ADVERTISEMENT

ಯಾವುದೇ ಸೈನ್ಯ ಆಕ್ರಮಣಕಾರಿಯಾಗಿರಬೇಕು

ವಿಜಯ್ ಜೋಷಿ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಯಲಹಂಕ ವಾಯುನೆಲೆ:  ‘ಹೊರರಾಷ್ಟ್ರದ ಯಾವುದೇ ಸೈನಿಕ ಚಟುವಟಿಕೆಯನ್ನೂ ಲಘುವಾಗಿ ಪರಿಗಣಿಸುವ ಪರಿಪಾಠ ಮಿಲಿಟರಿಯಲ್ಲಿ ಇಲ್ಲ. ನಾವು ನೆರೆರಾಷ್ಟ್ರಗಳ ಪ್ರತಿಯೊಂದು ಸೈನಿಕ ಚಲನವಲನಗಳನ್ನೂ ಬೆದರಿಕೆ ಎಂದೇ ಪರಿಗಣಿಸುತ್ತೇವೆ. ಯಾವುದು ಹೆಚ್ಚಿನ ಬೆದರಿಕೆ ಒಡ್ಡಿದೆ, ಯಾವುದು ಕಡಿಮೆ ಬೆದರಿಕೆ ಎಂಬ ಪ್ರಶ್ನೆ ಇಲ್ಲಿಲ್ಲ.’

- ಹೀಗೆ ಭಾರತಕ್ಕಿರುವ ಬಾಹ್ಯ ಬೆದರಿಕೆಗಳ ಕುರಿತ ಸುದ್ದಿಗಾರರ ಪ್ರಶ್ನೆಗೆ ನೇರ ಮಾತುಗಳಲ್ಲಿ ಉತ್ತರ ನೀಡಿದವರು ವಾಯುಪಡೆಯ ಮುಖ್ಯಸ್ಥ ಪಿ.ವಿ. ನಾಯ್ಕೆ.ಬೆಂಗಳೂರಿನಲ್ಲಿ ಆರಂಭವಾಗಿರುವ ಏರೊ ಇಂಡಿಯಾ-2011 ವೈಮಾನಿಕ ಕಾರ್ಯಕ್ರಮದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ದೇಶದ ಸೈನ್ಯವೂ ಕೇವಲ ರಕ್ಷಣಾತ್ಮಕವಾಗಿ ಇರಲು ಸಾಧ್ಯವಿಲ್ಲ’ ಎಂದರು.

‘ಭಾರತ ಎಂದೂ ಅನ್ಯ ದೇಶಗಳ ಮೇಲೆ ಆಕ್ರಮಣ ನಡೆಸಿದ ಉದಾಹರಣೆ ಇಲ್ಲ, ಆದರೆ ಇತ್ತೀಚಿನ ಚಟುವಟಿಕೆಗಳನ್ನು ಗಮನಿಸಿದರೆ ಭಾರತೀಯ ಸೈನ್ಯವೂ ಆಕ್ರಮಣಕಾರಿಯಾಗಿ ಬದಲಾಗಿದೆಯೇ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಯಾವುದೇ ಸೈನ್ಯ ಆಕ್ರಮಣಕಾರಿ ಮನೋಭಾವವನ್ನು ಹೊಂದಿರಲೇಬೇಕು’ ಎಂದು ನೇರವಾಗಿ ಹೇಳಿದರು.

