ADVERTISEMENT

ರಾಜಕೀಯ ಪ್ರವೇಶ ಅಪರಾಧವೇನಲ್ಲ

ಗೀತಾ ಸ್ಪರ್ಧೆಗೆ ಶಿವರಾಜ್‌ಕುಮಾರ್‌ ಬೆಂಬಲ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಬೆಂಗಳೂರು: ‘ಪತ್ನಿ ಗೀತಾ ಶಿವರಾಜ್‌­­ಕುಮಾರ್‌ ಅವರು ಲೋಕಸಭೆ ಚುನಾ­ವಣೆಗೆ ಸ್ಪರ್ಧಿಸಲು ಸಂಪೂರ್ಣ ಬೆಂಬಲ­ವಿದೆ.  ಅವರ ಸ್ಪರ್ಧೆ ಮಾರ್ಚ್‌ 17 ರಂದು ಖಚಿತವಾಗುತ್ತದೆ’ ಎಂದು ನಟ ಶಿವರಾಜ್‌ಕುಮಾರ್‌ ಹೇಳಿದರು.

ಮಣಿಪಾಲ್‌ ಆಸ್ಪತ್ರೆಯಲ್ಲಿ ಮಂಗಳ­ವಾರ ‘ವಿಶ್ವ ಕಿಡ್ನಿ ದಿನಾಚರಣೆ’ ಅಂಗ­ವಾಗಿ ಅಭಿಯಾನ ಹಾಗೂ ವಾಕ್‌­ಥಾನ್‌ಗೆ ಚಾಲನೆ ನೀಡಿದ ನಂತರ ಸುದ್ದಿ­ಗಾರ­ರೊಂದಿಗೆ ಅವರು  ಮಾತನಾಡಿದರು.

‘ರಾಜಕೀಯ ಅಪರಾಧವೇನೂ ಅಲ್ಲ. ರಾಜಕೀಯ ಪ್ರವೇಶ ತಪ್ಪೇನೂ ಅಲ್ಲ. ಗೀತಾಗೆ ಅವಕಾಶ ಬಂದಿದೆ. ಸ್ಪರ್ಧಿಸಲಿ. ಅವರ ಸ್ಪರ್ಧೆಗೆ ನನ್ನ ಅಥವಾ ನಮ್ಮ ಕುಟುಂಬದ ಯಾರ ಅಭ್ಯಂತರವೂ ಇಲ್ಲ’ ಎಂದರು.

‘ಅವರ ತಾಯಿಗೆ ರಾಜಕೀಯದಲ್ಲಿ ಆಸಕ್ತಿಯಿದೆ. ಆದರೆ, ಅವರಿಗೆ ಆರೋಗ್ಯ ಸರಿಯಿಲ್ಲ. ಇದರಿಂದ, ಮಗಳು ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂಬ ಆಸೆಯಿದೆ. ಅವರ ಆಸೆಯನ್ನು ಈಡೇರಿಸಲು ಗೀತಾ ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ ಏನೂ ರಾಜಕೀಯವಿಲ್ಲ ಮತ್ತು ಸ್ವಾರ್ಥವಿಲ್ಲ’ ಎಂದು ಹೇಳಿದರು.

‘ನನ್ನ ಮದುವೆಯಾದಾಗ,  ನನ್ನ ಮಾವ ಬಂಗಾರಪ್ಪನವರು ರಾಜಕೀಯ­ದಲ್ಲಿ ಉತ್ತುಂಗದಲ್ಲಿದ್ದರು. ರಾಜಕೀಯ ಮನೆತನದಿಂದ ಹೆಣ್ಣು ತಂದರೂ ನಾವು 27 ವರ್ಷದಿಂದ ಚೆನ್ನಾಗಿ ಸಂಸಾರ ಮಾಡಿದ್ದೇವೆ. ನಮ್ಮ ಕುಟುಂಬದಲ್ಲಿ ಯಾರಿಗೆ ಏನು ಇಷ್ಟವೋ ಅದನ್ನು ಮಾಡಲು ಪ್ರೋತ್ಸಾಹ ನೀಡುತ್ತೇವೆ. ಅದರಂತೆ, ನಮ್ಮ ಒಬ್ಬ ಮಗಳು ವೈದ್ಯೆಯಾಗಿದ್ದಾಳೆ.

ಇನ್ನೊಬ್ಬಳಿಗೆ ನಟನೆ ಇಷ್ಟ. ಗೀತಾ ರಾಜಕೀಯಕ್ಕೆ ಬರಲು ಇಷ್ಟ­ಪಡುತ್ತಿದ್ದಾರೆ. ಅವರಿಗೆ ನನ್ನ ಬೆಂಬಲವಿದೆ’ ಎಂದು ಹೇಳಿದರು.

‘ನನಗೆ ಆ ಪಕ್ಷ ಅಥವಾ ಈ ಪಕ್ಷ ಎಂಬುದಿಲ್ಲ. ಗೀತಾ ಚುನಾವಣೆಗೆ ಸ್ಪರ್ಧಿಸಿದರೆ ಪ್ರಚಾರ ನಡೆಸ­ಬೇಕಾಗುತ್ತದೆ. ಆದರೆ ಅದರ ಕುರಿತು ಯೋಚನೆ ಮಾಡಿಲ್ಲ’ ಎಂದರು.

ಪಕ್ಷ ಹೇಳಿದರೆ ಸ್ಪರ್ಧೆಗೆ ಸಿದ್ಧ: ಕುಮಾರ್‌ ಬಂಗಾರಪ್ಪ
ಶಿವಮೊಗ್ಗ:
‘ಪಕ್ಷ ಸೂಚಿಸಿದರೆ ಸ್ಪರ್ಧಿಸಲು ಸಿದ್ಧನಿದ್ದೇನೆ. ಇಲ್ಲವಾದರೆ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ­ದರೂ ಅವರ ಪರ ಕೆಲಸ ಮಾಡುತ್ತೇನೆ’ ಎಂದು ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ ಭೇಟಿ­ಯಾದ ಸುದ್ದಿಗಾರರೊಂದಿಗೆ ಮಾತ­ನಾ­ಡಿದ ಅವರು, ‘ಜೆಡಿಎಸ್‌ ತತ್ವ, ಸಿದ್ಧಾಂತ ಇಲ್ಲದ ಪಕ್ಷ. ಹೀಗಾಗಿ ಅವರನ್ನು ಯಾರನ್ನು ಬೇಕಾದರೂ ಚುನಾವಣೆಗೆ ಕರೆತರುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ನಮ್ಮ ಆಕ್ಷೇಪಣೆ ಏನೂ ಇಲ್ಲ. ಯಾವ ಪಕ್ಷ ಹಾಗೂ ವ್ಯಕ್ತಿಗೆ ಮತ ನೀಡ­ಬೇಕು ಎನ್ನುವುದು ಜನ ನಿರ್ಧರಿಸುತ್ತಾರೆ’ ಎಂದರು.

‘ಲೋಕಸಭಾ ಚುನಾವಣೆ ಸಾರ್ವತ್ರಿಕವಾಗಿದ್ದು, ಸಂವಿಧಾನಾತ್ಮಕವಾಗಿ ನಡೆ­ಯುತ್ತದೆ. ಇದು ಕೇವಲ ಕುಟುಂಬಗಳ ನಡುವಿನ ಹೋರಾಟವಲ್ಲ’ ಎಂದು ಅವರು ಮಾರ್ಮಿಕವಾಗಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.