ADVERTISEMENT

ಯುವತಿ ಆತ್ಮಹತ್ಯೆ ಗ್ರಾಮಕ್ಕೆ ಡಿಎಸ್‌ಪಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2012, 19:42 IST
Last Updated 28 ನವೆಂಬರ್ 2012, 19:42 IST

ಕೊಪ್ಪಳ: ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಚನೆಯಾಗಿರುವ ಡಿಎಸ್‌ಪಿ ನೇತೃತ್ವದ ತಂಡ ಬುಧವಾರ ತಾಲ್ಲೂಕಿನ ಹ್ಯಾಟಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಡಿಎಸ್‌ಪಿ ಸುರೇಶ ಮಸೂತಿ ನೇತೃತ್ವದ ತಂಡವು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ ಹನುಮವ್ವ ಡೋಲಿಯ ಚಿಕ್ಕಪ್ಪ ಹಾಗೂ ಕೆಲ ಗ್ರಾಮಸ್ಥರನ್ನು ಮಾತನಾಡಿಸಿ, ಘಟನೆ ಕುರಿತಂತೆ ಮಾಹಿತಿ ಸಂಗ್ರಹಿಸಿತು.
ಯುವತಿ ಹೊಟ್ಟೆನೋವನ್ನು ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಷ್ಟೇ ಹೇಳಿದ ಗ್ರಾಮಸ್ಥರು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

ಹೊಲಕ್ಕೆ ಹೋಗು ಎಂದಿದ್ದಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿಯೂ ಕೆಲ ಗ್ರಾಮಸ್ಥರು ತಂಡಕ್ಕೆ ಮಾಹಿತಿ ನೀಡಿದ್ದಾಗಿ ತಿಳಿದುಬಂದಿದೆ.

ADVERTISEMENT

ಹನುಮವ್ವ ಬಾಲಕಿ ಎಂದು ಹೇಳಲಾಗುತ್ತಿದೆ. ಆದರೆ, ಗಾಮೀಣ ಠಾಣೆಗೆ ನೀಡಿರುವ ದೂರಿನಲ್ಲಿ 19 ವರ್ಷ ಎಂಬುದಾಗಿ ಮಾಹಿತಿ ನೀಡಿರುವುದು ಸಹ ಸಂಶಯಕ್ಕೆ ಕಾರಣವಾಗಿದೆ.

`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಹನುಮವ್ವ ಡೋಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ಗದಗಿನಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಲು ಕನಿಷ್ಠ 2 ತಿಂಗಳು ಬೇಕು ಎಂದು ಹೇಳಿದರು. `ಹನುಮವ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿ ದೂರು ಸಲ್ಲಿಸಲಾಗಿದೆ.

ಆದರೆ, ಅತ್ಯಾಚಾರ ನಡೆದು, ಅದರ ದೃಶ್ಯಾವಳಿಗಳು ಮೊಬೈಲ್‌ನಲ್ಲಿ ಹರಿದಾಡಿದ್ದರಿಂದ ಮನನೊಂದು ಹನುಮವ್ವ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಬಗ್ಗೆ ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.