ADVERTISEMENT

ರಸ್ತೆ ಕಾಮಗಾರಿ ವಿಳಂಬ; ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 18:40 IST
Last Updated 19 ಜೂನ್ 2012, 18:40 IST

ಬೆಂಗಳೂರು: `ರಸ್ತೆ ಕಾಮಗಾರಿಗಳ ವಿಳಂಬ, ಕುಡಿಯುವ ನೀರಿನ ಸಮಸ್ಯೆ, ಫುಟ್‌ಪಾತ್‌ಗಳ ಒತ್ತುವರಿ, ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯಲ್ಲಿ ನಾಗರಿಕರು ಆಗ್ರಹಿಸಿದರು.

`ನಮ್ಮ ಮಲ್ಲೇಶ್ವರ~ ಮತ್ತು ಬಿಬಿಎಂಪಿ ಆಶ್ರಯದಲ್ಲಿ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಮೇಯರ್ ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ ನಡೆಯಿತು.

`ಸಿ.ಎನ್.ಆರ್. ರಾವ್ ರಸ್ತೆ ಕಾಮಗಾರಿ ಮೂರು ವರ್ಷದಿಂದ ವಿಳಂಬವಾಗುತ್ತಿದೆ. ಇದರಿಂದಾಗಿ ವಾಹನಗಳು ಮಲ್ಲೇಶ್ವರದ ಗಲ್ಲಿ ಗಲ್ಲಿಗಳಲ್ಲಿ ಸಂಚಾರ ಮಾಡಿ ಮಾಲಿನ್ಯ ಉಂಟು ಮಾಡುತ್ತಿವೆ~ ಎಂದು ಮಲ್ಲೇಶ್ವರದ ಬಿ.ಆರ್. ಗೋಪಾಲ ರಾವ್ ದೂರಿದರು. `ಸ್ಯಾಂಕಿ ಕೆರೆ ಬಳಿ ಕಟ್ಟಡವನ್ನು ಎತ್ತರ ಮಾಡಿದ್ದರಿಂದ ವಾಕಿಂಗ್‌ಗೆ ಹೋಗುವವರಿಗೆ ತೊಂದರೆಯಾಗಿದೆ. ಇಲ್ಲೊಂದು ಸೇತುವೆ ನಿರ್ಮಿಸಿಕೊಡಬೇಕು~ ಎಂದು ಸ್ಯಾಂಕಿ ಪಾರ್ಕ್ ನಡಿಗೆದಾರರ ಸಂಘದ ಡಾ. ಆನಂದ್ ಆಗ್ರಹಿಸಿದರು.

`ವಸತಿ ಪ್ರದೇಶದಲ್ಲಿ ಕೈಗಾರಿಕೆ ನಡೆಸುವಂತಿಲ್ಲ ಎಂಬ ಕಾರಣ ನೀಡಿ ಗಾಯತ್ರಿನಗರದಲ್ಲಿ 45 ವರ್ಷಗಳಿಂದ ಇರುವ ಕೈಮಗ್ಗಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಇದರಿಂದಾಗಿ ನೇಕಾರರು ಬೀದಿಪಾಲು ಆಗಿದ್ದಾರೆ~ ಎಂದು ನೇಕಾರ ಶಂಕರ್ ಅಳಲು ತೋಡಿಕೊಂಡರು. `ಹಲವು ಸಮಯದಿಂದ ಈ ಸಮಸ್ಯೆ ಇದ್ದು, ಜನಪ್ರತಿನಿಧಿಗಳು ಕೂಡಲೇ ಉತ್ತರ ನೀಡಬೇಕು~ ಎಂದು ಸುಮಾರು 10ಕ್ಕೂ ಅಧಿಕ ನೇಕಾರರು ಪಟ್ಟು ಹಿಡಿದರು. `ಇಂತಹ ನಡವಳಿಕೆ ಸರಿಯಲ್ಲ. ಕಾರ್ಯಕ್ರಮ ವ್ಯವಸ್ಥಿತವಾಗಿ ಆಗಬೇಕು. ಕೂಗಾಡಿದರೆ ಪ್ರಯೋಜನ ಇಲ್ಲ. ಸಂಯಮದಿಂದ ಪ್ರಶ್ನೆ ಕೇಳಿ~ ಎಂದು ಶಾಸಕ ಡಾ.ಅಶ್ವತ್ಥನಾರಾಯಣ್ ಕಿವಿಮಾತು ಹೇಳಿದರು.
`ಸಂಜಯನಗರದ ಮುಖ್ಯ ರಸ್ತೆಯಲ್ಲಿ 2-3 ವರ್ಷಗಳಿಂದ ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದೆ.

