ಶಿವಮೊಗ್ಗ: ರಾಜಕೀಯ ಶಕ್ತಿಕೇಂದ್ರದಲ್ಲಿ ಈಗ ಜಂಗೀಕುಸ್ತಿ ಆರಂಭವಾಗಿದೆ. ಹಾಲಿ ಉಪ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ನಡುವೆ ಜಿದ್ದಾಜಿದ್ದಿ ನಡೆದಿದೆ. ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಲಾಭ ಪಡೆಯಲು ಪರಸ್ಪರ ಪೈಪೋಟಿ ಶುರುವಾಗಿದೆ.
ನಾಲ್ಕೂವರೆ ವರ್ಷಗಳಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಬೆಂಬಲಿಗರು, ಪಕ್ಷದ ಕಾರ್ಯಕ್ರಮಗಳೆಂದು ಬಿಂಬಿಸುತ್ತಿದ್ದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗರು ಇವೆಲ್ಲ ಯಡಿಯೂರಪ್ಪ ಅವರ ಸಾಧನೆಗಳು ಎಂದು ಪಟ್ಟಿ ಮಾಡುತ್ತಿದ್ದಾರೆ.
ನಗರದಲ್ಲಿ ಈಚೆಗೆ ನಡೆದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಮತ್ತು ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ, ಸಾಧನೆಗಳ ಲಾಭ ಪಡೆಯುವ ಪೈಪೋಟಿಗೆ ಮತ್ತೊಂದು ವೇದಿಕೆಯಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಈಶ್ವರಪ್ಪ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಮಾಡುವ ಫ್ಲೆಕ್ಸ್, ಬ್ಯಾನರ್‌ಗಳು ಊರಿನ ಎಲ್ಲ ದಿಕ್ಕುಗಳಲ್ಲೂ ರಾರಾಜಿಸಿದವು.
ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ, ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಎಲ್ಲಿಯೂ ಯಡಿಯೂರಪ್ಪ ಅವರ ಹೆಸರು, ಭಾವಚಿತ್ರದ ಸುಳಿವು ಇರಲಿಲ್ಲ. ಇದು ಯಡಿಯೂರಪ್ಪ ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಯಿತು. ಸ್ವತಃ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅವರನ್ನೂ ಕೆರಳಿಸಿತು.
ಯಡಿಯೂರಪ್ಪ ಬೆಂಬಲಿಗರು, ವೇದಿಕೆಯಲ್ಲಿ ಈಶ್ವರಪ್ಪ ಮಾತನಾಡುತ್ತಿರುವಾಗಲೇ ಅವರ ವಿರುದ್ಧ ಘೋಷಣೆ ಕೂಗಿದರು.
ವೇದಿಕೆಯಲ್ಲಿದ್ದ ರಾಘವೇಂದ್ರ ಅವರು ಯಡಿಯೂರಪ್ಪ ಅವರೊಬ್ಬರಿಂದಲೇ ಅಭಿವೃದ್ಧಿಯಾಗಿದ್ದು. ಹಲವು ಯೋಜನೆಗಳು ರೂಪುಗೊಂಡಿದ್ದು ಎಂದು ಗುಣಗಾನ ಮಾಡಿ, ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದರು. `ಇದು ನಗರ ವ್ಯಾಪ್ತಿಯ ಕಾರ್ಯಕ್ರಮ; ಹಾಗಾಗಿ, ಶಾಸಕ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿರಲಿಲ್ಲ~ ಎಂದು ಜಿಲ್ಲಾಧಿಕಾರಿ ಮೂಲಕ ಹೇಳಿಸುವ ಪ್ರಯತ್ನವನ್ನು ಈಶ್ವರಪ್ಪ ಅನಿವಾರ್ಯವಾಗಿ ಮಾಡಬೇಕಾಯಿತು.
ಇದಕ್ಕೂ ಮೊದಲು ನಡೆದಿದ್ದು ನವೀಕೃತ ಗಾಂಧಿಪಾರ್ಕ್ ಉದ್ಘಾಟನೆ ವಿವಾದ. ಅ. 2ರಂದು ಗಾಂಧಿಪಾರ್ಕ್‌ನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಉದ್ಘಾಟಿಸುತ್ತಿರುವುದಾಗಿ ಆಹ್ವಾನ ಪತ್ರಿಕೆ ಮುದ್ರಣಗೊಂಡಿತ್ತು. ಅದಕ್ಕಾಗಿ ಯಡಿಯೂರಪ್ಪ ಶಿವಮೊಗ್ಗಕ್ಕೆ ಬೆಳಿಗ್ಗೆಯೇ ಬಂದಿದ್ದರು. ಆದರೆ, ಅಂದು ಕಾರ್ಯಕ್ರಮ ನಿಗೂಢವಾಗಿ ರದ್ದುಗೊಂಡಿತು.
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಂದು ಪಾರ್ಕ್ ಉದ್ಘಾಟಿಸುತ್ತಾರೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿ, ಕಾರ್ಯಕ್ರಮ ಮುಂದೂಡಿತು. ಉದ್ಘಾಟನೆ ರದ್ದತಿಗೆ ಈಶ್ವರಪ್ಪ ಅವರೇ ಕಾರಣ ಎಂದು ಯಡಿಯೂರಪ್ಪ ಗುಡುಗಿದರು. ಕೊನೆಗೆ ಮುಖ್ಯಮಂತ್ರಿ ಬಾರದೇ ಈಶ್ವರಪ್ಪ ಅವರೇ ಪಾರ್ಕ್ ಉದ್ಘಾಟಿಸಿದರು.
ಇದೇ ಪಾರ್ಕಿಗೆ ಯಡಿಯೂರಪ್ಪ ಈ ಭಾನುವಾರ ಸಂಜೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಭೇಟಿ ನೀಡಿದರು. ಪಟಾಕಿ ಸಿಡಿಸಿ, ಹಾರ-ತುರಾಯಿ ಹಾಕಿಸಿಕೊಂಡು ಪಾರ್ಕಿನಲ್ಲೇ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. `ಪಾರ್ಕ್ ಉದ್ಘಾಟಿಸುವುದು ಮುಖ್ಯವಲ್ಲ; ಅಭಿವೃದ್ಧಿ ಮಾಡುವುದು ಮುಖ್ಯ~ ಎಂದು ಪರೋಕ್ಷವಾಗಿ ಈಶ್ವರಪ್ಪ ಅವರನ್ನು ಚುಚ್ಚಿದರು.
ಜತೆಗೆ `14 ವರ್ಷದ ಹಿಂದೆಯೇ ಈ ಪಾರ್ಕ್ ಅಭಿವೃದ್ಧಿ ಕಾಣಬೇಕಿತ್ತು. ಆದರೆ, ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗಿರಲಿಲ್ಲ~ ಎಂದು ಮತ್ತಷ್ಟು ಕುಟುಕಿದರು.
ಇದೇ ದಿನ ಈಶ್ವರಪ್ಪ ಬೆಂಬಲಿಗರು, ಶಿವಮೊಗ್ಗ ನಗರದ ಆನಂದರಾವ್ ಬಡಾವಣೆಯಲ್ಲಿ ಕಾರ್ಯಕ್ರಮ ಏರ್ಪಡಿಸಿ, `ವ್ಯಕ್ತಿ ಮುಖ್ಯವಲ್ಲ; ಪಕ್ಷ ಮುಖ್ಯ. ಇದು ಎಲ್ಲ ಸಂದರ್ಭಗಳಲ್ಲಿ ಸತ್ಯ~ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.