ADVERTISEMENT

ಯುವಕರಿಗೆ ಕೆರೆಯಿಂದ `ಉದ್ಯೋಗ ಖಾತ್ರಿ'

ಕೆ.ನರಸಿಂಹ ಮೂರ್ತಿ
Published 20 ಜುಲೈ 2013, 19:28 IST
Last Updated 20 ಜುಲೈ 2013, 19:28 IST

ಕೋಲಾರ: ಉದ್ಯೋಗವಿಲ್ಲದೆ, ಕೃಷಿಯಲ್ಲಿ ನಷ್ಟ ಅನುಭವಿಸಿ, ಕೂಲಿಯೂ ಸಿಗದೆ ಮುಳಬಾಗಲು ತಾಲ್ಲೂಕನ್ನು ತೊರೆದು ಬೆಂಗಳೂರು ಸೇರಿದ್ದ ಬಹಳಷ್ಟು ಯುವಕರು ಈಗ ವಾಪಸ್ ಬಂದಿದ್ದಾರೆ.

ಬಹಳಷ್ಟು ಜನರ ಮನೆಗಳ ಮುಂದೆ ಜೆಸಿಬಿ ಯಂತ್ರಗಳು, ಟ್ರ್ಯಾಕ್ಟರ್‌ಗಳು ನಿಂತಿವೆ. ಅವರೆಲ್ಲರಿಗೂ ಈಗ ಕೆರೆಗಳಲ್ಲಿ ಮರಳು ತೆಗೆಯುವುದೇ ಪ್ರಮುಖ ಉದ್ಯೋಗ. ನೀರು ಕೊಡುತ್ತಿದ್ದ ಕೆರೆಗಳು ಈಗ ತಾಲ್ಲೂಕಿನ ನೂರಾರು ಯುವಕರಿಗೆ ಉದ್ಯೋಗವನ್ನು ಕೊಡುತ್ತಿವೆ. `ಕೆರೆ ನೆಚ್ಚಿಕೊಂಡರೆ ಉದ್ಯೋಗ ಖಾತ್ರಿ- ಒಳ್ಳೆಯ ಆದಾಯ' ಎಂಬ ಅಪಾಯಕಾರಿಯಾದ ಹೊಸ ನಾಣ್ಣುಡಿಯೂ ಚಾಲ್ತಿಗೆ ಬಂದಿದೆ.

ಇದೇ ಸಂದರ್ಭಧಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಮರಳು ಫಿಲ್ಟರಿಂಗ್ ಕೆಲಸ ಮಾಡಿ ದಿನವೊಂದಕ್ಕೆ 500ರಿಂದ 1 ಸಾವಿರ ರೂಪಾಯಿ ಸಂಪಾದಿಸುತ್ತಿರುವ ನಿದರ್ಶನಗಳೂ ಕಂಡು ಬರುತ್ತಿವೆ. ಹೆಚ್ಚು ಮರಳು ಗಣಿಗಾರಿಕೆ ನಡೆಯುವ ತಾಲ್ಲೂಕಿನ ಬೈರಕೂರು ಹೋಬಳಿಯ ಗ್ರಾಮಗಳಲ್ಲಿ ಈ ಚಟುವಟಿಕೆ ಹೆಚ್ಚಾಗಿದೆ.

ಮುಳಬಾಗಲು ತಾಲ್ಲೂಕಿನ ಯುವಕರು ತಮ್ಮ ವ್ಯಾಪ್ತಿಯ ಯಾವುದೇ ಕೆರೆಯಂಗಳದ ಒಂದು ಇಂಚನ್ನೂ ಬಿಡಲು ತಯಾರಿಲ್ಲ. ಲೈಟು ಕಂಬದೆತ್ತರದಷ್ಟು ಆಳಕ್ಕೆ ಕೆರೆಗಳನ್ನು ಬಗೆಯುತ್ತ, ಮರಳನ್ನು ತೆಗೆಯುತ್ತಲೇ ಇದ್ದಾರೆ. ಇನ್ನೂ ಕೆಲವು ಜಾಣರು ಕೃಷಿ ಜಮೀನಿನಲ್ಲಿ ಮರಳು ತೆಗೆಯುವ ಮತ್ತು ಮಾರಾಟ ಮಾಡುವ ದಲ್ಲಾಳಿ ಕೆಲಸವನ್ನು ಶುರು ಮಾಡಿದ್ದಾರೆ.
ಊಹೆಗೂ ಮೀರಿದ ಮೊತ್ತ: ಪೂರ್ಣ ಪ್ರಮಾಣದಲ್ಲಿ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ತಾಲ್ಲೂಕಿನ ಯುವಕರು ದಿನಕ್ಕೆ ಕನಿಷ್ಠ 1 ಸಾವಿರದಂತೆ ತಿಂಗಳಿಗೆ ಮೂವತ್ತು ಸಾವಿರ ಸಂಪಾದಿಸುತ್ತಿದ್ದಾರೆ.

