ADVERTISEMENT

ಯಡಿಯೂರಪ್ಪ ವಿರುದ್ಧ ಮತ್ತೊಂದು ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 9:45 IST
Last Updated 25 ಫೆಬ್ರುವರಿ 2012, 9:45 IST

ಬೆಂಗಳೂರು (ಪಿಟಿಐ): ಮತ್ತೆ ಮುಖ್ಯಮಂತ್ರಿಯಾಗಲೇಬೇಕೆಂಬ ಯಡಿಯೂರಪ್ಪ ಅವರ ತ್ರಿವಿಕ್ರಮ ಪ್ರಯತ್ನಕ್ಕೆ ಲೋಕಾಯುಕ್ತ ಪೊಲೀಸರು ಶನಿವಾರ ಭಾರಿ ಹೊಡೆತ ನೀಡಿದ್ದಾರೆ. ಅವರ ವಿರುದ್ದ ಭೂ ಹಗರಣಗಳಿಗೆ ಸಂಬಂಧಿಸಿದಂತೆ ಮತ್ತೊಂದು ಎಫ್‌‌ಐಆರ್ ದಾಖಲಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕರ್ನಾಟಕ ಗೃಹ ಮಂಡಳಿಯ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಮೋಸ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದು, ಮುಖ್ಯಮಂತ್ರಿ ಗಾದಿ ಮೇಲೆ ಮತ್ತೆ ಕೂರಲು ಹವಣಿಸುತ್ತಿದ್ದ ಯಡಿಯೂರಪ್ಪ ಅವರಿಗೆ ತೀವ್ರ ಹಿನ್ನಡೆಯಾದಂತಾಗಿದೆ.

ಪತ್ರಕರ್ತರ ಕೋಟಾದಡಿ ಯಡಿಯೂರಪ್ಪ ಪುತ್ರಿ ಎಸ್.ವೈ. ಅರುಣಾದೇವಿ ಅವರು ಕರ್ನಾಟಕ ಗೃಹ ಮಂಡಳಿಯಿಂದ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂದು ವಕೀಲರೊಬ್ಬರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಧೀಶರು ತನಿಖೆಗೆ ಫೆ.21ರಂದು ಆದೇಶ ನೀಡಿದ್ದರು.

ಅರುಣಾದೇವಿ ಅವರು ಶಿವಮೊಗ್ಗದ ಕಲ್ಲಹಳ್ಳಿ ಕಾಶೀಪುರ ಕೆಎಚ್‌ಬಿ ಕಾಲೊನಿಯಲ್ಲಿ 121.50 ಚ.ಮೀ. ಅಳತೆಯ ಎರಡು ಮತ್ತು 135 ಚ.ಮೀ. ಅಳತೆಯ ಎರಡು ನಿವೇಶನಗಳನ್ನು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿವಶಂಕರ, ಕೃಷ್ಣ, ಸಂದೇಶಗೌಡ ಹಾಗೂ ಮಂಜುನಾಥ್ ಅವರ ಹೆಸರಿನಲ್ಲಿ ಪತ್ರಕರ್ತರ ಕೋಟಾದಡಿ ಅರ್ಜಿ ಸಲ್ಲಿಸಿ, ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ವಕೀಲ ಬಿ. ವಿನೋದ್ ತಮ್ಮ ವಿವರವಾದ ದೂರಿನಲ್ಲಿ ಆರೋಪಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.