ADVERTISEMENT

ರಾಜಕೀಯ ಕಬಡ್ಡಿಯಲ್ಲಿ ಒಳಹೊಡೆತ ಭಯ

ಬಸವರಾಜ ಹವಾಲ್ದಾರ
Published 23 ಏಪ್ರಿಲ್ 2013, 19:59 IST
Last Updated 23 ಏಪ್ರಿಲ್ 2013, 19:59 IST
ರಾಜಕೀಯ ಕಬಡ್ಡಿಯಲ್ಲಿ ಒಳಹೊಡೆತ ಭಯ
ರಾಜಕೀಯ ಕಬಡ್ಡಿಯಲ್ಲಿ ಒಳಹೊಡೆತ ಭಯ   

ಮಂಡ್ಯ: ಕಬಡ್ಡಿ ಆಟಕ್ಕೆ ಹೆಸರುವಾಸಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ `ರಾಜಕೀಯ ಕಬಡ್ಡಿ' ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ಎದುರಾಳಿ ತಂಡವನ್ನು `ಔಟ್' ಮಾಡಲು ಎಲ್ಲಾ ತಂಡಗಳೂ ಉತ್ತಮ ತಾಲೀಮಿನೊಂದಿಗೆ ಕಣಕ್ಕೆ ಇಳಿದಿವೆ. ಆದರೆ ಎದುರಾಳಿ ತಂಡಕ್ಕಿಂತ, ತಂಡದಲ್ಲಿದ್ದುಕೊಂಡೇ ಕಾಲೆಳೆಯುವವರ ಭೀತಿ ಬಹುತೇಕ ತಂಡಗಳನ್ನು ಕಾಡುತ್ತಿದೆ.

ಆಗೊಮ್ಮೆ, ಈಗೊಮ್ಮೆ ಪಕ್ಷೇತರ ಅಭ್ಯರ್ಥಿಗಳು ಗೆದ್ದಿರುವುದು ಬಿಟ್ಟರೆ, ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ. ಎರಡೂ ಕಡೆಯ ಸಹ ಆಟಗಾರರು ನೀಡುವ `ಒಳಹೊಡೆತ'ಗಳು ಖಂಡಿತವಾಗಿಯೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿವೆ.

ಹಣ, ಹೆಂಡ, ಬಾಡೂಟಗಳ ಭರಾಟೆಯೂ ಜೋರಾಗಿಯೇ ಇದೆ. ಪಕ್ಷಾಂತರಿಗಳ ಸುಗ್ಗಿಯೂ ತೀವ್ರವಾಗಿದೆ.  ಉತ್ತಮ ಆಟಗಾರರನ್ನು ಹುಡುಕಿ ಬಲೆ ಬೀಸುವ ಕಾರ್ಯ ಬಿರುಸು ಪಡೆದುಕೊಂಡಿದೆ.

ಕಾವೇರಿ ವಿವಾದ, ಕಬ್ಬಿನ ಬೆಲೆ-ಬಾಕಿ ಪಾವತಿ, ಕೆಆರ್‌ಎಸ್ ಬರಿದಾಗಿರುವ ವಿಷಯಗಳು ಚರ್ಚೆಯಾಗುತ್ತಿದ್ದರೂ ವೈಯಕ್ತಿಕವಾಗಿ ಒಬ್ಬರ ಮೇಲೊಬ್ಬರು ಕೆಸರೆಚುವ ಆಟವೇ ಜೋರಾಗಿದೆ.

ಎಲ್ಲರ ಗಮನ
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ನಟ, ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್ ಸ್ಪರ್ಧಿಸಿದ್ದಾರೆ. ಹೀಗಾಗಿ ಈ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಅವರ ವಿರುದ್ಧ ಹ್ಯಾಟ್ರಿಕ್ ಗೆಲುವಿಗಾಗಿ ಜೆಡಿಎಸ್‌ನಿಂದ ಶಾಸಕ ಎಂ.ಶ್ರೀನಿವಾಸ್ ಸ್ಪರ್ಧಿಸಿದ್ದಾರೆ. ಜೆಡಿಎಸ್‌ನಿಂದ ಅಶೋಕ್ ಜಯರಾಂ ಬಂಡಾಯ ಅಭ್ಯರ್ಥಿಯಾಗಿರುವುದು ಜೆಡಿಎಸ್‌ಗೆ ಮೈನಸ್ ಪಾಯಿಂಟ್ ಆಗಿದೆ.