ಅವರು ಮಾಡುವುದಿಷ್ಟೆ: ತಾವು ಖರೀದಿಸಿರುವ ಜೆಸಿಬಿ, ಟ್ರ್ಯಾಕ್ಟರ್ ಬಳಸಿ ತಮ್ಮ ವಾಸಸ್ಥಳದ ಸುತ್ತಮುತ್ತಲಿನ ಕೆರೆಗಳಲ್ಲಿ ರಾಜಾರೋಷವಾಗಿ ಮಣ್ಣು, ಮರಳನ್ನು ತೆಗೆಯುವುದು, ಫಿಲ್ಟರ್ ಮಾಡಿ ಮಾರುವುದು. ಕೆರೆಗಳು ಈ ರೀತಿಯಲ್ಲಿ ಯುವಕರಿಗೆ ದೊಡ್ಡ ಆದಾಯದ ಮೂಲಗಳಾಗಿ ಪರಿವರ್ತನೆಯಾಗಿವೆ.

ಸಾಮಗ್ರಿ ನಾಶ: ತಾಲ್ಲೂಕಿಗೆ ವಾಪಸ್ ಆಗಿರುವ ಯುವಪಡೆಯು ಈ ರೀತಿ ನಿರಂತರವಾಗಿ ಮರಳು ತೆಗೆಯುತ್ತಿದ್ದರೆ, ಇಲ್ಲಿನ ತಾಲ್ಲೂಕು ಆಡಳಿತವು ಆಗಾಗ್ಗೆ ಮರಳು ಫಿಲ್ಟರ್ ಮಾಡುವ ಅಡ್ಡೆಗಳ ಮೇಲೆ ದಾಳಿ ಮಾಡಿ ಸಾಮಗ್ರಿಗಳಿಗೆ ಬೆಂಕಿ ಇಡುವ ಕೆಲಸ ಮಾಡುತ್ತಿವೆ. ಆದರೆ ಅದು ಮರಳು ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ ಎಂಬುದನ್ನು ತಹಶೀಲ್ದಾರರೇ ಒಪ್ಪಿಕೊಳ್ಳುತ್ತಾರೆ.

ಒಂದೆರಡು ಸಾವಿರ ರೂಪಾಯಿ ಮೌಲ್ಯದ ಸಾಮಗ್ರಿಯನ್ನು ತಾಲ್ಲೂಕು ಆಡಳಿತ ಸುಟ್ಟ ಕೆಲವೇ ಗಂಟೆಗಳಲ್ಲಿ ಜನ ಹೊಸ ಸಾಮಗ್ರಿಯನ್ನು ಉತ್ಸಾಹದಿಂದ ತಂದು ಮರಳು ಗಣಿಗಾರಿಕೆಯನ್ನು ಮತ್ತೆ ಶುರು ಮಾಡುತ್ತಿದ್ದಾರೆ. ರೈತರು ಹಿಡಿದುಕೊಟ್ಟ, ಪೊಲೀಸರು ವಶಪಡಿಸಿಕೊಂಡ ಮರಳು ಸಾಗಣೆ ಲಾರಿಗಳ ಮಾಲಿಕರಿಗೆ ತಲಾ 25 ಸಾವಿರ ರೂಪಾಯಿ ದಂಡ ವಿಧಿಸುವ ಕೆಲಸವೂ ಅಕ್ರಮವನ್ನು ತಡೆಗಟ್ಟುವಲ್ಲಿ ನಿರೀಕ್ಷಿತ ಪರಿಣಾಮ ಬೀರಿಲ್ಲ.

ನ್ಯಾಯಾಲಯದ ಮೆಟ್ಟಿಲು: ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಬೇಕು ಎಂದು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮುಷ್ಟೂರು ಗ್ರಾಮ ಪಂಚಾಯತಿಯು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಹೈಕೋರ್ಟ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಕೆ ಹೂಡಿತ್ತು. ಆ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಹೈಕೋರ್ಟ್ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ 20 ಮಂದಿಗೆ ನೋಟಿಸ್ ನೀಡಿತ್ತು.

ಆ ಹಿನ್ನೆಲೆಯಲ್ಲಿ ಚುರುಕಾಗದ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿಗೆ ಸಮಯಾವಕಾಶವೇ ಇಲ್ಲ ಎಂಬುದು ಸದ್ಯದ ವಿಪರ್ಯಾಸ.

ಇಂಥ ಸನ್ನಿವೇಶದಲ್ಲಿ ಮುಳಬಾಗಲಿಂದ ಬೆಂಗಳೂರಿಗೆ ನಿರಂತರವಾಗಿ ಮರಳು ಸಾಗಣೆ ನಡೆಯುತ್ತಲೇ ಇದೆ. ತಾಲ್ಲೂಕಿನ ಕೆರೆಗಳಲ್ಲಿ ಈಗ ಮರಳು ಖಾಲಿಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಹೇಳುತ್ತಾರೆ. ಆದರೆ, ಸಾಕಷ್ಟು ಮರಳು ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿಗಳು ಹೇಳುತ್ತಾರೆ. ಅಧಿಕಾರಿಗಳ ಇಂಥ ವೈರುಧ್ಯದ ಹೇಳಿಕೆಗಳ ನಡುವೆ ಬರಿದಾಗುತ್ತಿರುವ ಕೆರೆಗಳ ಒಡಲಾಳದ ನೋವನ್ನು ಅರ್ಥ ಮಾಡಿಕೊಳ್ಳುವವರು ಯಾರು ಎಂಬುದು ಸದ್ಯದ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.