ಮದ್ದೂರು:- ಕಾಂಗ್ರೆಸ್ ಸಾಧನಾ ಪಾದಯಾತ್ರೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ. ಮಾದೇಗೌಡ ಅವರನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಸಂಸದೆ ರಮ್ಯಾ ವಿರುದ್ಧ ಮದ್ದೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ತೀವ್ರ ತಳ್ಳಾಟ, ಮಾತಿನ ಚಕಮಕಿ ನಡೆದು, ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು.
ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ಕೆಪಿಸಿಸಿ ಸದಸ್ಯ ಗುರುಚರಣ್ ಅವರೊಂದಿಗೆ ಪಟ್ಟಣದ ಉಗ್ರನರಸಿಂಹಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ಕೋಟೆ ಬೀದಿಯ ಒಂದೆರಡು ಮನೆಗಳಿಗೆ ಭೇಟಿ ನೀಡಿದರು.
ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯ ಭರತೇಶ್, ಕಾರ್ಯಕರ್ತರಾದ ಎಂ.ಆರ್. ಅವಿನಾಶ್, ಕಾಡರವಿ, ವಳಗೆರೆಹಳ್ಳಿ ಅವಿನಂದನ್, ಮಾಚಹಳ್ಳಿ ಕುಮಾರ್, ಸಿದ್ದು, ಆನಂದ್, ನಗರಕೆರೆ ಪುರುಷೋತ್ತಮ್, ಧನು, ಅಶೋಕ್, ಉಮೇಶ್ ಅವರು ರಮ್ಯಾ ಅವರನ್ನು ಸುತ್ತುವರಿದರು.
‘ನಮ್ಮ ನಾಯಕ ಮಧು ಜಿ. ಮಾದೇಗೌಡ ಅವರನ್ನು ಪಾದಯಾತ್ರೆಗೆ ಆಹ್ವಾನಿಸಿಲ್ಲ. ಅವರನ್ನು ಕಡೆಗಣಿಸಿದ್ದೀರಿ. ಇಲ್ಲಿಗೇ ಪಾದಯಾತ್ರೆ ನಿಲ್ಲಿಸಿ ಮನೆಗೆ ತೆರಳಿ’ ಎಂದು ಕೂಗಾಡಿದರು.
ಈ ಸಂದರ್ಭದಲ್ಲಿ ಗುರುಚರಣ್ ಬೆಂಬಲಿಗರು ಹಾಗೂ ಮಧು ಬೆಂಬಲಿಗರ ನಡುವೆ ತಳ್ಳಾಟ ನೂಕಾಟ ನಡೆಯಿತು.
ರಮ್ಯಾ ವಿರುದ್ಧ ಮಧು ಬೆಂಬಲಿಗರು ಧಿಕ್ಕಾರ ಮೊಳಗಿಸಿದರೆ, ಗುರುಚರಣ್ ಬೆಂಬಲಿಗರು ರಮ್ಯಾ ಪರವಾಗಿ ಜೈಕಾರ ಹಾಕಿದರು.
ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿ ರಮ್ಯಾ ಅವರು ಉದ್ರಿಕ್ತ ಗುಂಪಿನಿಂದ ಹೊರಬಂದು ತಮ್ಮ ಕಾರಿನಲ್ಲಿ ಕುಳಿತರು.
ಇತ್ತ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ, ತಳ್ಳಾಟ ಹೆಚ್ಚಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪಿಎಸ್ಐ ಶ್ರೀಧರ್, ಕಾರ್ಯಕರ್ತರನ್ನು ಸಮಾಧಾನಪಡಿಸಲು ಗಂಟೆಗೂ ಹೆಚ್ಚು ಕಾಲ ಯತ್ನಿಸಿದರು.
ಆದರೆ, ಮಧು ಬೆಂಬಲಿಗರು ಇದಕ್ಕೆ ಜಗ್ಗದೇ ರಸ್ತೆಯಲ್ಲಿ ಕುಳಿತು ಪಾದಯಾತ್ರೆ ಮುಂದೆ ಹೋಗದಂತೆ ಅಡ್ಡಿಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.