ADVERTISEMENT

‘ದೇಶದ ಗಡಿಗಳು ಭದ್ರವಾಗಿದ್ದಾಗ ಮಾತ್ರ ಆಂತರಿಕ ಚಟುವಟಿಕೆಗಳು ನಿರಾತಂಕವಾಗಿ ಸಾಗುತ್ತವೆ. ನಮ್ಮ ದೇಶದ ಆರ್ಥಿಕತೆ ಬಲಗೊಳ್ಳುತ್ತಿದೆ. ಇದರ ಜೊತೆಗೇ ನಮ್ಮ ಹಿತಾಸಕ್ತಿಗಳೂ ಹೆಚ್ಚಾಗುತ್ತಿವೆ. ಇವೆಲ್ಲವನ್ನೂ ರಕ್ಷಿಸಲು ನಮ್ಮ ಗಡಿಗಳು ಸುಭದ್ರವಾಗಿರುವುದು ಅನಿವಾರ್ಯ. ಹಾಗಾಗಿ ದೇಶದ ಭದ್ರತಾ ವೆಚ್ಚವೂ ಹೆಚ್ಚಾಗುತ್ತಿದೆ’ಎಂದು ಉತ್ತರಿಸಿದರು.

ಸ್ವದೇಶೀಕರಣ: ಭಾರತೀಯ ಸೇನಾಪಡೆಗಳಿಗೆ ಅಗತ್ಯವಿರುವ ಅನೇಕ ಸೂಕ್ಷ್ಮ ತಂತ್ರಜ್ಞಾನ ನಮ್ಮಲ್ಲೇ ಅಭಿವೃದ್ಧಿ ಹೊಂದುವವರೆಗೆ ನಮ್ಮ ರಕ್ಷಣಾ ಉಪಕರಣಗಳನ್ನು ಸಂಪೂರ್ಣವಾಗಿ ದೇಶದಲ್ಲೇ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಒಮ್ಮೆ ಆ ತಂತ್ರಜ್ಞಾನ ನಮ್ಮಲ್ಲಿ ಅಭಿವೃದ್ಧಿಯಾದರೆ ರಕ್ಷಣಾ ಉಪಕರಣಗಳನ್ನು ದೇಶೀಯವಾಗಿ ನಿರ್ಮಿಸುವ ಕಾರ್ಯಕ್ಕೆ ಹೆಚ್ಚಿನ ವೇಗ ದೊರಕಲಿದೆ ಎಂದರು.

ಪಾಕ್ ಸೇನಾ ಸಾಮರ್ಥ್ಯ: ಪಾಕಿಸ್ತಾನ ಮತ್ತು ಚೀನಾ ದೇಶಗಳ ನಡುವಿನ ರಕ್ಷಣಾ ಒಪ್ಪಂದದ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಹಕ್ಕು ಪಾಕಿಸ್ತಾನಕ್ಕೆ ಇದೆ’ ಎಂದು ಉತ್ತರಿಸಿದರು.

ಖಾಸಗಿ ಕಂಪೆನಿಗಳಿಂದ ಖರೀದಿಸಲು ಉದ್ದೇಶಿಸಿರುವ 126 ಮಧ್ಯಮ ಬಹು ಉಪಯೋಗಿ ಯುದ್ಧ ವಿಮಾನಗಳ (ಎಂಎಂಆರ್‌ಸಿಎ) ಬಗ್ಗೆ ಇದ್ದ ಅಡಚಣೆಗಳು ನಿವಾರಣೆಯಾಗಿವೆ. ಆರು ಕಂಪೆನಿಗಳು ಇವನ್ನು ಪೂರೈಸಲು ಸಿದ್ಧವಾಗಿವೆ. ಇದೇ ಸೆಪ್ಟೆಂಬರ್‌ನಲ್ಲಿ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಮಾಹಿತಿ ನೀಡಿದರು.

ಮಿರಾಜ್-2000 ಮೇಲ್ದರ್ಜೆಗೆ: ‘ಈಗ ವಾಯುಪಡೆಯ ಸೇವೆಯಲ್ಲಿರುವ ಮಿರಾಜ್-2000 ಮಾದರಿಯ ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಹೊಸ ರಾಡಾರ್ ವ್ಯವಸ್ಥೆ, ಸೆನ್ಸಾರ್‌ಗಳು ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗುವುದು. ಇನ್ನೂ 20 ವರ್ಷಗಳ ಕಾಲ ಇವು ಸೇವೆಯಲ್ಲಿರುವಂತೆ ಮಾಡುವುದು ನಮ್ಮ ಇಚ್ಛೆ’ ಎಂದರು.

