ADVERTISEMENT

ಯೋಗದಿಂದ ಮೋಡಿ ಮಾಡಿದ ಬಾಬಾ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 19:30 IST
Last Updated 14 ಏಪ್ರಿಲ್ 2011, 19:30 IST
ಯೋಗದಿಂದ ಮೋಡಿ ಮಾಡಿದ ಬಾಬಾ
ಯೋಗದಿಂದ ಮೋಡಿ ಮಾಡಿದ ಬಾಬಾ   

ಮೈಸೂರು: ಮೂಡಣ ದಿಕ್ಕಿನಲ್ಲಿ ನೇಸರ ಇನ್ನೂ ನಿದ್ರಾವಸ್ಥೆಯಲ್ಲಿದ್ದ. ಆಗಲೇ ನಗರದ ರಸ್ತೆಗಳಲ್ಲಿ ವಿದ್ಯುತ್ ಪ್ರವಾಹದಂತೆ ಸಂಚರಿಸುತ್ತಿದ್ದ ಜನತೆ... ಸೂರ್ಯನ ಕಿರಣಗಳು ಭುವಿಗೆ ಮುತ್ತಿಕ್ಕುವ ಹೊತ್ತಿಗೆ ಜನರು ಬದುಕಿನ ‘ಸಾರ್ಥಕ ಕ್ಷಣ’ವನ್ನು ತಮ್ಮದಾಗಿಸಿಕೊಂಡ ಭಾವದಲ್ಲಿ ಮನೆಯತ್ತ ಹೆಜ್ಜೆ ಹಾಕಿದ್ದರು.. -ಇವು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಬೆಳಗಿನ ಜಾವ ಕಂಡು ಬಂದ ದೃಶ್ಯ.

ಪತಂಜಲಿ ಯೋಗ ಸಮಿತಿ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಉಚಿತ ಯೋಗ ಶಿಬಿರದಲ್ಲಿ ಯೋಗ ಗುರು ಬಾಬಾ ರಾಮ್‌ದೇವ್ ಯೋಗಾಸನ ಮತ್ತು ಪ್ರಾಣಾಯಾಮ ಹೇಳಿಕೊಟ್ಟರು. ಬೆಳಗಿನ ಪ್ರಶಾಂತ ವಾತಾವರಣದಲ್ಲಿ ಕಾಲೇಜು ಮೈದಾನದತ್ತ ಜನ ಸಾಗರವೇ ಹರಿದು ಬರುತ್ತಿತ್ತು. ಬಾಬಾ ರಾಮ್‌ದೇವ್ ಮಂದಸ್ಮಿತರಾಗಿ, ಪಾದರಸದಂತೆ ವೇದಿಕೆಯ ಮೇಲೆ ಒಂದೊಂದೇ ಆಸನಗಳನ್ನು ಹೇಳಿಕೊಡುತ್ತಿದ್ದರೆ ನೆರೆದ ಭಕ್ತರಲ್ಲಿ ಅಕ್ಷರಶಃ ವಿದ್ಯುತ್ ಸಂಚರಾದ ಅನುಭವ. ನಗು ನಗುತ್ತ, ಹಾಸ್ಯ ಚಟಾಕಿಗಳನ್ನು ಹಾರಿಸುತ್ತ, ಆಸನಗಳ ಮಧ್ಯೆ ತಮ್ಮದೇ ಆದ ಧಾಟಿಯಲ್ಲಿ ‘ಭಾರತ್ ಸ್ವಾಭಿಮಾನ’ದ ಪರಿಕಲ್ಪನೆಯನ್ನು ಜನರಿಗೆ ಅರ್ಥೈಸುತ್ತ ಬಾಬಾ ಎರಡೂವರೆ ಗಂಟೆ ಜನರನ್ನು ಮಾಯಾಲೋಕದಲ್ಲಿ ತೇಲುವಂತೆ ಮಾಡಿದರು.

