ADVERTISEMENT

ಯುದ್ಧವಿಮಾನ ಹಾರಾಟ ನಡೆಸಿದ ಟಾಟಾ

ಶ್ರೀಕಾಂತ ಕಲ್ಲಮ್ಮನವರ
Published 10 ಫೆಬ್ರುವರಿ 2011, 18:30 IST
Last Updated 10 ಫೆಬ್ರುವರಿ 2011, 18:30 IST

ಯಲಹಂಕ ವಾಯುನೆಲೆ:  ಖ್ಯಾತ ಉದ್ಯಮಿ, 74 ವರ್ಷದ ರತನ್ ಟಾಟಾ ಅವರು ಗುರುವಾರ ಅಮೆರಿಕ ನಿರ್ಮಿತ ಎಫ್-18 ಸೂಪರ್ ಹಾರ್ನೆಟ್ ಯುದ್ಧವಿಮಾನವನ್ನು ಹಾರಿಸುವ ಮೂಲಕ ‘ಏರೊ ಇಂಡಿಯಾ-2011’ರ ವೀಕ್ಷಕರ ನಿರೀಕ್ಷೆಯನ್ನು ಸಾಕಾರಗೊಳಿಸಿದರು.

ಟಾಟಾ ಅವರು ವಿಮಾನ ಹಾರಿಸಲಿದ್ದಾರೆ ಎನ್ನುವ ವಿಷಯವನ್ನು ಕೊನೆಯ ಕ್ಷಣದವರೆಗೂ ಅಧಿಕಾರಿಗಳು ಗೋಪ್ಯವಾಗಿ ಇಟ್ಟಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಟಾಟಾ ಅವರ ಹಾರಾಟವನ್ನು ಪ್ರಕಟಿಸುತ್ತಿದ್ದಂತೆ ವಾಯು ನೆಲೆಯ ಸುತ್ತ ನೆರೆದಿದ್ದ ವೀಕ್ಷಕರಲ್ಲಿ ರೋಮಾಂಚನ ಉಂಟಾಯಿತು.

ಅಮೆರಿಕದ ಪೈಲಟ್ ಮೈಕ್ ವ್ಯಾಲೆಸ್ ಅವರ ಜೊತೆಗೂಡಿ ಟಾಟಾ ವಿಮಾನ ಏರುತ್ತಿದ್ದಂತೆ ಪ್ರೇಕ್ಷಕರಿಂದ ಭಾರಿ ಕರತಾಡನ ವ್ಯಕ್ತವಾಯಿತು. ಪ್ರೇಕ್ಷಕರಷ್ಟೇ ಉತ್ಸಾಹದಿಂದ ಅವರು ಸೂಪರ್ ಹಾರ್ನೆಟ್ ಯುದ್ಧ ವಿಮಾನವನ್ನು ಲೀಲಾಜಾಲವಾಗಿ ಹಾರಿಸಿದರು. ಭೋರ್ಗರೆತದ ಶಬ್ದದೊಂದಿಗೆ ಪ್ರತಿಗಂಟೆಗೆ 1,600 ಕಿ.ಮೀ ವೇಗದಲ್ಲಿ ಹಾರುವ ಸಾಮರ್ಥ್ಯ ಇದಕ್ಕಿದೆ. ಬಾನಂಗಳದಲ್ಲಿ ಸ್ವಚ್ಛಂದವಾಗಿ ಮುಕ್ಕಾಲು ಗಂಟೆಯವರೆಗೆ ಹಾರಾಟ ನಡೆಸಿದರು. ಭೂಮಿಯಿಂದ 500 ಮೀಟರ್ ಮತ್ತು 1500 ಮೀಟರ್ ಅಂತರದ ವಾಯುವಲಯದಲ್ಲಿ  ಅವರು ಹಾರಾಟ ನಡೆಸಿ ಜನಮನ ಗೆದ್ದರು.

ADVERTISEMENT

ರೋಚಕ ಅನುಭವ: ‘ಇದೊಂದು ರೋಚಕ ಅನುಭವ’ ಎಂದು ಅವರು ಪತ್ರಕರ್ತರೊಂದಿಗೆ ಅನುಭವ ಹಂಚಿಕೊಂಡರು. ‘ಕಳೆದ ಬಾರಿ 2009ರಲ್ಲಿ ಅಮೆರಿಕದ ಎಫ್- 16 ಯುದ್ಧ ವಿಮಾನವನ್ನು ಹಾರಿಸಿದ್ದೆ. ಅದಕ್ಕಿಂತ ಇದು ಉತ್ತಮವಾಗಿದೆ, ಅತ್ಯಾಧುನಿಕವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.