ADVERTISEMENT

ಯುಪಿಎಸ್‌ಸಿ: 544ರಿಂದ 366ನೇ ರ‍್ಯಾಂಕ್‌ಗೇರಿದ ಪ್ರತೀಕ್‌

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 9:05 IST
Last Updated 28 ಏಪ್ರಿಲ್ 2018, 9:05 IST
ಪ್ರತೀಕ್‌ ಪಾಟೀಲ
ಪ್ರತೀಕ್‌ ಪಾಟೀಲ   

ಬೆಳಗಾವಿ: ಯುಪಿಎಸ್‌ಸಿಯು 2016ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ 544ನೇ ರ‍್ಯಾಂಕ್‌ ಗಳಿಸಿದ್ದ ಇಲ್ಲಿನ ಭಾಗ್ಯನಗರ 9ನೇ ಕ್ರಾಸ್‌ ನಿವಾಸಿ 29 ವರ್ಷದ ಪ್ರತೀಕ್‌ ಪಾಟೀಲ ಈ ಬಾರಿ ಫಲಿತಾಂಶ ಸುಧಾರಿಸಿಕೊಂಡಿದ್ದು, 366ನೇ ರ‍್ಯಾಂಕ್‌ ಗಳಿಸಿ ಸಾಧನೆ ತೋರಿದ್ದಾರೆ.

ಇವರು, ತೆರಿಗೆ ಹಾಗೂ ಬಂಡವಾಳ ಹೂಡಿಕೆ ಸಮಾಲೋಚಕ ಆರ್‌.ಬಿ. ಪಾಟೀಲ–ಸ್ಮಿತಾ ಪಾಟೀಲ ದಂಪತಿಯ ಪುತ್ರ. 2006ರಲ್ಲಿ ಸೇಂಟ್‌ ಪಾಲ್ಸ್‌ ಶಾಲೆಯಲ್ಲಿ ಎಸ್ಎಸ್‌ಎಲ್‌ಸಿ, ನಂತರ ಜಿಎಸ್‌ಎಸ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿದ್ದರು. ಜಿಐಟಿಯಲ್ಲಿ 2012ರಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಎಲ್ಲ ಹಂತದಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಶ್ರೇಯಸ್ಸು ಅವರದು. ಕ್ಯಾಂಪಸ್‌ ಸಂದರ್ಶನದಲ್ಲಿ ಅವರಿಗೆ ವಿಪ್ರೋ ಟೆಕ್ನಾಲಜೀಸ್‌ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಇದನ್ನು ನಿರಾಕರಿಸಿದ ಅವರು, ನವದೆಹಲಿಗೆ ತೆರಳಿ ಯುಪಿಎಸ್‌ಸಿ ಪರೀಕ್ಷೆ ಕೋಚಿಂಗ್‌ಗೆ ಸೇರಿದ್ದರು. ಎರಡನೇ ಯತ್ನದಲ್ಲಿ 544ನೇ ರ‍್ಯಾಂಕ್‌ ಪಡೆದಿದ್ದರು.

ಸದ್ಯ ಅವರು ನವದೆಹಲಿಯ ಐಡಿಇಎಸ್‌ನಲ್ಲಿ (ಇಂಡಿಯನ್‌ ಡಿಫೆನ್ಸ್‌ ಎಸ್ಟೇಟ್‌ ಸರ್ವಿಸ್‌) ‘ಆಫೀಸರ್‌ ಟ್ರೇನಿ’ ಹುದ್ದೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ADVERTISEMENT

ಅವರ ಸಹೋದರ ರೋಹನ್‌ ಪಾಟೀಲ ಅಮೆರಿಕದಲ್ಲಿ ಕೆಲಸದಲ್ಲಿದ್ದಾರೆ. ಸಹೋದರಿ, ಡಾ.‍ಪ್ರಣೋತಿ ಪಾಟೀಲ (ಪ್ರತೀಕ್‌–ಪ್ರಣೋತಿ ಅವಳಿ–ಜವಳಿ) ಇಲ್ಲಿನ ಕೆಎಲ್‌ಇ ಸಂಸ್ಥೆಯ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನಲ್ಲಿ ಎಂಎಸ್‌ (ಜನರಲ್‌ ಸರ್ಜರಿ) ಮಾಡುತ್ತಿದ್ದಾರೆ.