ಆಸುಪಾಸಿನಲ್ಲಿ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಸಂಚಾರ ದಟ್ಟಣೆ ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಲಿದೆ~ ಎಂದು ಸಂಜಯನಗರದ ರಘು ಎಚ್ಚರಿಸಿದರು. `ಸದಾಶಿವನಗರದಲ್ಲೂ ಟ್ರಾಫಿಕ್ ಸಮಸ್ಯೆ ಗಂಭೀರವಾಗಿದ್ದು, ಸಂಚಾರ ದಟ್ಟಣೆಯಿಂದ ರೋಗಿಗಳು ಸಾಯುವ ಸ್ಥಿತಿ ನಿರ್ಮಾಣವಾಗಿದೆ~ ಎಂದು ಸತ್ಯಕೀರ್ತಿ ಆಕ್ರೋಶ ವ್ಯಕ್ತಪಡಿಸಿದರು.

`ಯಶವಂತಪುರದ ಸರ್ವಿಸ್ ರಸ್ತೆಯಲ್ಲಿ ಎರಡು ಕಟ್ಟಡಗಳು ತಲೆ ಎತ್ತಿದ್ದರಿಂದ ವಾಹನ ದಟ್ಟಣೆ ಉಂಟಾಗಿದೆ. ಇವುಗಳ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಮಂತ್ರಿ ಮಾಲ್‌ನ ಬಳಿ ರಸ್ತೆ ವಿಸ್ತರಣೆ ಏಕೆ ಆಗಿಲ್ಲ~ ಎಂದು ಯಶವಂತಪುರದ ಜಗನ್ನಾಥ್ ಪ್ರಶ್ನಿಸಿದರು. `ಮಲ್ಲೇಶ್ವರದ 5ನೇ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ~ ಎಂದು ಸ್ಥಳೀಯರಾದ ರಘು ಗಮನ ಸೆಳೆದರು.

`ಮತ್ತಿಕೆರೆಯಲ್ಲಿ ಹಲವು ವರ್ಷಗಳಿಂದ ಇರುವ ಬಸ್ ನಿಲ್ದಾಣವನ್ನು ಸ್ಥಳಾಂತರ ಮಾಡಲಾಗಿದೆ. ಇದರಿಂದ ಜನರಿಗೆ ತಿರುಗಾಡಲು ಕಷ್ಟವಾಗುತ್ತಿದೆ. ಸ್ಕೈ ವಾಕ್ ನಿರ್ಮಿಸಿಕೊಡಬೇಕು~ ಎಂದು ಮತ್ತಿಕೆರೆಯ ಹಿರಿಯ ನಾಗರಿಕರ ವೇದಿಕೆಯ ಉಪಾಧ್ಯಕ್ಷ ರಾಮಕೃಷ್ಣ ಒತ್ತಾಯಿಸಿದರು. `ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿ ಅನಧಿಕೃತ ಹಂಪ್ ಇದೆ. ಈ ಮಾರ್ಗದಲ್ಲಿ ದಿನಕ್ಕೆ 2 ಸಾವಿರಕ್ಕೂ ಅಧಿಕ ಬಸ್‌ಗಳು ಓಡಾಡುತ್ತಿವೆ. ಕರ್ಕಶ ಹಾರ್ನ್‌ನಿಂದಾಗಿ ಆಸುಪಾಸಿನ ಜನರಿಗೆ ತೊಂದರೆಯಾಗುತ್ತಿದೆ. ಇದರ ತೆರವಿಗೆ ಕ್ರಮ ಕೈಗೊಳ್ಳಬೇಕು~ ಎಂದು ನಾರಾಯಣ ರಾವ್ ಆಗ್ರಹಿಸಿದರು. ವೈಯಾಲಿಕಾವಲ್‌ನ ಡಾ.ಕೆ.ಸಿ.ಬಲ್ಲಾಳ್, `ಇಲ್ಲಿನ 4 ಹಾಗೂ 5ನೇ ಮುಖ್ಯ ರಸ್ತೆ  ಆಸುಪಾಸಿನಲ್ಲಿ 10 ವರ್ಷದಿಂದ ನೀರಿನ ಸಮಸ್ಯೆ ಗಂಭೀರವಾಗಿದೆ. ಜಲ ಮಂಡಳಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರೂ ಸಮಸ್ಯೆ ಬಗೆಹರಿದಿಲ್ಲ~ ಎಂದರು. `ನೀರಿನ ಸಮಸ್ಯೆ ಕುರಿತಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ನೀರಿನ ಮಟ್ಟ ಇಲ್ಲ ಎಂಬ ಸಬೂಬು ನೀಡುತ್ತಾರೆ. ಯಾರಿಗೆ ಮಟ್ಟ ಇಲ್ಲ ಎಂದು ಗೊತ್ತಾಗುತ್ತಿಲ್ಲ~ ಎಂದು ರಾಘವೇಂದ್ರ ರಾವ್ ಆಕ್ರೋಶ ವ್ಯಕ್ತಪಡಿಸಿದರು. `ಯಶವಂತಪುರದ ಮುಖ್ಯ ಗೇಟ್ ಬಳಿಯ ಮೇಲು ಸೇತುವೆಯನ್ನು ವಿಸ್ತರಿಸಬೇಕು~ ಎಂದು ಮಧುಸೂದನ್ ಒತ್ತಾಯಿಸಿದರು.

