ADVERTISEMENT

‘ರಾಜಕೀಯ ಅಸ್ತ್ರವಾಗದೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ’

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 19:30 IST
Last Updated 27 ಅಕ್ಟೋಬರ್ 2017, 19:30 IST

ಮಡಿಕೇರಿ: ‘ನಾವು ಯಾರ ರಾಜೀನಾಮೆಗೂ ಆಗ್ರಹಿಸುತ್ತಿಲ್ಲ. ಈ ಪ್ರಕರಣವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳದೆ ನ್ಯಾಯ ಸಿಗುವಂತೆ ಮಾಡಬೇಕು’

–ಇದು ಮೃತ ಡಿವೈಎಸ್‌ಪಿ ಎಂ.ಕೆ.ಗಣಪತಿ ಸಹೋದರ ಎಂ.ಕೆ.ಮಾಚಯ್ಯ ಅವರ ಮನವಿ. ಸಚಿವ ಕೆ.ಜೆ.ಜಾರ್ಜ್‌, ಇಬ್ಬರು ಐಪಿಎಸ್‌ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ‘ಪ್ರಜಾವಾಣಿ’ ಜತೆ ಮಾತನಾಡಿದರು.

‘ಗಣಪತಿ ನಿಗೂಢವಾಗಿ ಸಾವನ್ನಪ್ಪಿದ ದಿವಸ ರಾಜ್ಯದ ಜನರು ಕುಟುಂಬಕ್ಕೆ ನೈತಿಕ ಸ್ಥೈರ್ಯ ತುಂಬಿದ್ದರು. ಸಿಐಡಿ ತನಿಖೆಯಿಂದ ನ್ಯಾಯ ಸಿಗದಿದ್ದಾಗ ಜನರ ಹೋರಾಟದ ಸ್ಫೂರ್ತಿಯಿಂದಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಯಿತು’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಬಿಜೆಪಿಯು ವಿರೋಧ ಪಕ್ಷವಾಗಿ ಸಚಿವ ಕೆ.ಜೆ.ಜಾರ್ಜ್‌ ಅವರ ರಾಜೀನಾಮೆಗೆ ಆಗ್ರಹಿಸುತ್ತಿದೆ. ಆ ಸ್ಥಾನದಲ್ಲಿ ಕಾಂಗ್ರೆಸ್‌ ಇದ್ದರೂ ಅದನ್ನೇ ಮಾಡುತ್ತಿತ್ತು. ಪ್ರಕರಣವನ್ನು ರಾಜಕೀಯಗೊಳಿಸದೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ನೊಂದಿರುವ ನಮ್ಮ ತಂದೆ– ತಾಯಿಗೆ ನ್ಯಾಯ ಸಿಗುವಂತೆ ಮಾಡಬೇಕು’ ಎಂದು ಮಾಚಯ್ಯ ಕೋರಿದರು.

‘ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸಿದ್ದ ಬಿ ರಿಪೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದ್ದು, ಅದು ಸಹ ವಿಚಾರಣೆ ಹಂತದಲ್ಲಿದೆ. ಅಂತಿಮ ವಿಚಾರಣೆ ನಡೆದು, ಆದೇಶ ಬರುವಷ್ಟರಲ್ಲಿ ನ್ಯಾಯಾಧೀಶರನ್ನೂ ವರ್ಗಾವಣೆ ಮಾಡಲಾಗಿತ್ತು ಎಂದು ಹೇಳಿದರು.

‘ಅತ್ತಿಗೆ ಕೆ.ಕೆ.ಪವನಾ, ಅಣ್ಣನ ಪುತ್ರ ನೇಹಲ್‌ ನಮ್ಮ ಸಂಪರ್ಕದಲ್ಲಿ ಇಲ್ಲ. ಯಾವ ಕಾರಣದಿಂದ ಅವರು ಹಿಂದೆ ಸರಿದಿದ್ದಾರೆ ಎಂಬುದೂ ಗೊತ್ತಿಲ್ಲ. ತನಿಖೆ, ಅನ್ಯಾಯದ ಹಾದಿಯಿಂದ ನ್ಯಾಯದ ಹಾದಿಯಲ್ಲಿ ಸಾಗುತ್ತಿರುವುದು ಸಂತೋಷವಾಗಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.