‘100ನೇ ರ್‍ಯಾಂಕ್‌ನೊಳಗೆ ಬರಬೇಕು ಎಂದು ಶ್ರಮಿಸಿದ್ದೆ. ಆದರೂ ಹೋದ ಬಾರಿಗಿಂತ ಹೆಚ್ಚಿನ ಸುಧಾರಣೆ ಕಂಡಿರುವುದು ನನ್ನ ಉತ್ಸಾಹ ಇಮ್ಮಡಿಗೊಳಿಸಿದೆ. ಇದು ಒಳ್ಳೆಯ ಸಾಧನೆ ಎಂದೇ ಭಾವಿಸಿದ್ದೇನೆ. ಡಿಸೆಂಬರ್‌ನಿಂದ ಈ ಹುದ್ದೆಯ ತರಬೇತಿಗೆ ಬಂದಿದ್ದೇನೆ. ಈ ನಡುವೆಯೇ ಸಂದರ್ಶನಕ್ಕೆ ಸಿದ್ಧವಾಗಿದ್ದೆ. ಐಎಎಸ್‌ ಅಧಿಕಾರಿಯಾಗಿ, ದೇಶ ಹಾಗೂ ಜನರ ಸೇವೆ ಮಾಡಬೇಕು ಎನ್ನುವುದು ನನ್ನ ಕನಸು. 366ನೇ ರ‍್ಯಾಂಕ್‌ಗೆ ಒಳ್ಳೆಯ ಹುದ್ದೆ ಸಿಗಬಹುದು. ಈಗಿರುವ ಕೆಲಸ ಬಿಡಬೇಕೋ ಬೇಡವೋ ಎನ್ನುವ ಕುರಿತು ಐಡಿಇಎಸ್‌ ಅಧಿಕಾರಿಗಳು ಹಾಗೂ ಪೋಷಕರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ. ಒಳ್ಳೆಯ ರ್‍ಯಾಂಕ್‌ಗಾಗಿ ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳುವ ಉದ್ದೇಶವೂ ಇದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೋದ ಪರೀಕ್ಷೆಯಲ್ಲಿ ತೆಗೆದುಕೊಂಡ ರ‍್ಯಾಂಕ್‌ ಬಗ್ಗೆ ಸಮಾಧಾನವಿರಲಿಲ್ಲ. ಇದರಿಂದಾಗಿ ಮತ್ತೊಮ್ಮೆ ಪ್ರಯತ್ನ ಮಾಡಿದ್ದೆ. ಯಶಸ್ಸು ದೊರೆತಿರುವುದರಿಂದ ಖುಷಿಯಾಗಿದೆ’ ಎಂದರು.

‘ಪ್ರತೀಕ್‌ ಶಾಲಾ ಹಂತದಿಂದಲೂ ಒಳ್ಳೆಯ ಅಂಕಗಳನ್ನೇ ತೆಗೆಯುತ್ತಾ ಬಂದಿದ್ದಾನೆ. ಯುಪಿಎಸ್‌ಸಿ ಪರೀಕ್ಷೆಯಲ್ಲೂ ರ‍್ಯಾಂಕ್‌ನಲ್ಲಿ ಗಮನಾರ್ಹ ಸುಧಾರಣೆಯಾಗಿರುವುದು ಖುಷಿ ತರಿಸಿದೆ. ಈಗ ಐಡಿಇಎಸ್‌ ಹುದ್ದೆಯ ತರಬೇತಿ ಪಡೆಯುತ್ತಿದ್ದೇನೆ. ಇದೀಗ, ಮತ್ತೊಂದು ತರಬೇತಿಗೆ ಹೋಗಬೇಕಾಗಿದೆ. ಆದರೆ, ಇನ್ನೂ ಒಳ್ಳೆಯ ಹುದ್ದೆ ಸಿಗುತ್ತದೆ ಎನ್ನುವುದೇ ಖುಷಿ’ ಎಂದು ತಂದೆ ಆರ್‌.ಬಿ. ಪಾಟೀಲ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.