ಅಂಬರೀಷ್ ಅವರು ಯುವ ಹಾಗೂ ಮಹಿಳಾ ಮತದಾರರನ್ನು ಸೆಳೆಯುತ್ತಿದ್ದಾರೆ. ವಿವಿಧ ಪಕ್ಷದ ಮುಖಂಡರನ್ನೂ ತಮ್ಮ ತೆಕ್ಕೆಗೆ ಸೆಳೆದುಕೊಳ್ಳುತ್ತಿದ್ದಾರೆ. ಜೆಡಿಎಸ್‌ನಲ್ಲಿ ಮನಸ್ಸುಗಳು ಒಡೆದಿದ್ದು, ದಾರಿ ಇಬ್ಭಾಗವಾಗಿದೆ. ಜತೆಗೆ ಜೆಡಿಎಸ್‌ಗೆ ಆಡಳಿತ ವಿರೋಧಿ ಅಲೆಯೂ ಸೇರಿಕೊಂಡರೆ ಕಷ್ಟ. ಕಾಂಗ್ರೆಸ್‌ನಲ್ಲಿಯೂ ಎಲ್ಲವೂ ಸರಿಯಾಗಿಲ್ಲ.

ನಾಗಮಂಗಲದಲ್ಲಿ ಜಿದ್ದಾಜಿದ್ದಿ ನಾಗಮಂಗಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಕೆ. ಸುರೇಶ್‌ಗೌಡ, ಜೆಡಿಎಸ್ ಅಭ್ಯರ್ಥಿ ಸಂಸದ ಎನ್. ಚಲುವರಾಯಸ್ವಾಮಿ ನಡುವೆ ನೇರ ಜಿದ್ದಾಜಿದ್ದಿ.

ಕೆ.ಸುರೇಶ್‌ಗೌಡರೊಂದಿಗೆ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಅವರೂ ಸೇರಿಕೊಂಡಿರುವುದು ಬಲ ತಂದಿದೆ. ಹಿಂದಿನ ಚುನಾವಣೆಗಳನ್ನು ನೋಡಿದರೆ ಶಿವರಾಮೇಗೌಡ ಚಿತ್ತ ಎತ್ತ ಎಂದು ಹೇಳುವುದು ಕಷ್ಟ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಶಾಸಕ ಹಾಗೂ ಸಂಸದರಿಬ್ಬರೂ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದು, ಅಭಿವೃದ್ಧಿಯ ಹೆಸರಿನಲ್ಲಿಯೇ ಮತಯಾಚಿಸುತ್ತಿದ್ದಾರೆ. ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಲಿವೆ.

ಮೇಲು'ಕೋಟೆ' ಯಾರಿಗೆ?
ಮೇಲುಕೋಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕ ಸಿ.ಎಸ್. ಪುಟ್ಟರಾಜು ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದಾರೆ. ಅದಕ್ಕೆ ತಡೆಯೊಡ್ಡಲು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಕೆ.ಎಸ್. ಪುಟ್ಟಣ್ಣಯ್ಯ ಮುಂದಾಗಿದ್ದಾರೆ.  ಕಾಂಗ್ರೆಸ್ ಅಭ್ಯರ್ಥಿ ಎಲ್.ಡಿ. ರವಿ ಪಡೆಯುವ ಮತಗಳು ಇವರಿಬ್ಬರ ನಡುವಿನ ಗೆಲುವು ನಿರ್ಧಾರವಾಗಲಿದೆ.

ಈ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಬಿರುಸಾಗಿದೆ. ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣದಲ್ಲಿ ಕೆಜೆಪಿ ರೈತ ನಾಯಕರನ್ನು ಬೆಂಬಲಿಸಿರುವುದರ ಲಾಭದ ಪ್ರಮಾಣ ಮತಪೆಟ್ಟಿಗೆಯಲ್ಲಿ ಗೊತ್ತಾಗಲಿದೆ. ಕೊನೆ ದಿನಗಳಲ್ಲಿ ಚುನಾವಣಾ ತಂತ್ರಗಳನ್ನು ಸಮರ್ಥವಾಗಿ ಬಳಸುವವರಿಗೇ ಗೆಲುವು ದಕ್ಕುವ ಸಾಧ್ಯತೆಗಳೇ ಅಧಿಕವಾಗಿವೆ.

