ADVERTISEMENT

ಯುರೇನಿಯಂ ಗಣಿಗಾರಿಕೆ: ಪರಿಸರ ಇಲಾಖೆ ಅನುಮತಿ ಬಗ್ಗೆ ಮಾಹಿತಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 18:50 IST
Last Updated 2 ಫೆಬ್ರುವರಿ 2011, 18:50 IST
ಯುರೇನಿಯಂ ಗಣಿಗಾರಿಕೆ: ಪರಿಸರ ಇಲಾಖೆ ಅನುಮತಿ ಬಗ್ಗೆ ಮಾಹಿತಿಗೆ ಆದೇಶ
ಯುರೇನಿಯಂ ಗಣಿಗಾರಿಕೆ: ಪರಿಸರ ಇಲಾಖೆ ಅನುಮತಿ ಬಗ್ಗೆ ಮಾಹಿತಿಗೆ ಆದೇಶ   

ಶಹಾಪುರ: ಗೋಗಿ ಗ್ರಾಮದಲ್ಲಿ ಯುರೇನಿಯಂ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಪರಿಸರ ಇಲಾಖೆಯಿಂದ ಅನುಮತಿ ಪಡೆದುಕೊಂಡ ಬಗ್ಗೆ ಸಮಗ್ರವಾದ ವಿವರ ಸಲ್ಲಿಸುವಂತೆ ಉನ್ನತ ಮಟ್ಟದ ಸಮಿತಿ ಆದೇಶ ನೀಡಿದೆ.

ಪರಿಸರ ತಜ್ಞರ ಸಮಿತಿಯ ಸಂಚಾಲಕ ಹಾಗೂ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ಮಧುಕವಿ ಹಾಗೂ ಕ್ಯಾನ್ಸರ್ ತಜ್ಞ ಡಾ.ಶೇಖರ ಪಾಟೀಲ್ ಬುಧವಾರ ಯುರೇನಿಯಂ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿವರ ಸಲ್ಲಿಸುವಂತೆ ಸ್ಥಳೀಯ ಅಧಿಕಾರಿಗೆ ತಾಕೀತು ಮಾಡಿದರು.

ಯುರೇನಿಯಂ ಗಣಿಗಾರಿಕೆ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ತಂಡ ಅಧಿಕಾರಿಯಿಂದ ಮಾಹಿತಿ ಕಲೆ ಹಾಕಿತು. ಗಣಿಗಾರಿಕೆಯಲ್ಲಿ 45 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೂ ಗ್ರಾಮದ ಸುತ್ತಮುತ್ತ 40 ಎಕರೆಗೂ ಅಧಿಕ ಭೂಮಿಯನ್ನು ವಶಪಡಿಸಿಕೊಂಡು ಯುರೇನಿಯಂ ಕಾರ್ಪೋರೇಶನ್ ಆಫ್ ಇಂಡಿಯಾ ವ್ಯಾಪ್ತಿಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಯುರೇನಿಯಂ ಸ್ಥಾನಿಕ ಅಧಿಕಾರಿ ಮಾಹಿತಿ ನೀಡಿದರು.

ಈಗಾಗಲೇ ಗಣಿಗಾರಿಕೆಗಾಗಿ ಎಷ್ಟು ಪ್ರದೇಶದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಅದರ ಉದ್ದ ಮತ್ತು ಆಳದ ಬಗ್ಗೆ ವಿವರ ನೀಡಬೇಕು. ಗಣಿಗಾರಿಕೆಯಿಂದ ಹೊರಬರುವ ಕಚ್ಚಾ ಸಾಮಗ್ರಿಗಳನ್ನು ಸಂಗ್ರಹ, ಕೊಳವೆ ಬಾವಿಯಿಂದ ಬರುವ ನೀರನ್ನು ಹರಿದುಬಿಡುವುದು, ದೂಳಿನ ಪ್ರಮಾಣ ಮತ್ತಿತರ ಅಂಶಗಳ ಬಗ್ಗೆ ಸುತ್ತಲಿನ ಪ್ರದೇಶಲ್ಲಿ ಸುತ್ತಾಡಿ ಸ್ಥಳ ಪರಿಶೀಲನೆ ನಡೆಸಲಾಯಿತು.

ನೆಲದ ಆಳದಲ್ಲಿ ಕಲ್ಲು ಬಂಡೆಗಳು ಬಂದಾಗ ಅಲ್ಲಿ ಸ್ಫೋಟಿಸಿದ ಸದ್ದಿನಿಂದ ಭೂಮಿ ಅಲುಗಾಡುತ್ತದೆ. ಗ್ರಾಮಸ್ಥರು ಭೀತಿಯ ನೆರಳಲ್ಲೇ ಬದುಕಬೇಕಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಯುರೇನಿಯಂ ಗಣಿಗಾರಿಕೆಯಿಂದ ರಸಾಯನಿಕ ದ್ರವ ರೂಪದ ವಸ್ತುಗಳು ನೀರಿನಲ್ಲಿ ಸಂಗ್ರಹವಾಗುತ್ತದೆ. ಭೂಮಿ ಕೊರೆಯುವುದರಿಂದ ಅಂತರ್ಜಲ ಮಟ್ಟ ಕುಸಿಯುವುದು. ನೀರು ಕುಡಿಯುಲು  ಯೋಗ್ಯವಿರುವುದಿಲ್ಲ ಎಂದು ಗ್ರಾಮಸ್ಥರು ತಂಡದ ಗಮನಕ್ಕೆ ತಂದಾಗ ಈ ಬಗ್ಗೆ ಗುರುವಾರ ಇಡೀ ಗ್ರಾಮ ಸುತ್ತಾಡಿ ಆರೋಗ್ಯದ ಬಗ್ಗೆ ವಿಚಾರಿಸಲಾಗುವುದು ಎಂದು ಡಾ.ಮಧುಕವಿ ಸ್ಪಷ್ಟಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.