ADVERTISEMENT

ಯೋಗೀಶ್ವರ್ ವಿರುದ್ಧ ಕ್ರಮಕ್ಕೆ ಮೀನಮೇಷ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:50 IST
Last Updated 12 ಸೆಪ್ಟೆಂಬರ್ 2011, 19:50 IST

ಬೆಂಗಳೂರು: ಬಹುಕೋಟಿ ರೂಪಾಯಿ ಮೊತ್ತದ ಮೆಗಾಸಿಟಿ ಯೋಜನೆಯಲ್ಲಿ ಕಾರ್ಪೊರೇಟ್ ವಂಚನೆ, ಮೋಸ, ಸಹಿ ನಕಲು, ಕ್ರಿಮಿನಲ್ ಸಂಚಿನ ಆರೋಪ ಎದುರಿಸುತ್ತಿರುವ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್  ವಿರುದ್ಧ ಕ್ರಮ ಜರುಗಿಸುವ ವಿಷಯದಲ್ಲಿ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಇಲಾಖೆ ಮೀನಮೇಷ ಎಣಿಸುತ್ತಿದೆ.

ಮೆಗಾಸಿಟಿ (ಬೆಂಗಳೂರು) ಡೆವಲಪರ್ಸ್ ಮತ್ತು ಬಿಲ್ಡರ್ಸ್ ಲಿಮಿಟೆಡ್‌ನ ನಿವೇಶನ ಸದಸ್ಯರ ಕಲ್ಯಾಣ ಸಂಘದ ಅಧ್ಯಕ್ಷ ರವೀಂದ್ರ ಬೆಳೆಯೂರು ಅವರು 2006ರಲ್ಲಿ ಸಲ್ಲಿಸಿದ ದೂರಿನ ಅನ್ವಯ ಕಾರ್ಪೊರೆಟ್ ವ್ಯವಹಾರಗಳ ಇಲಾಖೆ 2009ರ ಏಪ್ರಿಲ್‌ನಲ್ಲಿ `ಗಂಭೀರ ವಂಚನೆಗಳ ತನಿಖಾ ಕಚೇರಿ~ಗೆ (ಎಸ್‌ಎಫ್‌ಐಒ) ತನಿಖೆ ನಡೆಸಲು ಆದೇಶಿಸಿತು.

ಕಂಪೆನಿ ಕಾಯ್ದೆ ಅಥವಾ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಯೋಗೀಶ್ವರ್ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಎಸ್‌ಎಫ್‌ಐಒ ಶಿಫಾರಸು ಮಾಡಿದ್ದರೂ ಕಾರ್ಪೊರೆಟ್ ವ್ಯವಹಾರಗಳ ಇಲಾಖೆ ಯೋಗೀಶ್ವರ್ ಅವರ ಮೇಲೆ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಯೋಗೀಶ್ವರ್ ಅವರ ವಿರುದ್ಧ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಕ್ರಮ ಜರುಗಿಸಬೇಕೋ ಅಥವಾ ರಾಜ್ಯದ ತನಿಖಾ ಸಂಸ್ಥೆಗಳು ಕ್ರಮಕ್ಕೆ ಮುಂದಾಗಬೇಕೋ ಎಂಬ ಕುರಿತು ಕಾನೂನು ಸಲಹೆ ಪಡೆಯಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಈ ಕುರಿತ ಗೊಂದಲ ಪರಿಹಾರ ಆಗುವವರೆಗೂ ಯೋಗೀಶ್ವರ್ ಅವರ ಮೇಲೆ ಯಾವುದೇ ಕ್ರಮ ಇಲ್ಲ ಎಂದು ಮೂಲಗಳು ಖಚಿತಪಡಿಸಿವೆ.
ಎಸ್‌ಎಫ್‌ಐಒ ಜುಲೈ 30ರಂದು ಎರಡು ಸಾವಿರ ಪುಟಗಳ ತನಿಖಾ ವರದಿಯನ್ನು ಇಲಾಖೆಗೆ ಸಲ್ಲಿಸಿತು.

ಇದರ ಪ್ರತಿಯೊಂದನ್ನು ಯೋಗೀಶ್ವರ್ ಮತ್ತು ಸಿಐಡಿಗೆ ಆಗಸ್ಟ್ ಕೊನೆ ವಾರದಲ್ಲಿ ಸಲ್ಲಿಸಿತು.
ಸುಮಾರು 9,300 ಮಂದಿ ಹೂಡಿಕೆದಾರರನ್ನು ಮೋಸಗೊಳಿಸಿರುವ ಆರೋಪ ಎದುರಿಸುತ್ತಿರುವ ಯೋಗೀಶ್ವರ್ ಎಸ್‌ಎಫ್‌ಐಒಗೂ ದಾಖಲೆಗಳನ್ನು ಒದಗಿಸಿಲ್ಲ ಎನ್ನಲಾಗಿದೆ. ಯೋಗೀಶ್ವರ್ ಅವರ ವಕೀಲರು ಸಲ್ಲಿಸಿದ ದಾಖಲೆಗಳನ್ನು ಇಲಾಖೆ ಪರಿಶೀಲಿಸುತ್ತಿದೆ ಎಂದು ತಿಳಿದು ಬಂದಿದೆ.

ಎಸ್‌ಎಫ್‌ಐಒ ವರದಿ ಪರಿಶೀಲನೆ: 2006ರ ನವೆಂಬರ್‌ನಲ್ಲಿ ಈ ಪ್ರಕರಣದ ತನಿಖೆ ಆರಂಭಿಸಿದ ಸಿಐಡಿ 2010ರ ಮಾರ್ಚ್‌ನಲ್ಲಿ ಆರೋಪ ಪಟ್ಟಿ ಸಲ್ಲಿಸಿತು. ಈ ಪ್ರಕರಣದ ವಿಚಾರಣೆ ಬಾಕಿ ಇದೆ. `ಎಸ್‌ಎಫ್‌ಐಒ ಸಲ್ಲಿಸಿದ ವರದಿಯನ್ನೂ ನಾವು ಪರಿಗಣಿಸುತ್ತೇವೆ~ ಎಂದು ಸಿಐಡಿಯ ಡಿಜಿಪಿ ಎಸ್. ಮುರುಗನ್ ತಿಳಿಸಿದರು.

ಯೋಗೀಶ್ವರ್‌ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ನಿವೇಶನ ಸದಸ್ಯರ ಕಲ್ಯಾಣ ಸಂಘವು ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಆ. 30ರಂದು ಮನವಿ ಸಲ್ಲಿಸಿದೆ.

ಯೋಗೀಶ್ವರ್ ಪ್ರತಿಕ್ರಿಯೆ: ಪ್ರಕರಣದ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಯೋಗೀಶ್ವರ್, `ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನನ್ನನ್ನು ರಾಜಕೀಯವಾಗಿ ಗುರಿ ಮಾಡಿಕೊಂಡಿದ್ದಾರೆ~ ಎಂದರು. `ನನ್ನ ವಿರುದ್ಧ ಮಾಡಲಾಗುತ್ತಿರುವ ಈ ಆರೋಪಕ್ಕೆ ಕುಮಾರಸ್ವಾಮಿ ಕುಮ್ಮಕ್ಕು ನೀಡುತ್ತಿದ್ದಾರೆ. ಅವರು ಮ್ಯುಮಂತ್ರಿಯಾಗಿದ್ದಾಗಲೂ ನನ್ನನ್ನು ಗುರಿಯಾಗಿಸಿಕೊಂಡಿದ್ದರು.

ನನ್ನ ಜನಪ್ರಿಯತೆ ಸಹಿಸಲು ಸಾಧ್ಯವಾಗದೆ ನನ್ನ ತೇಜೋವಧೆಗೆ ಯತ್ನಿಸುತ್ತಿದ್ದಾರೆ~ ಎಂದರು.ತಾವು ಯಾವುದೇ ಸಹಿಯನ್ನು ನಕಲು ಮಾಡಿಲ್ಲ ಎಂದ ಅವರು `ನನ್ನ ಪಾಸ್‌ಪೋರ್ಟ್  ನವೀಕರಿಸುವಾಗ ನನ್ನ ಹೆಸರು ಬೇರೆ ರೀತಿಯಲ್ಲಿ ನಮೂದಾಯಿತು. ಅದನ್ನು ಸರಿಪಡಿಸಲು ಇನ್ನೂ ಸಾಧ್ಯವಾಗಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.