ADVERTISEMENT

ಯುವಕನ ಮೇಲೆ ಹಲ್ಲೆ ಪ್ರಾರ್ಥನಾ ಮಂದಿರಕ್ಕೆ ಕಲ್ಲು

ಉಡುಪಿಯ ನೇಜಾರಿನಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ಉಡುಪಿ: ಗುಂಪೊಂದು ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಉಡುಪಿ ಹೊರವಲಯದ ನೇಜಾರಿನಲ್ಲಿ ಮಂಗಳವಾರ ರಾತ್ರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ನೇಜಾರು ನಿವಾಸಿ ಇಕ್ಬಾಲ್ ಎಂಬುವವರ ಮೇಲೆ ಹಲ್ಲೆ ನಡೆಸಿದ ಸತೀಶ್ ಪೂಜಾರಿ, ಪ್ರವೀಣ ಮತ್ತು ಪ್ರಶಾಂತ ಎಂಬುವವರನ್ನು ಬಂಧಿಸಿದ್ದಾರೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದು ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಆರೋಪಿ ಸತೀಶ್ ಪೂಜಾರಿ ಕಲ್ಯಾಣಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂದು ತಿಳಿದುಬಂದಿದೆ.

ನೇಜಾರಿನಲ್ಲಿ ಮಂಗಳವಾರ ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲ ಸಮುದಾಯದ ಯುವಕರು ಹೋಗಿದ್ದರು. ಅಲ್ಲಿ ಬಂಧಿತ ಆರೋಪಿಗಳು ಮತ್ತಿತರರು ಸೇರಿ ಇಕ್ಬಾಲ್ ಅವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಇದೇ ಸಂದರ್ಭ ಬಳಸಿಕೊಂಡ ಕೆಲವು ಕಿಡಿಗೇಡಿಗಳು ನೇಜಾರಿನ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಂದಿರದ  ಕಿಟಕಿಯ ಗಾಜು ಪುಡಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಕ್ಬಾಲ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮತ್ತು ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ ಇನ್ನೊಂದು ಪ್ರಕರಣವನ್ನು ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಬಂಧಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಡಿಬೆಂಗ್ರೆ ಘಟನೆ ಕಾರಣ: ಕೋಡಿಬೆಂಗ್ರೆಯ ಮನೆಯೊಂದರ ಎದುರು ಕರುವೊಂದನ್ನು ಕಟ್ಟಿದ್ದನ್ನು ನೋಡಿದ ಹಿಂದೂಪರ ಸಂಘಟನೆಯ ಸದಸ್ಯರು ಕರುವನ್ನು ಕಸಾಯಿಖಾನೆಗೆ ಸಾಗಿಸಲು ಯತ್ನಿಸಲಾಗುತ್ತಿದೆ ಎಂದು ಗಲಾಟೆ ಮಾಡಿದ್ದರು. ಈ ಪ್ರಕರಣದ ನಂತರ ನಡೆದ ಪ್ರತಿಭಟನೆಯಲ್ಲಿ ಇಕ್ಬಾಲ್ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.