ADVERTISEMENT

ರಾಜಕಾರಣದಲ್ಲಿ ಆಸೆ ಇರಬೇಕು ದುರಾಸೆಯಲ್ಲ: ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 12:45 IST
Last Updated 10 ಜೂನ್ 2018, 12:45 IST

ಗೌರಿಬಿದನೂರು: ‘ಅಡ್ಡದಾರಿ ಮೂಲಕ ಮಾಡುವ ರಾಜಕಾರಣ ಬಹಳ ದಿನ ಉಳಿಯಲ್ಲ. ಇತ್ತೀಚೆಗೆ ಪಕ್ಷಕ್ಕೆ ಬಂದವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ನೆನ್ನೆ ಮೊನ್ನೆ ರಾಜಕೀಯಕ್ಕೆ ಬಂದವರಿಂದ ನಾನು ಪಾಠ ಕಲಿಯಬೇಕಿಲ್ಲ’ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರು ಶಾಸಕ ಡಾ.ಕೆ.ಸುಧಾಕರ್ ಅವರಿಗೆ ತಿರುಗೇಟು ನೀಡಿದರು.

ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಸಚಿವ ಸ್ಥಾನ ನೀಡಿದ್ದಾರೆ’ ಎಂದು ಇತ್ತೀಚೆಗೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರು ನೀಡಿದ್ದ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.  

‘ಕೇವಲ ಪಿಯುಸಿ ಮಾಡಿಕೊಂಡು ಎಂ.ಎ ಡಿಗ್ರಿ ಸರ್ಟಿಫಿಕೇಟ್ ಬೇಕಂದ್ರೆ ಸಿಗುತ್ತಾ..? ಅದಕ್ಕಾಗಿ ಸಾಕಷ್ಟು ಓದಬೇಕಾಗುತ್ತೆ. ಮೊದಲು ಅವರು ಎಲ್ಲಿದ್ರು? ಎಲ್ಲಿಂದ ಬಂದವರು ಅಂತ ಆತ್ಮಾವಲೋಕನ‌ ಮಾಡಿಕೊಳ್ಳಲಿ. ರಾಜಕಾರಣದಲ್ಲಿ ಆಸೆ ಇರಬೇಕು ಆದರೆ ದುರಾಸೆ ಇರಬಾರದು. ಅಧಿಕಾರ ಬೇಗ ಸಿಗಬೇಕು ಎಂಬ ಆತುರ ಇರಬಾರದು. ತಾಳ್ಮೆ ಅತ್ಯವಶ್ಯಕ’ ಎಂದು ಹೇಳಿದರು.

ADVERTISEMENT

‘ಕೇವಲ ಹಣ ಬಲದಿಂದ ಮಾತ್ರ ರಾಜಕಾರಣ ಮಾಡಿದವರಿಗೆ ಏನೇನು‌ ಗತಿ ಆಗಿದೆ ಅನ್ನೋದಕ್ಕೆ‌ ರಾಜ್ಯದಲ್ಲಿ ಸಾಕಷ್ಟು ನಿದರ್ಶನಗಳಿವೆ. ಡೋಂಗಿ ರಾಜಕಾರಣ ಬಹಳ ದಿನ ಉಳಿಯಲು ಸಾಧ್ಯವಿಲ್ಲ. ನಾನು ಕ್ಷೇತ್ರದ ಜನತೆಯ ಆಶೀರ್ವಾದದಿಂದ ಸತತವಾಗಿ ಐದು ಬಾರಿ ಶಾಸಕನಾಗಿದ್ದೇನೆ. ಸೂಕ್ತ ಅರ್ಹತೆಯಿದೆ ಆದ್ದರಿಂದ ಸಚಿವ ಸ್ಥಾನ ನೀಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.