ಬಡಾಯದ ಬಿಸಿ
ಮದ್ದೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬೀಗ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಶಾಸಕಿಯಾಗಿದ್ದ ಕಲ್ಪನಾ ಸಿದ್ದರಾಜು ಪಕ್ಷೇತರ ಅಭ್ಯರ್ಥಿಯಾಗಿ ಬಂಡಾಯ ಸಾರಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಮಧು ಮಾದೇಗೌಡ ಸ್ಪರ್ಧಿಸಿದ್ದು, ಅವರ ತಂದೆ ಮಾಜಿ ಸಂಸದ ಜಿ. ಮಾದೇಗೌಡರ ಪ್ರಭಾವ ನೆರವಿಗೆ ಬರಬಹುದು. ಡಿ.ಸಿ. ತಮ್ಮಣ್ಣ ಅವರ ವಿರುದ್ಧದ ಶಕ್ತಿಗಳು ಕ್ಷೇತ್ರದಲ್ಲಿ ಬಹಳಷ್ಟಿವೆ.

ಆದರೆ ಅವುಗಳು ಒಂದಾಗದಿರುವುದೇ ತಮ್ಮಣ್ಣ ಅವರ ಪ್ಲಸ್ ಪಾಯಿಂಟ್. ಕಲ್ಪನಾ ಅವರು ಹೆಚ್ಚು  ಮತ ಪಡೆದಷ್ಟು ತಮ್ಮಣ್ಣ ಅವರ ಹಾದಿ ಕಷ್ಟಕರವಾಗಲಿದೆ.

ಲಾಭ ಯಾರಿಗೆ?
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಅಂಬರೀಷ್ ಬೆಂಬಲಿಗ ಎಸ್.ಎಲ್.ಲಿಂಗರಾಜು ಸ್ಪರ್ಧಿಸಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ರವೀಂದ್ರ ಶ್ರೀಕಂಠಯ್ಯ ಕಣಕ್ಕೆ ಇಳಿದಿರುವುದು ಕಾಂಗ್ರೆಸ್‌ನ ತಲೆನೋವು ಹೆಚ್ಚಿಸಿದೆ.

ಸರ್ವೋದಯ ಕರ್ನಾಟಕ ಪಕ್ಷದಿಂದ ಕೆ.ಎಸ್. ನಂಜುಂಡೇಗೌಡ ಕಣದಲ್ಲಿದ್ದಾರೆ. ಐದು ಬಾರಿ ಅವರು ಸೋತಿರುವುದು ಅನುಕಂಪವಾಗಿ ಪರಿವರ್ತನೆಯಾದರೆ ಅವರಿಗೆ ಲಾಭವಾಗಲಿದೆ. ಕಾಂಗ್ರೆಸ್‌ನಲ್ಲಿನ ಬಂಡಾಯದ ಲಾಭ ಯಾರಿಗೆ ದಕ್ಕಲಿದೆ ಕಾದು ನೋಡಬೇಕು.

ಗೊಂದಲದ ಗೂಡು
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಮಳವಳ್ಳಿ ಗೊಂದಲದ ಗೂಡಾಗಿದೆ. ಕಾಂಗ್ರೆಸ್‌ನಿಂದ ನರೇಂದ್ರಸ್ವಾಮಿ, ಜೆಡಿಎಸ್‌ನಿಂದ ಡಾ.ಅನ್ನದಾನಿ ಸ್ಪರ್ಧಿಸಿದ್ದಾರೆ. ಇವರೊಂದಿಗೆ ಜೆಡಿಯುನಿಂದ ಮಾಜಿ ಮಂತ್ರಿ ಬಿ. ಸೋಮಶೇಖರ್, ಕೆಜೆಪಿಯಿಂದ ಮುನಿರಾಜು, ಬಿಎಸ್‌ಪಿಯಿಂದ ಕೃಷ್ಣಮೂರ್ತಿ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಡಾ.ಮೂರ್ತಿ, ಸಿಪಿಎಂನಿಂದ ಬಸವರಾಜು ಸ್ಪರ್ಧಿಸಿದ್ದಾರೆ.
ಹತ್ತು ಸಾವಿರದಷ್ಟು ಮತ ಪಡೆಯುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಮತಗಳು ಹಂಚಿ ಹೋಗಲಿವೆ. ಇದರ ಪರಿಣಾಮ ಮುಂಚೂಣಿಯಲ್ಲಿರುವ ಯಾವ ಅಭ್ಯರ್ಥಿಯ ಮೇಲಾಗುವುದೋ ಗೊತ್ತಿಲ್ಲ.

ಅನ್ನದಾನಿ ಪರವಾಗಿ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಪ್ರಚಾರ ನಡೆಸಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಸೌಭಾಗ್ಯ ಮಹದೇವಯ್ಯ ಅವರನ್ನು ಸೆಳೆದುಕೊಳ್ಳುವ ಮೂಲಕ ನರೇಂದ್ರಸ್ವಾಮಿ ತಮ್ಮ ಬಲ ಹೆಚ್ಚಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಮೂಲಕ ಕುರುಬ ಸಮುದಾಯ ಮತಗಳಿಗೆ ಕಾಂಗ್ರೆಸ್ ಲಗ್ಗೆ ಹಾಕಲು ಯತ್ನಿಸುತ್ತಿದೆ.

ಪೇಟೆಯಲ್ಲಿ ತ್ರಿಕೋನ ಸ್ಪರ್ಧೆ
ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಕೆ.ಬಿ. ಚಂದ್ರಶೇಖರ್ ಸ್ಪರ್ಧಿಸಿದ್ದರೆ, ಜೆಡಿಎಸ್‌ನಿಂದ ಕೆ.ಸಿ. ನಾರಾಯಣಗೌಡ ಕಣಕ್ಕೆ ಇಳಿದಿದ್ದಾರೆ. ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಹಿರಿಯ ರಾಜಕಾರಣಿ, ಮಾಜಿ ಸ್ಪೀಕರ್ ಕೃಷ್ಣ ಸ್ಪರ್ಧಿಸಿರುವುದು ಜೆಡಿಎಸ್ ಅಭ್ಯರ್ಥಿಯ ತಲೆನೋವು ಹೆಚ್ಚಿಸಿದೆ. ಸದ್ಯಕ್ಕೆ ಇದು ಕಾಂಗ್ರೆಸ್ ಅಭ್ಯರ್ಥಿಗೆ ಆಗಿರುವ ಪ್ಲಸ್ ಪಾಯಿಂಟ್. ಆದರೆ ಅಲ್ಲಿಯೂ ಒಳಹೊಡೆತಗಳ ಅಪಾಯವಿದ್ದು, ಆ ಹೊಡೆತ ಜೋರಾದರೆ ಗೆಲುವಿನ ಹಾದಿ ದುರ್ಗಮವಾಗಲಿದೆ.

ಉತ್ತಮ ವ್ಯಕ್ತಿಗೆ ಟಿಕೆಟ್ ನೀಡಲಿಲ್ಲ ಎಂದು ಕೃಷ್ಣ ಪರ ಈಗ ಕಾಣಿಸಿಕೊಂಡಿರುವ ಅನುಕಂಪ ಕಡೆಯವರೆಗೂ ಉಳಿದು ಮತ ರೂಪದಲ್ಲಿ ಪರಿವರ್ತನೆಯಾದರೆ ಉಳಿದವರ ಸಂಕಷ್ಟ ಹೆಚ್ಚಾಗಲಿದೆ.

ಪಕ್ಷದೊಳಗಿನವರು ನೀಡುವ `ಒಳಹೊಡೆತ' ಬಹುತೇಕ ಕ್ಷೇತ್ರಗಳಲ್ಲಿನ ಫಲಿತಾಂಶದಲ್ಲಿ ನಿರ್ಣಾಯಕ ಸ್ಥಾನ ನಿರ್ವಹಿಸಲಿದೆ. ಕೊನೆಗಳಿಗೆಯಲ್ಲಿ ಅಭ್ಯರ್ಥಿಗಳೇ ನಿಷ್ಠೆ ಬದಲಿಸಿದ ಉದಾಹರಣೆಗಳು ಜಿಲ್ಲೆಯ ಚುನಾವಣಾ ಇತಿಹಾಸದ ಪುಟದಲ್ಲಿ ದಾಖಲಾಗಿವೆ. ಅದು ಪುನರಾವರ್ತನೆಯಾದರೆ ಫಲಿತಾಂಶ ಏರುಪೇರಾಗಲಿದೆ.

ಮತದಾನಕ್ಕೆ ಇನ್ನೂ ಹತ್ತು ದಿನಗಳಿವೆ. ದಿನದಿಂದ ದಿನಕ್ಕೆ ಚಿತ್ರಣ ಬದಲಾಗುತ್ತೆ. ಈಗಲೇ ಏನನ್ನೂ ಹೇಳುವುದು ಕಷ್ಟ ಎನ್ನುವುದು ಬಹಳಷ್ಟು ಮತದಾರರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.