ADVERTISEMENT

ಯುದ್ಧ ವಿಮಾನ: ಮುಂದಿನ ತಿಂಗಳು ಪರೀಕ್ಷಾರ್ಥ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಬೆಂಗಳೂರು: ದೇಶದ ನೌಕಾದಳದ ಬಳಕೆಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಲಘು ಯುದ್ಧ ವಿಮಾನದ (ಎಲ್‌ಸಿಎ) ಪರೀಕ್ಷಾರ್ಥ ಹಾರಾಟ ಮುಂದಿನ ತಿಂಗಳು ನಡೆಯಲಿದೆ ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ. ವಿ.ಕೆ.ಸಾರಸ್ವತ್ ತಿಳಿಸಿದರು.

ರಕ್ಷಣಾ ಇಲಾಖೆಯ ಅಂಗ ಸಂಸ್ಥೆಯಾದ `ಡಿಫೆನ್ಸ್ ಏವಿಯಾನಿಕ್ಸ್ ರಿಸರ್ಚ್ ಎಸ್ಟಾಬ್ಲಿಷ್‌ಮೆಂಟ್~ನ ಬೆಳ್ಳಿಹಬ್ಬದ ಆಚರಣೆಯ ನಂತರ ಸೋಮವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

`ನೌಕಾದಳಕ್ಕೆ ಅಗತ್ಯವಿರುವ ಲಘು ಯುದ್ಧ ವಿಮಾನದ ತಾಂತ್ರಿಕತೆ, ವಿನ್ಯಾಸ ಇನ್ನಿತರ ಅಂಶಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಕಾರ್ಯ ಪೂರ್ಣಗೊಂಡ ನಂತರ ವಿಮಾನದ ಪರೀಕ್ಷಾರ್ಥ ಹಾರಾಟ ನಡೆಯಲಿದೆ~ ಎಂದರು.

ಅತ್ಯಾಧುನಿಕ `ಅಗ್ನಿ-5~ ಖಂಡಾಂತರ ಕ್ಷಿಪಣಿಯ ವಿವಿಧ ಭಾಗಗಳನ್ನು ಜೋಡಿಸುವ ಕೆಲಸ ಪ್ರಗತಿಯಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಪ್ರಯೋಗ ಮಾರ್ಚ್ ಕೊನೆಯ ವಾರದಲ್ಲಿ ಸಾಧ್ಯವಾಗಲಿದೆ ಎಂದು `ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ~ ಯ (ಡಿಆರ್‌ಡಿಒ) ಆಡಳಿತ ನಿರ್ದೇಶಕರೂ ಆಗಿರುವ ಸಾರಸ್ವತ್ ತಿಳಿಸಿದರು.

ಅಂದಾಜು 6,000 ಕಿಲೊ ಮೀಟರ್‌ನಷ್ಟು ದೂರದಲ್ಲಿರುವ ವೈರಿ ನೆಲೆಯನ್ನೂ ಧ್ವಂಸಗೊಳಿಸಬಲ್ಲ `ಅಗ್ನಿ-5~ ಕ್ಷಿಪಣಿಯನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿದೆ. ಇದರ ಕಾರ್ಯ 2007ಕ್ಕೂ ಮುನ್ನವೇ ಆರಂಭವಾಗಿದೆ.
ಡಿಆರ್‌ಡಿಒ ಸಂಸ್ಥೆಯನ್ನು ವಾಣಿಜ್ಯಿಕವಾಗಿ ಬೆಳೆಸುವ ಸಂಬಂಧ ರಾಮರಾವ್ ಸಮಿತಿ ಮಾಡಿರುವ ಬಹುಪಾಲು ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲಾಗಿದೆ.

ಕೆಲವು ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರದ ಅನುಮತಿ ಬೇಕಿದೆ.
ಅಗತ್ಯ ಅನುಮತಿಗೆ ಕಾಯಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.