ರಾಜಾಜಿನಗರದ ಸಮರ್ಪಣಾ ವೇದಿಕೆಯ ಸದಸ್ಯರು ಸಭೆ ನಡೆಯುತ್ತಿದ್ದಾಗ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಹಾಗೂ ಸಮಿತಿಯ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಪ್ರತಿಭಟನೆ ನಿಲ್ಲಿಸಿದರು.  ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, ಉಪಮೇಯರ್ ಶ್ರೀನಿವಾಸ್, ಜಂಟಿ ಆಯುಕ್ತ (ಪಶ್ಚಿಮ ವಲಯ) ಶಂಕರ ಪಾಟೀಲ್, ಪಾಲಿಕೆ ಸದಸ್ಯರಾದ ಮಂಜುನಾಥ ರಾಜು, ಡಾ.ಶಿವಪ್ರಸಾದ್, ಜಯಪಾಲ್, ಮುನಿಸ್ವಾಮಿ ಗೌಡ, ವಿಜಯ ಕುಮಾರಿ, ಶಶಿಕಲಾ, ಚೇತನಾ ಪ್ರಫುಲ್ ಉಪಸ್ಥಿತರಿದ್ದರು. ಆಡಳಿತ ಪಕ್ಷದ ನಾಯಕ ನಾಗರಾಜ್ ಗೈರು ಹಾಜರಾಗಿದ್ದರು.

`ಖಾಸಗಿ ಟ್ಯಾಂಕರ್ ನೀರು ಪೂರೈಕೆ ನಿಯಂತ್ರಣಕ್ಕೆ ಕ್ರಮ~
`ಖಾಸಗಿ ಟ್ಯಾಂಕರ್, ಟ್ರ್ಯಾಕ್ಟರ್ ಮೂಲಕ ಪೂರೈಸುವ ಕುಡಿಯುವ ನೀರಿಗೆ ಬೆಲೆ ನಿಗದಿ ಮಾಡಿ ವಾಣಿಜ್ಯ ಪರವಾನಗಿ ನೀಡಲಾಗುವುದು~ ಎಂದು ಮೇಯರ್ ವೆಂಕಟೇಶಮೂರ್ತಿ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, `ನಗರದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಖಾಸಗಿ ಟ್ಯಾಂಕರ್‌ಗಳು ಅಧಿಕ ಬೆಲೆಗೆ ಬೋರ್‌ವೆಲ್ ನೀರನ್ನು ಬಳಸುತ್ತಿವೆ. ಇಂತಹ ಪ್ರವೃತ್ತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ~ ಎಂದರು.

`ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಸವಲತ್ತು ನೀಡಲು ನಿರ್ಧರಿಸಲಾಗಿದೆ. ರಿಕ್ಷಾ ಚಾಲಕರು ಸೇರಿದಂತೆ ಉಳಿದವರಿಗೆ ಯೋಜನೆಯನ್ನು ವಿಸ್ತರಿಸಲು ಪರಿಷತ್‌ನಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಕೈ ಮಗ್ಗ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಮುಂದಿನ ಪರಿಷತ್ ಸಭೆಯಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು~ ಎಂದರು.

`ಗುತ್ತಿಗೆದಾರರಿಂದಾಗಿ ಸಿ.ಎನ್.ಆರ್. ವೃತ್ತದ ಅಂಡರ್‌ಪಾಸ್ ಕಾಮಗಾರಿ ಎರಡೂವರೆ ವರ್ಷಗಳ ಕಾಲ ವಿಳಂಬವಾಯಿತು. ಈಗ ಎರಡನೇ ಗುತ್ತಿಗೆದಾರರನ್ನು ತೆಗೆದು ಹಾಕಿ ಒಬ್ಬರಿಗೆ ಗುತ್ತಿಗೆಯನ್ನು ಕೊಡಲಾಗಿದೆ.

ಇಲ್ಲಿನ ಎರಡು ಪರ್ಯಾಯ ರಸ್ತೆಗಳು ಜುಲೈ 15ರೊಳಗೆ ಪೂರ್ಣಗೊಳ್ಳಲಿವೆ. ಮಲ್ಲೇಶ್ವರದಲ್ಲಿ ಏಳು ಕಡೆ ಸ್ಕೈ ವಾಕ್‌ಗಳನ್ನು ನಿರ್ಮಿಸಲಾಗುವುದು. ಮಲ್ಲೇಶ್ವರದ 18ನೇ ಕ್ರಾಸ್‌ನಿಂದ ಭಾಷ್ಯಂ ಸರ್ಕಲ್ ವರೆಗೆ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು~ ಎಂದು ರಸ್ತೆ ವಿಭಾಗದ ಸೂಪರಿಂಟೆಂಡೆಂಟ್ ಎಂಜಿನಿಯರ್ ಆರ್.ಟಿ. ನಾಗರಾಜ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT