ADVERTISEMENT

ಯಡಿಯೂರಪ್ಪ ಆಪ್ತರ ಬಣ ಗೈರು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST

ಬೆಂಗಳೂರು: ಅಡ್ವಾಣಿ ಅವರ `ಜನ ಚೇತನ ಯಾತ್ರೆ~ಯ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ಬಹಿರಂಗ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಚಿವರು, ಶಾಸಕರು ಗೈರುಹಾಜರಾಗುವುದರ ಮೂಲಕ ತಮ್ಮ ಸಿಟ್ಟನ್ನು ಬಹಿರಂಗಪಡಿಸಿದರು.

ಯಡಿಯೂರಪ್ಪ ಜೈಲು ಸೇರಿದ ನಂತರ ಅವರಿಗೆ ಮತ್ತಷ್ಟು ಮುಜುಗರ ಉಂಟು ಮಾಡಲು ಈ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ತಮ್ಮ ಬೆಂಬಲ ಇಲ್ಲ ಎಂಬ ಸಂದೇಶವನ್ನು ಗೈರುಹಾಜರಾಗುವುದರ ಮೂಲಕ ಅವರ ಬೆಂಬಲಿಗ ಸಚಿವರು ವ್ಯಕ್ತಪಡಿಸಿದರು.

ಇಷ್ಟಲ್ಲದೆ, ಈ ಬಹಿರಂಗ ಸಮಾವೇಶಕ್ಕೆ ಸಂಬಂಧಿಸಿದ ಪೋಸ್ಟರ್‌ಗಳಲ್ಲೂ ಯಡಿಯೂರಪ್ಪ ಭಾವಚಿತ್ರ ಹಾಕಿರಲಿಲ್ಲ. ಈ ವಿಷಯ ಶನಿವಾರ ಗೊತ್ತಾದ ನಂತರವೇ ಕಾರ್ಯಕ್ರಮದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದರು. ಈ ವಿಷಯ ತಿಳಿದು ಭಾನುವಾರ ವೇದಿಕೆ ಮೇಲಿನ ಪ್ರಮುಖ ಪೋಸ್ಟರ್ ಬದಲಿಸಲಾಯಿತು. ಅದರಲ್ಲಿ ಯಡಿಯೂರಪ್ಪ ಭಾವಚಿತ್ರವೂ ಇದೆ.

ಯಡಿಯೂರಪ್ಪನವರ ಆಪ್ತ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಕೂಡ ಅತ್ತ ತಿರುಗಿ ನೋಡಲಿಲ್ಲ. ಇವರು ನಗರದ ಶಾಸಕರೂ ಹೌದು. ಸೋಮಣ್ಣ ಅವರು ಶ್ರೀಶೈಲ ಸ್ವಾಮೀಜಿಯವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದಾವಣಗೆರೆಗೆ ತೆರಳಿದ್ದರು ಎಂಬುದು ಪಕ್ಷದ ವಿವರಣೆ.

ಇವರನ್ನು ಬಿಟ್ಟು ಸಚಿವರಾದ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಮುರುಗೇಶ ನಿರಾಣಿ, ರೇಣುಕಾಚಾರ್ಯ, ಉಮೇಶ್ ಕತ್ತಿ, ಸಿ.ಸಿ.ಪಾಟೀಲ್, ಸಿ.ಎಂ.ಉದಾಸಿ, ರಾಜುಗೌಡ, ಸಿ.ಪಿ.ಯೋಗೀಶ್ವರ್ ಸೇರಿದಂತೆ ಇನ್ನೂ ಕೆಲ ಸಚಿವರು ಸಮಾರಂಭದಲ್ಲಿ ಕಾಣಿಸಲಿಲ್ಲ.

ಸಚಿವ ಜಗದೀಶ್ ಶೆಟ್ಟರ್ ಮತ್ತು ಅವರ ಬಣದ ಬಹುತೇಕ ಎಲ್ಲ ಸಚಿವರು ಸಮಾರಂಭದಲ್ಲಿ ಹಾಜರಿದ್ದರು. ಸಚಿವರಾದ ಆರ್.ಅಶೋಕ, ಸುರೇಶ್‌ಕುಮಾರ್, ಎಸ್.ಎ. ರಾಮದಾಸ್, ನಾರಾಯಣಸ್ವಾಮಿ, ಬಿ.ಎನ್. ಬಚ್ಚೇಗೌಡ, ಆನಂದ ಅಸ್ನೋಟಿಕರ್, ರವೀಂದ್ರನಾಥ್ ಸೇರಿದಂತೆ ಇನ್ನೂ ಕೆಲವರು ಸಮಾರಂಭದಲ್ಲಿ ಹಾಜರಿದ್ದರು.

ಮಳೆ ಕಾಟ: ಅಡ್ವಾಣಿ ಸಮಾರಂಭಕ್ಕೆ ಬರಲು ಇನ್ನೂ 30 ನಿಮಿಷ ಬಾಕಿ ಇತ್ತು. ಇನ್ನೇನು ಅವರು ಬಂದು ಎಲ್ಲವೂ ಸುಗಮವಾಗಿ ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಮಳೆ ಧುತ್ತೆಂದು ಸುರಿಯಲಾರಂಭಿಸಿತು.

ಮಳೆಯ ಕಾರಣ ಜನ ದಿಕ್ಕಾಪಾಲಾಗಿ ಓಡಿದರೆ, ಇನ್ನು ಕೆಲವರು ತಮ್ಮ ಬಳಿ ಇದ್ದ ಪ್ಲಾಸ್ಟಿಕ್ ಕುರ್ಚಿಗಳನ್ನೇ ಛತ್ರಿಗಳನ್ನಾಗಿ ಮಾಡಿಕೊಂಡು ಮಳೆಯಿಂದ ರಕ್ಷಣೆ ಪಡೆಯಲು ಯತ್ನಿಸಿದರು. ಎಷ್ಟೇ ಪ್ರಯತ್ನಪಟ್ಟರೂ ಮಳೆಯಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಪರೀತ ಮಳೆ ಬೀಳುತ್ತಿದ್ದರೂ ವೇದಿಕೆ ಮೇಲಿಂದ, `ಯಾವುದೇ ಕಾರಣಕ್ಕೂ ಯಾರೂ ಹೋಗಬೇಡಿ. ಮಳೆಗೆ ಹೆದರಬೇಡಿ~ ಎನ್ನುವ ಘೋಷಣೆಗಳು ಬರುತ್ತಿದ್ದವು. ಕೆಲವರು ಹಾಗೆಯೇ ನಿಂತರೆ ಇನ್ನು ಕೆಲವರು ಅಡ್ವಾಣಿ ಬರುವುದಕ್ಕೂ ಮುನ್ನವೇ ನ್ಯಾಷನಲ್ ಕಾಲೇಜು ಮೈದಾನಕ್ಕೆ `ವಿದಾಯ~ ಹೇಳಿದ್ದರು! ಮಳೆ ಸ್ವಲ್ಪ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಅಡ್ವಾಣಿ ಬಂದರು. ಜನರತ್ತ ಕೈಬೀಸಿ ವಂದಿಸಿದರು.

ಆ ವೇಳೆಗಾಗಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಮೈಕ್ ಬಳಿ ನಿಂತು ನೇರವಾಗಿ ಸ್ವಾಗತ ಭಾಷಣ ಆರಂಭಿಸಿದರು. ನಂತರ ಶಾಲು ಹೊದಿಸಿ ಅಡ್ವಾಣಿ ಅವರನ್ನು ಸನ್ಮಾನಿಸಿದರು. ಸ್ವಾಗತದ ನಂತರ ಆರಂಭವಾಗಿದ್ದೇ ಅಡ್ವಾಣಿ ಭಾಷಣ. ತುಂತುರು ಮಳೆಯಲ್ಲೂ ಜನರು ಭಾಷಣ ಕೇಳಿದರು. ಅದರ ನಂತರ ಸಂಕಲ್ಪ ಗೀತೆ ಮೊಳಗಿತು. ಅವರು ಭಾಷಣ ಮುಗಿಸುವ ವೇಳೆಗೆ ಮಳೆರಾಯ ಕೂಡ ವಿರಾಮ ನೀಡಿದ್ದ. ಸಮಾರಂಭದ ಕೊನೆಯಲ್ಲಿ ಭಾಷಣ ಮಾಡಬೇಕಿದ್ದ ಅಡ್ವಾಣಿ ಆರಂಭದಲ್ಲೇ ತಮ್ಮ ಕೆಲಸ ಪೂರ್ಣಗೊಳಿಸಿದರು.

ಆ ನಂತರ ಯಾವೊಬ್ಬ ಮುಖಂಡರೂ ಮಾತನಾಡಲಿಲ್ಲ. ಆ ವೇಳೆಗೆ ಜನರೆಲ್ಲ ಖಾಲಿಯಾಗಿದ್ದರು. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಸದ ಅನಂತಕುಮಾರ್ ಸೇರಿದಂತೆ ಯಾರೂ ಮೈಕ್ ಮುಟ್ಟಲಿಲ್ಲ. ಕೇವಲ ಅಡ್ವಾಣಿ ಭಾಷಣ ಕೇಳಿ ಅವರೂ ಅಲ್ಲಿಂದ ಹೊರಟರು.

ಪ್ರತಿಭಾ ಅಡ್ವಾಣಿಯಿಂದ ವಿಡಿಯೋ ಚಿತ್ರೀಕರಣ: ಅಡ್ವಾಣಿ ಅವರ ಪುತ್ರಿ ಪ್ರತಿಭಾ ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ಹಿಂಭಾಗದ ಸಾಲಿನಲ್ಲಿ ಕುಳಿತಿದ್ದ ಅವರು ಆಗಾಗ್ಗೆ ಎದ್ದು ತಮ್ಮ  ಹ್ಯಾಂಡಿಕ್ಯಾಮ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದುದು ಎಲ್ಲರ ಗಮನ ಸೆಳೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT