ADVERTISEMENT

ಯೋಗ ಪ್ರವಾಸೋದ್ಯಮಕ್ಕೆ ‘ಯೋಗ’?

ಗಣೇಶ ಅಮಿನಗಡ
Published 21 ಜೂನ್ 2015, 19:30 IST
Last Updated 21 ಜೂನ್ 2015, 19:30 IST
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮೈಸೂರಿನ ಅರಮನೆಯ ಆವರಣದಲ್ಲಿ ಯೋಗಾಭ್ಯಾಸದಲ್ಲಿ ನಿರತರಾದ ಸಾರ್ವಜನಿಕರು    -ಪ್ರಜಾವಾಣಿ ಚಿತ್ರ/ಎಚ್‌.ಜಿ. ಪ್ರಶಾಂತ್‌
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮೈಸೂರಿನ ಅರಮನೆಯ ಆವರಣದಲ್ಲಿ ಯೋಗಾಭ್ಯಾಸದಲ್ಲಿ ನಿರತರಾದ ಸಾರ್ವಜನಿಕರು -ಪ್ರಜಾವಾಣಿ ಚಿತ್ರ/ಎಚ್‌.ಜಿ. ಪ್ರಶಾಂತ್‌   

ಮೈಸೂರು: ಯೋಗದ ರಾಜಧಾನಿ ಎಂದೂ ಖ್ಯಾತವಾಗಿರುವ ಮೈಸೂರಿಗೆ ಇನ್ನು ಮುಂದಾದರೂ ಯೋಗ       ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವುದೆ...?

ವಿಶ್ವ ಯೋಗ ದಿನಾಚರಣೆ ಇಂತಹ ಚಿಂತನೆಗೆ ಆಸ್ಪದ ಮಾಡಿಕೊಟ್ಟಿದೆ.

ಪ್ರತಿ ವರ್ಷ ಮೈಸೂರಿಗೆ 7ರಿಂದ 9 ಸಾವಿರ ವಿದೇಶಿಗರು ಯೋಗ ಕಲಿಯುವ ಸಲುವಾಗಿಯೇ ಬರುತ್ತಾರೆ. ಚೀನಾ, ಅಮೆರಿಕ, ಕೆನಡಾ, ನ್ಯೂಜಿಲೆಂಡ್‌, ಜಪಾನ್‌, ಇಸ್ರೇಲ್‌, ಕತಾರ್‌ ಮೊದಲಾದ ದೇಶಗಳಿಂದ ಬರುತ್ತಿದ್ದಾರೆ. ಇವರಲ್ಲಿ ಎರಡು ವರ್ಗ. ಯೋಗ ಶಿಕ್ಷಕರಾಗಿ ಯೋಗ ಕಲಿಯಲು ಬರುವವರದು ಒಂದು ವರ್ಗವಾದರೆ, ಆರೋಗ್ಯ ಸಲುವಾಗಿ ಯೋಗ ಕಲಿಯಲು ಬರುವವರದು ಇನ್ನೊಂದು ವರ್ಗ.

ಯೋಗ ಶಿಕ್ಷಕರಾಗಲು 3ರಿಂದ 6 ತಿಂಗಳವರೆಗೆ ತರಬೇತಿ ಪಡೆಯಲು ಇಲ್ಲಿ ಇರುತ್ತಾರೆ. ಯೋಗ ಕಲಿಯುವುದಾದರೆ ಒಂದು ವಾರದಿಂದ ತಿಂಗಳವರೆಗೆ ಇರುತ್ತಾರೆ.  ಲಕ್ಷ್ಮೀಪುರಂ, ಚಾಮರಾಜಪುರಂ, ಕುವೆಂಪುನಗರ, ಗೋಕುಲಂನಲ್ಲಿ ಹೋಂಸ್ಟೇಗಳಲ್ಲಿ ಉಳಿದುಕೊಳ್ಳು
ತ್ತಾರೆ. ಪ್ರತಿ ವಿದೇಶಿಗ  ₨ 60 ಸಾವಿರ ವೆಚ್ಚ ಮಾಡುತ್ತಾರೆ. ಕೇವಲ ಯೋಗ ಕಲಿಯುವುದಾದರೆ ಅವರಿಗೆ ₨ 15ರಿಂದ 30 ಸಾವಿರ ವೆಚ್ಚವಾಗುತ್ತದೆ. ಯೋಗಾಸನ, ಪ್ರಾಣಾಯಾಮದ ಜತೆಗೆ, ಶರೀರ ರಚನಾಶಾಸ್ತ್ರ, ತತ್ವಶಾಸ್ತ್ರ, ಮನಶಾಸ್ತ್ರ, ಅಧ್ಯಾತ್ಮ, ಸಂಸ್ಕೃತ ಹಾಗೂ ಸಂಗೀತ ಕಲಿಯುವುದರಿಂದಲೂ ಸ್ಥಳೀಯರಿಗೆ ಆದಾಯ ಲಭಿಸುತ್ತಿದೆ.

ಇತಿಹಾಸ: ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು 180 ವರ್ಷಗಳ ಹಿಂದೆ ‘ಶ್ರೀ ತತ್ವನಿಧಿ’ ಕೃತಿ ರಚಿಸಿದ್ದಾರೆ. ಇದರಲ್ಲಿ 122 ಯೋಗಾಸನದ ಚಿತ್ರಗಳಿವೆ. ಇದರೊಂದಿಗೆ, 100 ವರ್ಷಗಳ ಹಿಂದೆಯೇ  ಭಾರತದ  ಪ್ರಸಿದ್ಧ ಯೋಗ ಕೇಂದ್ರಗಳಲ್ಲಿ ಮೈಸೂರು ಕೂಡಾ ಒಂದಾಗಿತ್ತು. ಲಾಹೋರಿನ ಸ್ವಾಮಿ ಶಿವಾನಂದ, ಋಷಿಕೇಶದ ಡಾ.ಸ್ವಾಮಿ ಶಿವಾನಂದ, ಬಿಹಾರ ಮುಂಗೇರ್‌ನ ಸತ್ಯಾತ್ಮನಂದ ಸರಸ್ವತಿ, ಪುಣೆಯ ಕೈವಲ್ಯಧಾಮದ ಡಾ. ಕೋಲಯಾನಂದ ಹಾಗೂ ಐದನೆಯದು ಮೈಸೂರಿನ ಕೃಷ್ಣಮಾಚಾರ್ಯ ಅವರಿಂದ ಯೋಗ ಪ್ರಸಿದ್ಧಿ ಪಡೆಯಿತು. 

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಕೃಷ್ಣಮಾಚಾರ್ಯ ಅವರನ್ನು ಆಹ್ವಾನಿಸಿ, ಸಂಸ್ಕೃತ ಪಾಠಶಾಲೆಯಲ್ಲಿ ಯೋಗ ವಿಭಾಗವನ್ನು ಆರಂಭಿಸಿದರು. ಯೋಗಕ್ಕೆ ಪ್ರಾಧಾನ್ಯ  ನೀಡಿದರು. ಜಗನ್ಮೋಹನ ಅರಮನೆಯ ಹಿಂದೆ ಆಶ್ರಯ ಕೊಟ್ಟು ರಾಜ ಮನೆತನದವರಿಗೆ ಹಾಗೂ ಸಾರ್ವಜನಿಕರಿಗೆ ಯೋಗ ಕಲಿಸಲು ಅವಕಾಶ ಮಾಡಿಕೊಟ್ಟರು. ಅವರಲ್ಲಿ ಕಲಿತವರು ಬಿಕೆಎಸ್‌ ಅಯ್ಯಂಗಾರ್, ಪಟ್ಟಾಭಿ ಜೋಯಿಸ್‌, ದೇಶಿಕಾಚಾರ್‌, ಶ್ರೀದೇವಿ ಪ್ರಮುಖರು. ಇವರೆಲ್ಲ ಯೋಗ ಪರಂಪರೆಯನ್ನು ಬೆಳೆಸಿದರು. ಸದ್ಯ ಯೋಗ ಹಿರಿಯರೆಂ
ದರೆ ನಾಗರಾಜ ಸೂರ್ಯನಾರಾಯಣ ಪಾಂಡೆ, ಬಿಎನ್‌ಎಸ್‌ ಅಯ್ಯಂಗಾರ್‌, ಕೇಶವಮೂರ್ತಿ, ಶಂಕರನಾರಾಯಣ ಜೋಯಿಸ್. ಇವರೆಲ್ಲ 70 ದಾಟಿದವರು.

ಸದ್ಯ 250–300ಕ್ಕೂ ಅಧಿಕ ಯೋಗ ಕೇಂದ್ರಗಳು ಮೈಸೂರಿನಲ್ಲಿವೆ. ಯೋಗ ಕುರಿತು ಪಿಎಚ್‌.ಡಿ ಮಾಡಿದವರಲ್ಲಿ ಡಾ.ರಾಘವೇಂದ್ರ ಪೈ ಹಾಗೂ ಡಾ. ಗಣೇಶಕುಮಾರ್‌ ಪ್ರಮುಖರು. ‘ಮೈಸೂರಿನಲ್ಲಿರುವ ಯಾವುದೇ ವಿ.ವಿಯಲ್ಲೂ ಯೋಗದ ಕುರಿತು ಕೋರ್ಸ್ ಇಲ್ಲ. ಮುಖ್ಯವಾಗಿ ಯೋಗವನ್ನು ಅಂಚೆ ಮೂಲಕ ಕಲಿಯಲಾಗದು. ಇದಕ್ಕಾಗಿ ಯೋಗದ ಕುರಿತೇ ಕೋರ್ಸ್‌ ಆರಂಭವಾಗಬೇಕು’ ಎಂದು ಒತ್ತಾಯಿಸುತ್ತಾರೆ ಯೋಗ ಗುರು ಡಾ.ರಾಘವೇಂದ್ರ ಪೈ.
******************
ಅಂತರರಾಷ್ಟ್ರೀಯ ಯೋಗ ಸಮ್ಮೇಳನವನ್ನು ಸೆ. 11ರಿಂದ 13ರವರೆಗೆ ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್‌ ಭವನದಲ್ಲಿ ಆಯೋಜಿಸುತ್ತಿದ್ದೇವೆ
-ಡಾ.ಕೆ.ಎಸ್‌. ನಾಗಪತಿ, ಕಾರ್ಯದರ್ಶಿ, ಯೋಗಿಕ್‌ ಸೈನ್ಸ್‌ ಟ್ರಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.