60ಕ್ಕೂ ಹೆಚ್ಚು ಜಾಗ್ವಾರ್ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

‘ಕೈಬಿಡುವ ಪ್ರಶ್ನೆಯೇ ಇಲ್ಲ’: ಭಾರತೀಯ ವಾಯುಪಡೆಯ ಪೈಲಟ್‌ಗಳಿಗೆ ತರಬೇತಿ ನೀಡಲು ಬಳಸಲಾಗುತ್ತಿರುವ ಸೂರ್ಯಕಿರಣ ವಿಮಾನಗಳನ್ನು ಕೈಬಿಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ‘ಆ ವಿಮಾನಗಳನ್ನು ಕೈಬಿಡುವುದು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಎಲ್‌ಸಿಎ ಗುಣಮಟ್ಟದ ಬಗ್ಗೆ ಅತೃಪ್ತಿ?
ಬಹುಚರ್ಚಿತ ಭಾರತೀಯ ಲಘು ಯುದ್ಧ ವಿಮಾನ (ಎಲ್‌ಸಿಎ) ‘ತೇಜಸ್’ನ ಗುಣಮಟ್ಟದ ಬಗ್ಗೆ ವಾಯುಪಡೆಯ ಮುಖ್ಯಸ್ಥರಾದ ಪಿ.ವಿ. ನಾಯ್ಕೆ ಅವರಿಗೆ ಸಂಪೂರ್ಣ ತೃಪ್ತಿ ಇಲ್ಲವೇ?

ಏರೊ ಇಂಡಿಯಾ ಕಾರ್ಯಕ್ರಮದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ನಾಯ್ಕೆ ಅವರು ನೀಡಿದ ಉತ್ತರ ಈ ಪ್ರಶ್ನೆಯನ್ನು ಮತ್ತೊಮ್ಮೆ ಹುಟ್ಟುಹಾಕಿದೆ.

‘ನಮ್ಮ ಹುಡುಗರು (ವಾಯುಪಡೆಯ ಯೋಧರು) ಎಲ್‌ಸಿಎ ಯುದ್ಧ ವಿಮಾನವನ್ನು ಏರುವ ಮುನ್ನ ಅದರ ಗುಣಮಟ್ಟದ ಕುರಿತಾದ ಕೆಲವು ವಿಚಾರಗಳು ಬಗೆಹರಿಯಬೇಕು’ ಎಂದು ಅವರು ಎಲ್‌ಸಿಎ ಗುಣಮಟ್ಟದ ಕುರಿತ ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರಿಸಿದರು. ‘ನಮಗೆ ಎಲ್‌ಸಿಎ ಗುಣಮಟ್ಟದ ಬಗ್ಗೆ ಸಾಕಷ್ಟು ಕಾಳಜಿ ಇದೆ. ಹಾಗಾಗಿ ಈ ವಿಮಾನದ ತಯಾರ   ಕರ ಮೇಲೆ  ಒತ್ತಡ ಹೇರಬೇಕಿದೆ’ ಎಂದರು. ಕಳೆದ ಜನವರಿಯಲ್ಲಿ ಬೆಂಗಳೂರಿನ ಎಚ್‌ಎಎಲ್ ವಾಯುನೆಲೆಯಲ್ಲಿ ನಡೆದ ‘ತೇಜಸ್’ ವಿಮಾನಕ್ಕೆ ಆರಂಭಿಕ ಹಾರಾಟ ಅನುಮತಿ ಪ್ರಮಾಣಪತ್ರ ನೀಡುವ ಕಾರ್ಯಕ್ರಮದಲ್ಲೂ ನಾಯ್ಕೆ ಅವರು ಈ ವಿಮಾನದ ಗುಣಮಟ್ಟದ ಕುರಿತಂತೆ ಕೆಲವು ಪ್ರಶ್ನೆಗಳನ್ನು ಪರೋಕ್ಷವಾಗಿ ಎತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.