂತ್‌ಕುಮಾರ್ ರಾಜೀನಾಮೆ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ರಾಜೀನಾಮೆ ನೀಡಿಲ್ಲ. ಹೀಗಾಗಿ ಅವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿ ಇಲ್ಲ~ ಎಂದು ದೂರಿದರು.

`ರಾಜ್ಯಕ್ಕೆ ತಡವಾಗಿ ಬಂದಿರುವ ಕೇಂದ್ರದ ಅಧ್ಯಯನ ತಂಡದ ವರದಿಯನ್ನು ರಾತ್ರಿಯೇ ಪಡೆದು, ಪ್ರಾಧಿಕಾರದ ತೀರ್ಪನ್ನು ಪುನರ್‌ಪರಿಶೀಲಿಸಬೇಕು. ಶನಿವಾರ ಕೂಡ ಈ ಸತ್ಯಾಗ್ರಹ ಮುಂದುವರಿಸುತ್ತೇನೆ.

 ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಅವರಿಗೆ ಹೇಳಿದ್ದೇನೆ. ಭಾನುವಾರ ಕೃಷ್ಣರಾಜಸಾಗರ ಅಣೆಕಟ್ಟೆಗೆ ಪಾದಯಾತ್ರೆ ನಡೆಸುತ್ತೇನೆ~ ಎಂದು ಯಡಿಯೂರಪ್ಪ ಹೇಳಿದರು.

ಸಂಸದರಾದ ಪಿ.ಸಿ.ಮೋಹನ್, ಜನಾರ್ದನ ಸ್ವಾಮಿ, ಮಾಜಿ ಸಂಸದ ವಿ.ಧನಂಜಯ ಕುಮಾರ್, ಶಾಸಕರಾದ ಹೇಮಚಂದ್ರ ಸಾಗರ್, ಸತೀಶ್ ರೆಡ್ಡಿ, ನಂದೀಶ್ ರೆಡ್ಡಿ, ಬಿ.ಪಿ.ಹರೀಶ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.