ಪ್ರಾಣಾಯಾಮದ ವಿಧಗಳಾದ ಭಸ್ತ್ರಿಕಾ ಪ್ರಾಣಾಯಾಮ, ಕಪಾಲಭಾತಿ, ಬಾಹ್ಯ, ಅನುಲೋಮ ಮತ್ತು ವಿಲೋಮ, ಭ್ರಾಮರೀ, ಉದ್ಗೀತ, ಉಜ್ಜಾಯಿ, ಪ್ರಣವ ಪ್ರಾಣಾಯಾಮಗಳ ಒಂದೊಂದೇ ಆಸನಗಳನ್ನು ಬಾಬಾ ವಿವರಣೆ ಸಹಿತ ಪ್ರದರ್ಶಿಸುತ್ತಿದ್ದರೆ ನೆರೆದ ಜನರ ಮೈ, ಮನ ಭಕ್ತಿ ಭಾವದಿಂದ ಪುಳಕಗೊಂಡವು. ‘ರಾಜಕಾರಣಿಗಳು, ಅಧಿಕಾರಿಗಳಿಗೆ ಯೋಗಾಭ್ಯಾಸ ಬೇಕಾಗಿಲ್ಲ. ಯಾರು 17 ಗಂಟೆ ನಿರಂತರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆಯೋ ಅಂತಹವರಿಗೆ ಯೋಗ ಅವಶ್ಯಕ’ ಎಂದು ಬಾಬಾ ಹೇಳಿದಾಗ ಕಾಲೇಜು ಮೈದಾನದಲ್ಲಿ ನಗುವಿನ ಅಲೆ. ಡಯಾಬಿಟಿಸ್, ರಕ್ತದೊತ್ತಡ, ಬೆನ್ನುನೋವು ಸೇರಿದಂತೆ ಸಕಲ ರೋಗಗಳನ್ನು ಯೋಗದಿಂದಲೇ ನಿವಾರಿಸಬಹುದು. ಯೋಗದ ಮೂಲಕ ಸ್ವಸ್ಥ ಆರೋಗ್ಯ, ಸಮಾಜ ನಿರ್ಮಿಸಲು ಸಾಧ್ಯ ಎಂದು ಹಸನ್ಮುಖದಿಂದ ಹೇಳುತ್ತಲೇ ಆಸನಗಳನ್ನು ಹೇಳಿಕೊಟ್ಟರು.

ಬದಲಾವಣೆಗೆ ಸಮಯ ಬೇಕು:
‘ದೇಶದಾದ್ಯಂತ ಸಂಚಲನ ಮೂಡಿಸಿರುವ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ದನಿ ಎತ್ತಿದ್ದು, ಅದಕ್ಕೆ ಬಾಬಾ ರಾಮದೇವ್ ಬೆಂಬಲ ಸೂಚಿಸಿದ್ದಾರೆ. ಬದಲಾವಣೆ ಎನ್ನುವುದು ಒಂದೇ ದಿನ, ಒಂದೇ ಕ್ಷಣಕ್ಕೆ ಆಗುವಂತಹದಲ್ಲ. ಅದು ತನ್ನದೇಯಾದಂತಹ ಸಮಯ ತೆಗೆದುಕೊಳ್ಳುತ್ತದೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇಲ್ಲಿ ಹೇಳಿದರು. ‘ಪ್ರಾಚೀನ ಪರಂಪರೆ, ಸಂಸ್ಕೃತಿಯ ಮೂಲವಾದ ಯೋಗವನ್ನು ಜಗತ್ತಿನಾದ್ಯಂತ ಮನೆ ಮನೆಗೆ ತಲುಪಿಸುವ ಮೂಲಕ ರಾಮ್‌ದೇವ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ.

ಯೋಗ, ಆಯುರ್ವೇದದ ಮೂಲಕ ಸ್ವಸ್ಥ ಆರೋಗ್ಯ, ಸ್ವಸ್ಥ ಸಮಾಜ ನಿಮಿಸಲು ಮುಂದಾಗಿರುವುದು ಶ್ಲಾಘನೀಯ’ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ಮೇಯರ್ ಸಂದೇಶ್‌ಸ್ವಾಮಿ, ಪಾಲಿಕೆ ಸದಸ್ಯರಾದ ಮ.ವಿ.ರಾಮಪ್ರಸಾದ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ರಾಜೀವ್, ಮುಡಾ ಅಧ್ಯಕ್ಷ ನಾಗೇಂದ್ರ ಸೇರಿದಂತೆ ಹಲವಾರು ಗಣ್ಯರು, ವಿವಿಧ ಇಲಾಖೆ ಅಧಿಕಾರಿಗಳು ಯೋಗಾಸನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.